ADVERTISEMENT

ಪುಲ್ವಾಮಾ: ಪೊಲೀಸ್‌ ಅಧಿಕಾರಿ ಮನೆ ಮೇಲೆ ಉಗ್ರರ ದಾಳಿ, ಮೂವರ ಸಾವು

ಪಿಟಿಐ
Published 28 ಜೂನ್ 2021, 5:58 IST
Last Updated 28 ಜೂನ್ 2021, 5:58 IST
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)   

ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಪ್ರದೇಶದ ಹರಿಪರಿಗಾಂವ್‌ನಲ್ಲಿ ಭಾನುವಾರ ರಾತ್ರಿ ಉಗ್ರರು ಪೊಲೀಸ್‌ ಅಧಿಕಾರಿಯೊಬ್ಬರ ಮನೆ ಮೇಲೆ ಗುಂಡಿನ ದಾಳಿ ನಡೆಸಿದ್ದು, ಪೊಲೀಸ್‌ ಅಧಿಕಾರಿ, ಅವರ ಪತ್ನಿ ಮತ್ತು ಮಗಳು ಮೃತಪಟ್ಟಿದ್ದಾರೆ.

ಜಮ್ಮು ವಿಮಾನ ನಿಲ್ದಾಣದಲ್ಲಿರುವ ಭಾರತೀಯ ವಾಯು ಪಡೆ ಕೇಂದ್ರವೊಂದರ ಮೇಲೆ ಭಾನುವಾರ ಡ್ರೋನ್‌ ಮೂಲಕ ದಾಳಿ ನಡೆದಿತ್ತು. ಇದರ ಬೆನ್ನಲ್ಲೇ ಪುಲ್ವಾಮಾದಲ್ಲಿ ಉಗ್ರರ ಚಟುವಟಿಕೆ ಬೆಳಕಿಗೆ ಬಂದಿದೆ.

ಭಾನುವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ಅವಂತಿಪೊರಾದ ಹರಿಪರಿಗಾಂವ್‌ನಲ್ಲಿರುವ ಪೊಲೀಸ್ ವಿಶೇಷಾಧಿಕಾರಿ ಫಯಾಜ್ ಅಹ್ಮದ್ ಅವರ ನಿವಾಸಕ್ಕೆ ನುಗ್ಗಿದ ಉಗ್ರರು ಗುಂಡಿನ ದಾಳಿ ನಡೆಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ದಾಳಿಯಲ್ಲಿ ಫಯಾಜ್‌ ಅವರ ಪತ್ನಿ ರಾಜಾ ಬೇಗಂ ಮತ್ತು ಮಗಳು ರಫಿಯಾಗೆ ಗಂಭೀರ ಗಾಯಗಳಾಗಿತ್ತು. ಈ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ತಲುಪುವ ಮುನ್ನವೇ ಪೊಲೀಸ್‌ ಅಧಿಕಾರಿ ಮೃತಪಟ್ಟಿದ್ದರು.

ಇನ್ನುಳಿದ ಇಬ್ಬರನ್ನು ಅನಂತನಾಗ್‌ನ ಸರ್ಕಾರಿ ವೈದ್ಯಕೀಯ ಕಾಲೇಜ್‌ಗೆ (ಜಿಎಂಸಿ) ವರ್ಗಾಯಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರಿಬ್ಬರೂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಈ ದಾಳಿಯ ನಡೆದ ಕೆಲವೇ ಕ್ಷಣಗಳಲ್ಲಿಭದ್ರತಾಪಡೆಗಳು ಸ್ಥಳವನ್ನು ಸುತ್ತುವರಿದು ಉಗ್ರರಿಗಾಗಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ.

ರಾಜಕೀಯ ಪಕ್ಷಗಳ ಖಂಡನೆ

ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಪಕ್ಷಗಳು ದಾಳಿಗೆ ಖಂಡನೆ ವ್ಯಕ್ತಪಡಿಸಿದ್ದು, ‘ಇದು ಹೇಡಿತನದ ಕೃತ್ಯ ಮತ್ತು ಭಯೋತ್ಪಾದನೆಯ ಒಂದು ರೂಪ’ ಎಂದು ಹೇಳಿವೆ.

‘ಈ ರೀತಿಯ ಅಪಾಯಕಾರಿ, ಹೇಡಿತನದ ಕೃತ್ಯವನ್ನು ನಾನು ಖಂಡಿಸುತ್ತೇನೆ. ಈ ಕಷ್ಟದ ಸಂದರ್ಭದಲ್ಲಿ ಅವರ ಕುಟುಂಬದವರಿಗೆ ದೇವರು ಶಕ್ತಿ ನೀಡಲಿ’ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಒಮರ್ ಅಬ್ದುಲ್ಲಾ ಟ್ವೀಟ್‌ ಮಾಡಿದ್ದಾರೆ.

ಸಂತಾಪ ಸೂಚಿಸಿರುವ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು,‘ ಈ ಹೇಡಿ ಕೃತ್ಯವನ್ನು ಖಂಡಿಸಲು ಶಬ್ಧಗಳೇ ಸಾಕಾಗುವುದಿಲ್ಲ’ ಎಂದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ವಕ್ತಾರ ಅಲ್ತಾಫ್‌ ಠಾಕೂರ್‌ ಮತ್ತು ಪೀಪಲ್ಸ್‌ ಕಾನ್ಫರೆನ್ಸ್‌ ಅಧ್ಯಕ್ಷ ಸಜಾದ್‌ ಲೋನ್‌ ಅವರೂ ಕಂಬನಿ ಮಿಡಿದಿದ್ದಾರೆ.

‘ಈ ದಾಳಿಯನ್ನು ನಾವೆಲ್ಲರೂ ಖಂಡಿಸಬೇಕು. ಈ ರೀತಿಯ ಹೇಯ ಕೃತ್ಯವೆಸಗಿದವರಿಗೆ ಶಿಕ್ಷೆಯಾಗಬೇಕು. ಅಧಿಕಾರಿಯ ಪತ್ನಿ ಮತ್ತು ಮಗಳ ತಪ್ಪೇನಿತ್ತು?’ ಎಂದು ಅಲ್ತಾಫ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.