ಮಹಾಕುಂಭ ನಗರ/ಲಖನೌ: ‘ಮೌನಿ ಅಮಾವಾಸ್ಯೆ’ ಅಂಗವಾಗಿ ಇಲ್ಲಿನ ‘ಸಂಗಮ’ದಲ್ಲಿ ಬುಧವಾರ ಪುಣ್ಯಸ್ನಾನಕ್ಕಾಗಿ ನೂಕುನುಗ್ಗಲಿನಿಂದ ಉಂಟಾದ ಕಾಲ್ತುಳಿತದಲ್ಲಿ ಮಹಿಳೆಯರು ಸೇರಿ ಕನಿಷ್ಠ 30 ಮಂದಿ ಮೃತಪಟ್ಟಿದ್ದು, ಇತರ 60 ಜನರು ಗಾಯಗೊಂಡಿದ್ದಾರೆ.
ಮೃತರಲ್ಲಿ ಕರ್ನಾಟಕದ ನಾಲ್ವರು ಸೇರಿದ್ದಾರೆ. ಪುಣ್ಯಸ್ನಾನಕ್ಕಾಗಿ ‘ಸಂಗಮ’ ತೀರದಲ್ಲಿ ಕೋಟ್ಯಂತರ ಭಕ್ತರು ಸೇರಿದ್ದಾಗ, ರಾತ್ರಿ 2ರ ಸುಮಾರಿಗೆ ಈ ಅವಘಡ ಸಂಭವಿಸಿದೆ.
ಕಾಲ್ತುಳಿತ ಹೇಗೆ ಉಂಟಾಯಿತು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ‘ಸಂಗಮ’ದಲ್ಲಿ ದಟ್ಟಣೆಯಿಂದಾಗಿ ಹಠಾತ್ತನೇ ನೂಕುನುಗ್ಗಲು ಉಂಟಾಯಿತು. ಮಹಿಳೆಯರು ಸೇರಿದಂತೆ ಹಲವು ಭಕ್ತರು ಕೆಳಗೆ ಬಿದ್ದ ನಂತರ ಕಾಲ್ತುಳಿತ ಉಂಟಾಯಿತು. ಗಲಿಬಿಲಿಗೊಂಡ ಜನರು ಕೆಳಗೆ ಬಿದ್ದವರನ್ನು ತುಳಿಯುತ್ತಾ ಓಡಲು ಶುರು ಮಾಡಿದರು’ ಎಂದು ಕೆಲ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
‘ರಾತ್ರಿ 1ರಿಂದ 2 ಗಂಟೆ ನಡುವೆ ಅಮೃತ ಸ್ನಾನಕ್ಕಾಗಿ ಸೇರಿದ್ದ ಜನರ ದೊಡ್ಡ ಗುಂಪೊಂದು ತಡೆಗೋಡೆಯನ್ನು ಮುರಿದು ಮುನ್ನುಗಿದ್ದರಿಂದ ಕಾಲ್ತುಳಿತ ಉಂಟಾಯಿತು. ಈ ವೇಳೆ, ‘ಸಂಗಮ ಬಳಿ ಸ್ನಾನ ಮಾಡಲು ಕಾಯುತ್ತಿದ್ದವರು ಕೆಳಗೆ ಬಿದ್ದರು. ಭಾರಿ ಸಂಖ್ಯೆಯಲ್ಲಿ ಜನರು ಕೆಳಗೆ ಬಿದ್ದಿದ್ದವರನ್ನು ತುಳಿಯುತ್ತಾ ಓಡಿದರು’ ಎಂದು ಕುಂಭಮೇಳದ ಡಿಐಜಿ ವೈಭವ ಕೃಷ್ಣ ತಿಳಿಸಿದ್ದಾರೆ.
ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿದ್ದನ್ನು ಉತ್ತರ ಪ್ರದೇಶದ ಹಿರಿಯ ಅಧಿಕಾರಿಯೊಬ್ಬರು ಮೊದಲು ತಳ್ಳಿ ಹಾಕಿದ್ದರು. ‘ಸಂಗಮ’ದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ ಎಂದಷ್ಟೆ ಹೇಳಿದ್ದರು.
