ನವದೆಹಲಿ/ಪಟ್ನಾ: ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು, ಬಿಜೆಪಿ ಜೊತೆ ಸೇರಿ ಬಿಹಾರದಲ್ಲಿ ಮತ್ತೆ ಸರ್ಕಾರ ರಚಿಸಲಿದೆ ಎಂಬ ವದಂತಿ ದಟ್ಟವಾಗಿದೆ. ರಾಜ್ಯದಲ್ಲಿ ನಡೆದ ಕೆಲ ಕ್ಷಿಪ್ರ ಬೆಳವಣಿಗೆಗಳು ಇಂತಹ ಊಹಾಪೋಹಗಳಿಗೆ ಪುಷ್ಟಿ ನೀಡುವಂತಿವೆ.
ನಿತೀಶ್ ಕುಮಾರ್ ಅವರು ರಾಜ್ಯಪಾಲರನ್ನು ಭೇಟಿ ಮಾಡಿ, ಚರ್ಚೆ ನಡೆಸಿದ್ದಲ್ಲದೇ, ಆರ್‌ಜೆಡಿಯ ಮೂವರು ಸಚಿವರ ಖಾತೆಗಳನ್ನು ಬದಲಿಸಿದ್ದಾರೆ. ಇನ್ನೊಂದೆಡೆ, ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಹಾಗೂ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆ ತುರ್ತು ಸಭೆಗಳನ್ನು ನಡೆಸಿದ್ದಾರೆ. ಈ ಬೆಳವಣಿಗೆಗಳು, ರಾಜ್ಯದಲ್ಲಿ ‘ಮಹಾಘಟ ಬಂಧನ’ದ ಜೊತೆಗಿನ ಮೈತ್ರಿಯನ್ನು ಕಡಿದುಕೊಳ್ಳಲು ಜೆಡಿಯು ಮುಂದಾಗಿರುವುದರ ಸೂಚನೆ ಎಂದೇ ವಿಶ್ಲೇಷಿಸಲಾಗುತ್ತಿದೆ.
‘ಇಂಡಿಯಾ’ ಮೈತ್ರಿಕೂಟದಲ್ಲಿನ ಇತ್ತೀಚಿನ ಕೆಲ ಬೆಳವಣಿಗೆಗಳಿಂದ ನಿತೀಶ್ ಕುಮಾರ್ ಬೇಸರಗೊಂಡಿದ್ದರು. ಅದರಲ್ಲೂ, ‘ಇಂಡಿಯಾ‘ದ ಸಂಚಾಲಕ ಅಥವಾ ಪ್ರಧಾನಿ ಅಭ್ಯರ್ಥಿಯನ್ನಾಗಿ ತಮ್ಮ ಹೆಸರನ್ನು ಘೋಷಣೆ ಮಾಡದಿರುವುದು ಅವರ ಬೇಸರಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ವಿಪಕ್ಷಗಳ ಒಕ್ಕೂಟದ ಸಂಚಾಲಕ ಅಥವಾ ಪ್ರಧಾನಿ ಅಭ್ಯರ್ಥಿಯಾಗಿ ನಿತೀಶ್ ಕುಮಾರ್ ಅವರ ಹೆಸರನ್ನೇ ಘೋಷಿಸಲು ಜನವರಿ ಆರಂಭದಲ್ಲಿ ‘ಇಂಡಿಯಾ’ ಮೈತ್ರಿಕೂಟದ ನಾಯಕರು ನಿರ್ಧರಿಸಿದ್ದರು. ಆದರೆ, ಇಂತಹ ನಡೆಗೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರಿಂದ ಆಕ್ಷೇಪ ವ್ಯಕ್ತವಾಗಬಹುದು ಎಂಬ ಭೀತಿಯಿಂದ ಘೋಷಣೆ ಮಾಡಲಿಲ್ಲ ಎಂದು ಹೇಳಲಾಗುತ್ತಿದೆ.
ಇನ್ನು, ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಿತೀಶ್ ಕುಮಾರ್, ಕುಟುಂಬ ರಾಜಕಾರಣವನ್ನು ಟೀಕಿಸಿದ್ದರು. ಇದು ಆರ್‌ಜೆಡಿ ಮತ್ತು ಲಾಲು ಪ್ರಸಾದ್ ಅವರ ಮೇಲಿನ ದಾಳಿಯೇ ಎಂದು ವ್ಯಾಖ್ಯಾನಿಸಲಾಗಿತ್ತು. ನಿತೀಶ್ ಕುಮಾರ್ ಅವರ ಈ ಮಾತು, ‘ಮಹಾಘಟ ಬಂಧನ’ದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಪ್ರಬಲ ಸಂದೇಶ ರವಾನಿಸಿತ್ತು.
