ಶ್ರೀನಗರ: ಕಳೆದ ಏಳು ದಿನಗಳಿಂದ ಹಿಮಪಾತದಿಂದ ಮುಚ್ಚಿದ್ದ ಶ್ರೀನಗರ–ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಭಾನುವಾರ ತೆರೆಯಲಾಯಿತು.
‘ಕಾಶ್ಮೀರದ 260 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ಭಾನುವಾರ ಮುಂಜಾನೆ ತೆರೆಯಲಾಗಿದ್ದು, ಏಕಮುಖ ವಾಹನ ಸಂಚಾರಕ್ಕಾಗಿ ಅವಕಾಶ ಕಲ್ಪಿಸಿಕೊಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.
‘ಜನವರಿ 3 ರಿಂದ ಭಾರಿ ಹಿಮಪಾತದಿಂದಾಗಿ ಶ್ರೀನಗರ–ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿತ್ತು. ಕಳೆದ ಐದು ದಿನಗಳಿಂದ ಅನೇಕ ವಾಹನಗಳು ಹೆದ್ದಾರಿಯಲ್ಲೇ ಸಿಲುಕಿದ್ದವು. ಆದರೆ ಶುಕ್ರವಾರ ಹಿಮವನ್ನು ತೆರವುಗೊಳಿಸಿ, ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು’ ಎಂದು ಅವರು ಮಾಹಿತಿ ನೀಡಿದರು.
‘ಮೊಘಲ್ ಮತ್ತು ಶೋಪಿಯಾನ್–ರಜೌರಿ ಆಕ್ಸಿಸ್ ರಸ್ತೆ ಕೂಡ ಭಾರಿ ಹಿಮಪಾತದಿಂದಾಗಿ ಮುಚ್ಚಿತ್ತು. ಭಾನುವಾರ ಕೂಡ ಶ್ರೀನಗರ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಹಿಮಪಾತವಾಗಿದ್ದು ವಿಮಾನ ಸಂಚಾರಕ್ಕೆ ಮಾತ್ರ ಸ್ವಲ್ಪ ಅಡಚಣೆ ಉಂಟಾಗಿತ್ತು’ ಎಂದು ಅಧಿಕಾರಿಗಳು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.