ಮುಖ್ಯಮಂತ್ರಿ ಯೋಗಿ ಮನವಿ: ‘ಮೌನಿ ಅಮಾವಾಸ್ಯೆ‘ ಅಂಗವಾಗಿ ಪುಣ್ಯಸ್ನಾನ ಮಾಡುವುದಕ್ಕಾಗಿ ಪ್ರಯಾಗ್‌ರಾಜ್‌ನಲ್ಲಿ 9–10 ಕೋಟಿ ಜನರು ಜಮಾಯಿಸಿದ್ದಾರೆ. ಭಕ್ತರು ತಮಗೆ ಸಮೀಪದ ಘಾಟ್‌ಗಳಲ್ಲಿ ಗಂಗಾ ನದಿಯಲ್ಲಿ ಸ್ನಾನ ಮಾಡಬೇಕು. ಇದರಿಂದ ಸಂಗಮದಲ್ಲಿ ಜನರ ದಟ್ಟಣೆ ತಪ್ಪಿಸಬಹುದಾಗಿದೆ’ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಾಡಿದ್ದಾರೆ.
‘ಕಾಲ್ತುಳಿತದ ವೇಳೆ, ಗಾಯಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಕಾಲ್ತುಳಿತ ಘಟನೆಗೆ ಸಂಬಂಧಿಸಿ, ಮಹಾ ಮಂಡಲೇಶ್ವರರು ಸೇರಿದಂತೆ ಅಖಾಡ ಪರಿಷತ್ ಮುಖ್ಯಸ್ಥರು ಹಾಗೂ ಇತರ ಸಾಧು–ಸಂತರೊಂದಿಗೆ ನಾನು ಮಾತುಕತೆ ನಡೆಸಿದ್ದೇನೆ. ಭಕ್ತರು ಪುಣ್ಯಸ್ನಾನ ಮಾಡುವುದಕ್ಕೆ ಅವಕಾಶ ನೀಡಲು ಹಾಗೂ ದಟ್ಟಣೆ ಕಡಿಮೆಯಾದ ನಂತರ ತಾವು ಪುಣ್ಯಸ್ನಾನ ಮಾಡಲು ಎಲ್ಲರೂ ಒಪ್ಪಿಗೆ ನೀಡಿದ್ದಾರೆ’ ಎಂದು ಹೇಳಿದ್ದಾರೆ.
‘ಭಕ್ತರ ಸುರಕ್ಷತೆ ನಮ್ಮ ಮೊದಲ ಆದ್ಯತೆ. ಪ್ರಯಾಗ್‌ರಾಜ್‌ನಲ್ಲಿ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ, ಜನಸಂದಣಿ ಕಡಿಮೆಯಾಗಿಲ್ಲ’ ಎಂದೂ ಹೇಳಿದ್ದಾರೆ.
ಪ್ರಧಾನಿ ಆಘಾತ: ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಕಾಲ್ತುಳಿತದಲ್ಲಿ ಮೃತಪಟ್ಟಿರುವ ಭಕ್ತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.