ಲಾಲು ಪ್ರಸಾದ್ ಮಕ್ಕಳಾದ ತೇಜಸ್ವಿ, ತೇಜ್ ಪ್ರತಾಪ್ ಯಾದವ್ ಹಾಗೂ ಮೀಸಾ ಭಾರತಿ ಅವರು ಪ್ರಮುಖ ರಾಜಕಾರಣಿಗಳಾಗಿರುವುದು ಗಮನಾರ್ಹ.
ಪಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಯು ಹಿರಿಯ ನಾಯಕ ಹಾಗೂ ವಕ್ತಾರ ಕೆ.ಸಿ.ತ್ಯಾಗಿ, ‘ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಿತ್ರಪಕ್ಷ ಆರ್‌ಜೆಡಿ ಗುರಿಯಾಗಿಸಿಕೊಂಡು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
‘ಅಲ್ಲದೇ, ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ನಿತೀಶ್ ಕುಮಾರ್ ಧನ್ಯವಾದ ಅರ್ಪಿಸಿದ್ದಾರೆ. ಇದು ಮೋದಿ ಕುರಿತು ಪ್ರಶಂಸೆ ವ್ಯಕ್ತಪಡಿಸಿದಂತೆಯೂ ಅಲ್ಲ’ ಎಂದಿದ್ದಾರೆ.
ಒಂದು ವೇಳೆ, ಈ ಬಾರಿ ನಿತೀಶ್ ಅವರು ‘ಮಹಾ ಘಟಬಂಧನ’ದಿಂದ ಹೊರಬಂದರೆ, ಕಳೆದ ಆರು ವರ್ಷಗಳಲ್ಲಿ ಎರಡನೇ ಬಾರಿ ಅವರು ರಾಜ್ಯದಲ್ಲಿರುವ ಮೈತ್ರಿಕೂಟ ತೊರೆದಂತಾಗಲಿದೆ.
ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪುರಸ್ಕಾರ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನಡೆ ಸಹ ಬಿಹಾರದಲ್ಲಿ ಈ ರಾಜಕೀಯ ಬೆಳವಣಿಗೆಗಳಿಗೆ ನಾಟಕೀಯ ತಿರುವು ನೀಡಿತು ಎನ್ನಲಾಗುತ್ತಿದೆ.
ಫೆ.4ರ ರ‍್ಯಾಲಿಯತ್ತ ಚಿತ್ತ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ ಜೋಡೊ ನ್ಯಾಯ ಯಾತ್ರೆ’ಯ ಭಾಗವಾಗಿ ತಿಂಗಳಾಂತ್ಯಕ್ಕೆ ಬಿಹಾರದ ಪೂರ್ಣಿಯಾದಲ್ಲಿ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಈ ರ‍್ಯಾಲಿಯಲ್ಲಿ ನಿತೀಶ್ ಕುಮಾರ್ ಭಾಗಿಯಾಗುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ, ಬಿಜೆಪಿ ಜೊತೆಗೆ ಜೆಡಿಯು ಮೈತ್ರಿ ಮಾಡಿಕೊಳ್ಳುವುದು ಖಚಿತಗೊಂಡಲ್ಲಿ, ಫೆಬ್ರುವರಿ 4ರಂದು ಬಿಹಾರದ ಬೆತ್ತಿಯಾದಲ್ಲಿ ಹಮ್ಮಿಕೊಂಡಿರುವ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಿತೀಶ್ ಕುಮರ್ ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.
ಬಿಜೆಪಿ ಘಟಕದ ವಿರೋಧ: ಜೆಡಿಯು, ಬಿಜೆಪಿ ಹಾಗೂ ಆರ್‌ಜೆಡಿ ಇತ್ತೀಚೆಗೆ ಸರಣಿ ಸಭೆಗಳನ್ನು ನಡೆಸಿದ್ದವು. ಇದು ಕೂಡ ಊಹಾಪೋಹ ಹೆಚ್ಚಾಗಲು ಕಾರಣವಾಗಿದೆ.
