ADVERTISEMENT

ತ್ವರಿತ ನ್ಯಾಯಾಲಯಗಳ ಸ್ಥಾಪನೆ ಚುರುಕುಗೊಳಿಸಿ: ಕಿರಣ್‌ ರಿಜಿಜು ಪತ್ರ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 14:05 IST
Last Updated 15 ಸೆಪ್ಟೆಂಬರ್ 2022, 14:05 IST
ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು
ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು   

ನವದೆಹಲಿ:ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರ ವಿರುದ್ಧದ ಗಂಭೀರ ಅಪರಾಧ ಪ್ರಕರಣಗಳ ವಿಚಾರಣೆಗೆ ತ್ವರಿತ ನ್ಯಾಯಾಲಯಗಳು ಮತ್ತು ತ್ವರಿತ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಪ್ರಕ್ರಿಯೆ ಚುರುಕುಗೊಳಿಸಲು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ.

14ನೇ ಹಣಕಾಸು ಆಯೋಗವು 1,800 ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲು ಶಿಫಾರಸು ಮಾಡಿದೆ. ಆದರೆ, ಜುಲೈ 31ರ ವೇಳೆಗೆ ಕೇವಲ 896ತ್ವರಿತ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಈ ನ್ಯಾಯಾಲಯಗಳಲ್ಲಿ 13.18 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ ಎಂದು ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆಯಡಿಯ (ಪೋಕ್ಸೊ) ಪ್ರಕರಣಗಳ ವಿಚಾರಣೆಗಾಗಿ ಕೇಂದ್ರ ಪ್ರಾಯೋಜಿತ ಯೋಜನೆಯಡಿ ತ್ವರಿತ ವಿಚಾರಣೆಯ ವಿಶೇಷ ನ್ಯಾಯಾಲಯಗಳನ್ನು (ಎಫ್‌ಟಿಎಸ್‌ಸಿಎಸ್‌) ಸ್ಥಾಪಿಸಬೇಕು. 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 1,023 ಎಫ್‌ಟಿಎಸ್‌ಸಿಎಸ್‌ ಮಂಜೂರು ಮಾಡಲಾಗಿದೆ. ಆದರೆ,ಜುಲೈ 31ರ ವೇಳೆಗೆ 731ಎಫ್‌ಟಿಎಸ್‌ಸಿಎಸ್‌ ಕಾರ್ಯನಿರ್ವಹಿಸುತ್ತಿವೆ.ಈ ನ್ಯಾಯಾಲಯಗಳಲ್ಲಿ 3.28 ಲಕ್ಷ ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ. ಇದು ಆತಂಕದ ಸ್ಥಿತಿ ಎಂದು ಸಚಿವ ರಿಜಿಜು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಪ್ರಕರಣಗಳ ತ್ವರಿತ ಇತ್ಯರ್ಥ ಮತ್ತು ಪ್ರಕರಣಗಳು ವಿಚಾರಣೆಗೆ ಬಾಕಿಯಾಗುವುದನ್ನು ತಡೆಯಲು ಈ ನ್ಯಾಯಾಲಯಗಳಿಗೆ ಅಗತ್ಯ ಸೂಚನೆ ಮತ್ತು ಬೆಂಬಲ ನೀಡುವಂತೆ ಕಾನೂನು ಸಚಿವರು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದಾರೆ.

ಎಫ್‌ಟಿಸಿ ಮತ್ತು ಎಫ್‌ಟಿಎಸ್‌ಸಿಗಳಲ್ಲಿ ಪ್ರಕರಣಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಲು ಕಟ್ಟುನಿಟ್ಟಿನ ಮೇಲ್ವಿಚಾರಣೆ ವ್ಯವಸ್ಥೆ ಸ್ಥಾಪಿಸಬೇಕು ಎಂದು ಕೇಂದ್ರ ಸಚಿವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.