‘ಗಾಯಾಳುಗಳು ತ್ವರಿತವಾಗಿ ಚೇತರಿಸಿಕೊಳ್ಳಲಿ. ಪ್ರಯಾಗ್‌ರಾಜ್ ಜಿಲ್ಲಾಡಳಿತವು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡುತ್ತಿದೆ’ ಎಂದೂ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾಲ್ತುಳಿತ ಸಂಭವಿಸಿದ ಮಹಾ ಕುಂಭ ನಗರದ ‘ಸಂಗಮ’ದ ಬಳಿ, ಆಂಬುಲೆನ್ಸ್‌ಗಳು ಓಡಾಟದ ದೃಶ್ಯಗಳಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ಒಂದೆಡೆ, ಆಸ್ಪತ್ರೆಯಲ್ಲಿ ಮೃತದೇಹಗಳು ಕಂಡುಬಂದರೆ ಮತ್ತೊಂದೆಡೆ, ನಾಪತ್ತೆಯಾಗಿರುವ ತಮ್ಮ ಸಂಬಂಧಿಕರನ್ನು ಹುಡುಕುವುದರಲ್ಲಿ ಜನರು ನಿರತರಾಗಿದ್ದರು. ಗಾಯಗಳಿಂದಾಗಿ, ತಮ್ಮವರು ನಾಪತ್ತೆಯಾಗಿದ್ದಕ್ಕಾಗಿ ಇಲ್ಲವೇ ಮೃತಪಟ್ಟಿದ್ದಕ್ಕಾಗಿ ಗೋಗರೆಯುತ್ತಿರುವ ಜನರು, ಗಾಯಾಳುಗಳನ್ನು ಸ್ಟ್ರೆಚರ್ ಮೇಲೆ ಕರೆದೊಯ್ಯುತ್ತಿದ್ದ ಚಿತ್ರಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ನಾವು 60 ಜನ ಇಲ್ಲಿಗೆ ಬಂದಿದ್ದೇವೆ. ನಾನಿದ್ದ ಗುಂಪಿನಲ್ಲಿ 9 ಜನರಿದ್ದಾರೆ. ಹಠಾತ್ತನೇ ನಮ್ಮ ಗುಂಪಿನಲ್ಲಿ ನೂಕುನುಗ್ಗಲು ಶುರುವಾಯಿತು. ಇದರಿಂದ ನಾವು ಸಿಕ್ಕಿ ಹಾಕಿಕೊಂಡೆವು. ಎಲ್ಲ ದಿಕ್ಕುಗಳಿಂದಲೂ ನೂಕುತ್ತಿದ್ದರಿಂದ ನಮಗೆ ಆ ಜಾಗದಿಂದ ಪಾರಾಗಲು ಅವಕಾಶ ಇರಲಿಲ್ಲ. ನಮ್ಮಲ್ಲಿ ಅನೇಕರು ಕೆಳಗೆ ಬಿದ್ದರು. ಒಂದು ಹಂತದಲ್ಲಿ ಗುಂಪನ್ನು ನಿಯಂತ್ರಣ ಮಾಡುವುದು ಸಾಧ್ಯವಾಗಲಿಲ್ಲ.–ಸರೋಜಿನಿ, ಕರ್ನಾಟಕದಿಂದ ತೆರಳಿರುವ ಭಕ್ತೆ
ವಿಪರೀತ ಭಕ್ತರು ಸೇರಿರುವ ಕಾರಣ ಸಂಗಮ ಘಾಟ್‌ನಲ್ಲಿ ನಡೆಯಬೇಕಿದ್ದ ಎಲ್ಲ ಅಖಾಡಗಳ ಸಾಂಪ್ರದಾಯಿಕ ಸ್ನಾನವನ್ನು ಮುಂದೂಡಲಾಗಿದೆ. ಕುಂಭ ಮೇಳ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದೇವೆ. ಜನದಟ್ಟಣೆ ಕಡಿಮೆಯಾದ ನಂತರ ನಾವು ಪುಣ್ಯಸ್ನಾನ ಮಾಡುತ್ತೇವೆ–ಮಹಂತ ರವೀಂದ್ರ ಪುರಿ, ಅಖಿಲ ಭಾರತೀಯ ಅಖಾಡ ಪರಿಷದ್ ಅಧ್ಯಕ್ಷ
ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ಉಂಟಾಗಿ ಹಲವರು ಮೃತಪಟ್ಟಿರುವ ಘಟನೆ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದುಃಖ ವ್ಯಕ್ತಪಡಿಸಿದ್ದಾರೆ. ಆದರೆ ಈ ದುರಂತ ಸಂಭವಿಸಲು ‘ವಿಐಪಿ ಸಂಸ್ಕೃತಿ‘ಯೇ ಕಾರಣ ಎಂದು ಅವರು ಟೀಕಿಸಿದ್ದಾರೆ. ಈ ದುರ್ಘಟನೆ ಕುರಿತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ ಹಾಗೂ ಬಿಎಸ್‌ಪಿ ನಾಯಕಿ ಮಾಯಾವತಿ ಅವರೂ ಸಂತಾಪ ಸೂಚಿಸಿದ್ದು ಗಾಯಾಳುಗಳಿಗೆ ಸಾಧ್ಯವಿರುವ ಎಲ್ಲ ವೈದ್ಯಕೀಯ ನೆರವು ನೀಡಲು ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
‘ಇದು ವಿಶ್ವದರ್ಜೆಯ ವ್ಯವಸ್ಥೆಯ ಮತ್ತೊಂದು ಮುಖವನ್ನು ಬಹಿರಂಗಪಡಿಸಿದೆ. ಈ ದುರಂತಕ್ಕೆ ಕಾರಣರಾದವರು ರಾಜೀನಾಮೆ ನೀಡಬೇಕು. ದಟ್ಟಣೆ ನಿರ್ವಹಣೆ ಜವಾಬ್ದಾರಿಯನ್ನು ಸೇನೆಗೆ ವಹಿಸಬೇಕು’ ಎಂದು ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ.