ಒಂದು ವೇಳೆ, ಜೆಡಿಯು ಜೊತೆ ಮತ್ತೆ ಮೈತ್ರಿ ಮಾಡಿಕೊಂಡಲ್ಲಿ ನಿತೀಶ್ ಕುಮಾರ್ ಅವರಿಗೆ ಮುಖ್ಯಮಂತ್ರಿ ಪಟ್ಟ ನೀಡಬಾರದು ಎಂದು ಬಿಜೆಪಿಯ ಬಿಹಾರ ಘಟಕದ ಅಭಿಪ್ರಾಯವಾಗಿದೆ. ಈ ಮಾತನ್ನು ಪಕ್ಷದ ವರಿಷ್ಠರಿಗೆ ರಾಜ್ಯ ಬಿಜೆಪಿ ನಾಯಕರು ತಿಳಿಸಿದ್ದಾರೆ ಎನ್ನಲಾಗಿದೆ. ಮೈತ್ರಿ ಸರ್ಕಾರ ರಚನೆಯಾದಲ್ಲಿ ಬಿಜೆಪಿಯವರೇ ಮುಖ್ಯಮಂತ್ರಿಯಾಗಬೇಕು, ಎರಡು ಉಪಮುಖ್ಯಮಂತ್ರಿ ಸ್ಥಾನಗಳನ್ನು ಜೆಡಿಯುಗೆ ಬಿಟ್ಟುಕೊಡಬೇಕು ಎಂಬ ಮಾತನ್ನು ಸಹ ವರಿಷ್ಠರಿಗೆ ತಿಳಿಸಿದ್ದರು ಎನ್ನಲಾಗಿದೆ.
ಜೆಡಿಯು ಪಕ್ಷವು ಬಿಜೆಪಿ ಜೊತೆ ಕೈಜೋಡಿಸಲು ಇಚ್ಛಿಸಿದಲ್ಲಿ, ಈ ಕುರಿತು ಪಕ್ಷವು ಸೂಕ್ತ ನಿರ್ಧಾರ ಕೈಗೊಳ್ಳುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು. ಇಂತಹ ಸಾಧ್ಯತೆ ಬಗ್ಗೆ ಪಕ್ಷವು ಮುಕ್ತವಾಗಿದೆ ಎಂಬ ಸುಳಿವನ್ನೂ ನೀಡಿದ್ದರು.
ಲಾಲು ಪುತ್ರಿಯ ಹೇಳಿಕೆ ವಿವಾದ
ಪಟ್ನಾ: ‘ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಪುತ್ರಿ ರೋಹಿಣಿ ಆಚಾರ್ಯ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಿದ್ದ ವಿವಾದಾತ್ಮಕ ಪೋಸ್ಟ್ ಪ್ರಧಾನಿ ನರೇಂದ್ರ ಮೋದಿ ಕುರಿತಾಗಿತ್ತೇ ಹೊರತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಉದ್ದೇಶಿಸಿರಲಿಲ್ಲ’ ಎಂದು ಪಕ್ಷದ ವಕ್ತಾರ ಶಕ್ತಿ ಯಾದವ್ ಗುರುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೇರೆಯೇ ಸಂದರ್ಭಕ್ಕಾಗಿ ಮಾಡಲಾಗಿದ್ದ ಪೋಸ್ಟ್ ಅನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸದ್ಯದ ರಾಜಕೀಯ ಬೆಳವಣಿಗೆಗೆ ಬಳಸಿಕೊಂಡಿದ್ದಾರೆ’ ಎಂದರು.
‘ಸೈದ್ಧಾಂತಿಕವಾಗಿ ಗೊತ್ತುಗುರಿ ಇಲ್ಲದಿರುವವರು ಸಮಾಜವಾದಿ ನಾಯಕ ಎಂದು ಹೇಳಿಕೊಳ್ಳುತ್ತಾರೆ’ ಎಂಬುದಾಗಿ ಹಿಂದಿಯಲ್ಲಿ ರೋಹಿಣಿ ಆಚಾರ್ಯ ಪೋಸ್ಟ್ ಮಾಡಿದ್ದರು. ಈ ವಿಷಯ ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಅದನ್ನು ‘ಎಕ್ಸ್’ನಿಂದ ತೆಗೆದು ಹಾಕಿದ್ದರು.
ಕುಟುಂಬ ರಾಜಕಾರಣ ಟೀಕಿಸಿ ಮಾತನಾಡಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಗುರಿಯಾಗಿಸಿ ರೋಹಿಣಿ ಅವರು ಈ ಪೋಸ್ಟ್ ಮಾಡಿದ್ದರು ಎನ್ನಲಾಗುತ್ತಿದೆ.
ಆಗ್ರಹ: ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಅವಮಾನಿಸಿದ್ದಕ್ಕಾಗಿ ರೋಹಿಣಿ ಆಚಾರ್ಯ ಕ್ಷಮೆ ಕೇಳಬೇಕು ಎಂದು ಬಿಹಾರದ ಬಿಜೆಪಿ ನಾಯಕ ನಿಖಿಲ್ ಆನಂದ್ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.