ADVERTISEMENT

ಬಿಹಾರದಲ್ಲಿ ಶೇ20 ಮತದಾರರ ಹಕ್ಕು ಕಸಿಯಲು ಇ.ಸಿ ಪಿತೂರಿ: ಕಾಂಗ್ರೆಸ್‌

ಪಿಟಿಐ
Published 3 ಜುಲೈ 2025, 16:01 IST
Last Updated 3 ಜುಲೈ 2025, 16:01 IST
ಪವನ್‌ ಖೇರಾ
ಪವನ್‌ ಖೇರಾ   

ನವದೆಹಲಿ: ‘ಚುನಾವಣಾ ಆಯೋಗವು ಬಿಹಾರದಲ್ಲಿ ಮತದಾರರ ಪಟ್ಟಿಯನ್ನು ವಿಶೇಷ ಪರಿಶೀಲನೆಗೆ (ಎಸ್‌ಐಆರ್‌) ಒಳಪಡಿಸುವ ಮೂಲಕ ಶೇಕಡ 20ರಷ್ಟು ಮತದಾರರ ಹಕ್ಕನ್ನು ಕಸಿಯಲು ಪಿತೂರಿ ನಡೆಸಿದೆ’ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಕಾಂಗ್ರೆಸ್‌ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥರಾದ ಪವನ್‌ ಖೇರಾ ಅವರು ಗುರುವಾರ ‍ಪತ್ರಿಕಾಗೋಷ್ಟಿಯಲ್ಲಿ ಈ ಆರೋಪ ಮಾಡಿದ್ದಾರೆ. ಅಲ್ಲದೇ, ಚುನಾವಣಾ ಅಧಿಕಾರಿಗಳು ಸಂವಿಧಾನಕ್ಕೆ ಮತ್ತು ಮತದಾರರಿಗೆ ಸೇವಕರಾಗಿರಬೇಕೇ ವಿನಃ ಬಿಜೆಪಿಗೆ ಅಲ್ಲ ಎಂದೂ ಕಿಡಿಕಾರಿದ್ದಾರೆ.

ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿರುವಂತೆಯೇ ಬಿಹಾರದಲ್ಲಿ ಮತದಾರರ ಪಟ್ಟಿ ಪರಿಶೀಲನೆಗೆ ಆಯೋಗ ಮುಂದಾಗಿರುವ ಬಗ್ಗೆ ಇಂಡಿಯಾ ಒಕ್ಕೂಟದ ಹಲವು ನಾಯಕರು ಆಕ್ಷೇಪ ವ್ಯಕ್ತಪಡಿಸಿ, ಆಯೋಗದ ಅಧಿಕಾರಿಗಳನ್ನು ಬುಧವಾರ ಭೇಟಿಮಾಡಿದ್ದರು. ಬೆನ್ನಲ್ಲೇ ಕಾಂಗ್ರೆಸ್‌ ಪತ್ರಿಕಾಗೋಷ್ಠಿ ನಡೆಸಿ, ಆಯೋಗದ ವಿರುದ್ಧ ಹರಿಹಾಯ್ದಿದೆ.

ADVERTISEMENT

ಬಿಹಾರದಲ್ಲಿ ಎಸ್‌ಐಆರ್‌ ಪ್ರಕ್ರಿಯೆಯನ್ನು ಆಯೋಗ ಕೂಡಲೇ ಕೈ ಬಿಡಬೇಕು. ಆಯೋಗದ ನಡೆಯಿಂದ ಪ್ರಜಾಪ್ರಭುತ್ವದ ಪ್ರಕ್ರಿಯೆಗಳಿಗೆ ಅಪಾಯ ಎದುರಾಗಿದೆ. ಈ ಬೆಳವಣಿಗೆ ಪ್ರತಿಪಕ್ಷಗಳಿಗೆ ಮಾತ್ರ ಅಪಾಯ ತರುವುದಲ್ಲ, ಪ್ರತಿಯೊಬ್ಬ ಮತದಾರನಿಗೂ ಅಪಾಯ ತರುತ್ತವೆ ಎಂದು ಖೇರಾ ಹೇಳಿದ್ದಾರೆ. 

‘ಆಯೋಗದ ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿದ ಬಳಿಕ ನಾವು ತಪ್ಪಾದ ಸ್ಥಳಕ್ಕೆ ದೂರನ್ನು ಕೊಂಡೊಯ್ದಿದ್ದೇವೆ ಎಂದು ಭಾಸವಾಗುತ್ತಿದೆ. ಚುನಾವಣಾ ಆಯೋಗಕ್ಕೆ ಅದರದ್ದೇ ಆದ ‍ಪ್ರತ್ಯೇಕ ಕಟ್ಟಡವೇ ಬೇಕಿಲ್ಲ. ಬಿಜೆಪಿ ಅತ್ಯಂತ ದೊಡ್ಡ ಕಟ್ಟಡವನ್ನು ಹೊಂದಿದೆ ಆಯೋಗದ ಅಧಿಕಾರಿಗಳು ಕೂಡ ಅಲ್ಲಿಯೇ ಕೂರಬಹುದು’ ಎಂದು ಖೇರಾ ಲೇವಡಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.