ಪುಣ್ಯಸ್ನಾನಕ್ಕೆ ಮಹತ್ವ ಸಂಪ್ರದಾಯದಂತೆ ‘ಮೌನಿ ಅಮಾವಾಸ್ಯೆ’ಯಂದು ಸನ್ಯಾಸಿ ಬೈರಾಗಿ ಮತ್ತು ಉದಾಸೀನ ಪಂಥಗಳಿಗೆ ಸಂಬಂಧಿಸಿದ ಅಖಾಡಗಳ ಅನುಯಾಯಿಗಳು ಪುಣ್ಯಸ್ನಾನ ಮಾಡುತ್ತಾರೆ. ಈ ವೇಳೆ ಅವರು ಸಂಗಮ ಘಾಟ್ ವರೆಗೂ ಮೆರವಣಿಗೆ ನಡೆಸುತ್ತಾರೆ.
‘ತ್ರಿವೇಣಿ ಸಂಗಮ’ವು ಗಂಗಾ ಯಮುನಾ ಮತ್ತು ಸರಸ್ವತಿ ನದಿಗಳು ಒಂದೆಡೆ ಸೇರುವ ಸ್ಥಳವಾಗಿದೆ. ಮೌನಿ ಅಮಾವಾಸ್ಯೆಯಂದು ಈ ಸಂಗಮದಲ್ಲಿ ಸ್ನಾನ ಮಾಡುವುದರಿಂದ ಪಾಪ ನಾಶವಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭವು ಈ ಬಾರಿ ಜನವರಿ 13ರಂದು ಆರಂಭವಾಗಿದ್ದು ಫೆಬ್ರುವರಿ 26ರ ವರೆಗೆ ನಡೆಯಲಿದೆ.
ಮಹಾಕುಂಭ ವೇಳೆ ಕಾಲ್ತುಳಿತ ಈ ಹಿಂದೆಯೂ ಮಹಾ ಕುಂಭ ನಡೆದ ಸಂದರ್ಭಗಳಲ್ಲಿ ಕಾಲ್ತುಳಿತದ ಘಟನೆಗಳು ಸಂಭವಿಸಿ ಭಕ್ತರು ಮೃತಪಟ್ಟಿದ್ದಾರೆ. ವಿವರ ಹೀಗಿದೆ
1954: ಪ್ರಯಾಗ್‌ರಾಜ್‌ನಲ್ಲಿ (ಅಲಹಾಬಾದ್) ನಡೆದ ಮಹಾ ಕುಂಭ ವೇಳೆ ‘ಮೌನಿ ಅಮಾವಾಸ್ಯೆ’ ಅಂಗವಾಗಿ ಪುಣ್ಯಸ್ನಾನ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 800ಕ್ಕೂ ಹೆಚ್ಚು ಜನರ ಸಾವು
1986: ಉತ್ತರಾಖಂಡದ ಹರಿದ್ವಾರದಲ್ಇಲ ನಡೆದ ಕುಂಭ ವೇಳೆ ಕಾಲ್ತುಳಿತ ಸಂಭವಿಸಿ 200 ಭಕ್ತರ ಸಾವು
2003: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಕುಂಭದ ಅಂಗವಾಗಿ ಗೋದಾವರಿ ನದಿ ತೀರದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 39 ಜನರ ಸಾವು
2013: ಫೆಬ್ರುವರಿ 10ರಂದು ಕುಂಭ ನಡೆಯುತ್ತಿದ್ದ ಸಂದರ್ಭದಲ್ಲಿ ಅಲಹಾಬಾದ್ ರೈಲು ನಿಲ್ದಾಣದ ಪಾದಚಾರಿ ಸೇತುವೆ ಕುಸಿದಾಗ ಉಂಟಾ ಕಾಲ್ತುಳಿತದಲ್ಲಿ 42 ಮಂದಿ ಸಾವು
