ಮುಂಬೈ: ದೇಶದ ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರ ಸ್ಟ್ಯಾನ್ ಸ್ವಾಮಿ ನ್ಯಾಯಾಂಗ ಬಂಧನದಲ್ಲಿದ್ದಾಗ ಅವರ ಸಾವು ಸಂಭವಿಸಿರುವುದನ್ನು ಸಮರ್ಥಿಸಲಾಗದು ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.
ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಬರೆದುಕೊಂಡಿರುವ ರಾವುತ್, 84 ವಯಸ್ಸಿನ ವ್ಯಕ್ತಿಯೊಬ್ಬ ದೇಶದ ವಿರುದ್ದ ಹೋರಾಡುವಷ್ಟು ನಮ್ಮ ವ್ಯವಸ್ಥೆ ದುರ್ಬಲವಾಗಿದೆಯೇ ಎಂದು ಅಚ್ಚರಿ ವ್ಯಕ್ತಪಡಿಸಿದರು.
'ನಾವು ಮಾವೋವಾದಿ ಹಾಗೂ ನಕ್ಸಲರ ಸಿದ್ಧಾಂತವನ್ನು ಒಪ್ಪುವುದಿಲ್ಲ. ಕಾಶ್ಮೀರದ ಪ್ರತ್ಯೇಕತಾವಾದಿಗಳಿಗಿಂತ ಮಾವೋವಾದಿ, ನಕ್ಸಲರು ಹೆಚ್ಚು ಅಪಾಯಕಾರಿಯಾದರೂ ಸಹ ಸ್ಟ್ಯಾನ್ ಸ್ವಾಮಿ ಬಂಧನವನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅವರಿಂದ ಸರ್ಕಾರ ಉರುಳಿಸಲು ಸಾಧ್ಯವೇ' ಎಂದು ಪ್ರಶ್ನಿಸಿದ್ದಾರೆ.
'ಸರ್ವಾಧಿಕಾರಿ ಧೋರಣೆಯ ಸರ್ಕಾರವು ಅನಾರೋಗ್ಯದ ವ್ಯಕ್ತಿಯೊಬ್ಬರಿಂದ ಭಯಗೊಂಡಿದೆ, ಸರ್ಕಾರ ಮಾನಸಿಕವಾಗಿ ದುರ್ಬಲವಾಗಿದೆ' ಎಂದರು.
ಎಲ್ಗರ್ ಪರಿಷತ್ ಚಟುವಟಿಕೆಗಳನ್ನು ಬೆಂಬಲಿಸಲಾಗುವುದಿಲ್ಲ. ಆದರೆ ಅದಾದ ನಂತರ ಸ್ವಾತಂತ್ರ್ಯವನ್ನು ಭೇದಿಸುವ ಪಿತೂರಿ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತರಾದ ವರವರ ರಾವ್, ಸುಧಾ ಭಾರದ್ವಾಜ್, ಗೌರವ್ ನವಲಖಾ ಹೆಸರುಗಳನ್ನು ಉಲ್ಲೇಖಿಸಿ ಹೇಳಿದರು.
84 ವರ್ಷದ ಸ್ಟ್ಯಾನ್ ಸ್ವಾಮಿ, ಬಹುಶಃ ದೇಶದಲ್ಲಿ ಭಯೋತ್ಪಾದನೆ ಆರೋಪ ಹೊರಿಸಲ್ಪಟ್ಟ ಅತಿ ಹಿರಿಯ ವ್ಯಕ್ತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.