ಶವ ತರಲು ವಿಶೇಷ ತಂಡ
‘ಕಾಲ್ತುಳಿತದಲ್ಲಿ ಮೃತಪಟ್ಟ ಬೆಳಗಾವಿಯ ನಾಲ್ವರ ಶವಗಳನ್ನು ಮರಳಿ ಮನೆಗೆ ತರಲು ಕ್ರಮ ವಹಿಸಲಾಗಿದೆ. ವಿಶೇಷ ಜಿಲ್ಲಾಧಿಕಾರಿ ಹರ್ಷಾ ಶೆಟ್ಟಿ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್.ಎಸ್.ಶ್ರುತಿ ಅವರನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
‘ತಂಡವು ಬುಧವಾರವೇ ಪ್ರಯಾಗ್‌ರಾಜ್‌ಗೆ ಪ್ರಯಾಣ ಬೆಳೆಸಿದೆ. ಉತ್ತರ ಪ್ರದೇಶದ ಅಧಿಕಾರಿಗಳ ಜತೆಗೂ ಸಂಪರ್ಕದಲ್ಲಿದ್ದೇವೆ. ಇನ್ನಷ್ಟು ಜನರ ಸಂಪರ್ಕ ಕಡಿತಗೊಂಡಿದೆ. ಸಂಪರ್ಕ ಸಾಧಿಸುವ ಯತ್ನ ಮುಂದುವರಿದಿದೆ’ ಎಂದರು.
‘ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ’
‘ಬೆಳಗಾವಿ ಜಿಲ್ಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಪ್ರಯಾಗ್‌ರಾಜ್‌ಗೆ ಹೋಗಿದ್ದಾರೆ. ಅದರಲ್ಲಿ ನಾಲ್ವರು ಸಾವನ್ನಪ್ಪಿದ್ದು ಆಘಾತಕಾರಿ. ಇನ್ನೂ ಎಂಟು ಜನರ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ಆತಂಕ ಎದುರಾಗಿದೆ. ಉತ್ತರ ಪ್ರದೇಶದಲ್ಲಿ ಗೊತ್ತಿರುವ ಸಂಸದರು ಹಾಗೂ ಅಧಿಕಾರಿಗಳ ಜತೆಗೆ ನಾನೂ ಸಂಪರ್ಕದಲ್ಲಿದ್ದೇನೆ’ ಎಂದು ಸಂಸದ ಜಗದೀಶ ಶೆಟ್ಟರ್ ತಿಳಿಸಿದರು.
‘ಅಲ್ಲಿ ಯಾತ್ರಾರ್ಥಿಗಳಿಗೆ ಸಕಲವನ್ನೂ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದಾರೆ ಎಂದು ಹಲವರು ನನಗೆ ದೂರವಾಣಿ ಕರೆ ಮಾಡಿದ್ದರು. ಪುಣ್ಯಸ್ನಾನಕ್ಕೆ ಹೋದವರಿಗೆ ಈ ರೀತಿ ಆಗಬಾರದಿತ್ತು. ಮೃತರ ಕುಟುಂಬದವರಿಗೆ ಪರಿಹಾರ ದೊರಕಿಸುವ ಯತ್ನ ಮಾಡಲಾಗುವುದು’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.