ADVERTISEMENT

ಉತ್ತರ ಪ್ರದೇಶ: ಆರೋಪ–ಪ್ರತ್ಯಾರೋಪ; ಬಸ್‌ ಹಿಂಪಡೆದ ಕಾಂಗ್ರೆಸ್‌

ಪಿಟಿಐ
Published 20 ಮೇ 2020, 21:52 IST
Last Updated 20 ಮೇ 2020, 21:52 IST
ವಲಸೆ ಕಾರ್ಮಿಕರನ್ನು ಕರೆತರಲು ಕಾಂಗ್ರೆಸ್‌ ವ್ಯವಸ್ಥೆ ಮಾಡಿದ್ದ ಬಸ್‌ಗಳಿಗೆ ಆಗ್ರಾ–ಭರತ್‌ಪುರ ಗಡಿ ದಾಟಲು ಅಧಿಕಾರಿಗಳು ಬುಧವಾರ ಅನುಮತಿ ನೀಡಲಿಲ್ಲ  –‍ಪಿಟಿಐ ಚಿತ್ರ
ವಲಸೆ ಕಾರ್ಮಿಕರನ್ನು ಕರೆತರಲು ಕಾಂಗ್ರೆಸ್‌ ವ್ಯವಸ್ಥೆ ಮಾಡಿದ್ದ ಬಸ್‌ಗಳಿಗೆ ಆಗ್ರಾ–ಭರತ್‌ಪುರ ಗಡಿ ದಾಟಲು ಅಧಿಕಾರಿಗಳು ಬುಧವಾರ ಅನುಮತಿ ನೀಡಲಿಲ್ಲ  –‍ಪಿಟಿಐ ಚಿತ್ರ   

ನವದೆಹಲಿ: ನೆರೆಯ ರಾಜ್ಯಗಳಿಂದ ವಲಸೆ ಕಾರ್ಮಿಕರನ್ನು ಉತ್ತರ ಪ್ರದೇಶಕ್ಕೆ ಕರೆತರಲು ನಿಯೋಜಿಸಿದ್ದ ಬಸ್‌ಗಳನ್ನು ಕಾಂಗ್ರೆಸ್‌ ಬುಧವಾರ ವಾಪಸ್‌ ಕರೆಸಿಕೊಂಡಿತು.

‘ಉತ್ತರ ಪ್ರದೇಶಕ್ಕೆ ಹೊಂದಿಕೊಂಡ ಗಡಿಯಲ್ಲಿ1,000ಕ್ಕೂ ಅಧಿಕ ಬಸ್‌ಗಳನ್ನು ನಿಲ್ಲಿಸಲಾಗಿದೆ. ಬುಧವಾರ ಸಂಜೆ 4 ಗಂಟೆ ವರೆಗೂ ಈ ಬಸ್‌ಗಳು ಅದೇ ಸ್ಥಳಗಳಲ್ಲಿ ಇರುತ್ತವೆ. ಅವುಗಳಲ್ಲಿ ಕಾರ್ಮಿಕರನ್ನು ಕರೆತನ್ನಿ’ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದರು.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಉದ್ದೇಶಿಸಿ ಪ್ರಿಯಾಂಕಾ ಅವರು ಮಾತನಾಡಿರುವ ವಿಡಿಯೊವನ್ನು ಪಕ್ಷದ ಸಾಮಾಜಿಕ ಮಾಧ್ಯಮ ವಿಭಾಗ ಬಿಡುಗಡೆ ಮಾಡಿದೆ.

ADVERTISEMENT

‘ಇದು ರಾಜಕಾರಣ ಮಾಡುವ ಸಮಯವಲ್ಲ. ಲಾಕ್‌ಡೌನ್‌ನಿಂದ ಸಂಕಷ್ಟ ಎದುರಿಸುತ್ತಿರುವ ವಲಸೆ ಕಾರ್ಮಿಕರಿಗೆ ನೆರವು ನೀಡುವುದು ಈಗಿನ ತುರ್ತು. ಈ ಬಸ್‌ಗಳ ಮೇಲೆ ನಿಮ್ಮ ಚಿತ್ರ ಇರುವ ಪೋಸ್ಟರ್‌, ಬ್ಯಾನರ್‌ಗಳನ್ನು ಬೇಕಾದರೆ ಅಳವಡಿಸಿ. ಒಟ್ಟಾರೆ ಅವುಗಳಲ್ಲಿ ಕಾರ್ಮಿಕರನ್ನು ಕರೆತನ್ನಿ’ ಎಂದು ಅವರು ಹೇಳಿದ್ದರು.

ಬಂಧನ: ಕಾಂಗ್ರೆಸ್‌ನ ಉತ್ತರ ಪ್ರದೇಶ ಘಟಕದ ಅಧ್ಯಕ್ಷ ಅಜಯಕುಮಾರ್‌ ಲಲ್ಲು, ಮುಖಂಡರಾದ ಪ್ರದೀಪ ಮಾಥೂರ್‌, ವಿವೇಕ್‌ ಬನ್ಸಾಲ್‌ ಹಾಗೂ ಮನೋಜ್‌ ದೀಕ್ಷಿತ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಪಕ್ಷ ನೀಡಿದ ಬಸ್‌ಗಳು ರಾಜ್ಯವನ್ನು ಪ್ರವೇಶಿಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಈ ಮುಖಂಡರು ಧರಣಿ ಕುಳಿತಿದ್ದರು. ಲಲ್ಲು ವಿರುದ್ಧ ಐಪಿಸಿ, ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಆಗ್ರಾ ಎಸ್ಪಿ ಬಬ್ಲೂಕುಮಾರ್‌ ಹೇಳಿದ್ದಾರೆ.

ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವ್ಯವಸ್ಥೆ ಮಾಡಿವೆ. ಕಾರ್ಮಿಕರು ನಡೆದುಕೊಂಡು ಅಥವಾ ಅಸುರಕ್ಷಿತ ಸಾರಿಗೆ ಮೂಲಕ ಬರಬಾರದು
-ಯೋಗಿ ಆದಿತ್ಯನಾಥ, ಉತ್ತರ ಪ್ರದೇಶ ಮುಖ್ಯಮಂತ್ರಿ

ದೇಶವೇ ಕೋವಿಡ್‌–19 ವಿರುದ್ಧ ಹೋರಾಡುತ್ತಿದೆ. ಇಂತಹ ಸಂಕಷ್ಟ ಸಮಯದಲ್ಲಿ ಕಾಂಗ್ರೆಸ್‌ ರಾಜಕಾರಣ ಮಾಡುತ್ತಿದೆ. ಈ ವರೆಗೆ ಯಾವ ರಾಜಕೀಯ ಪಕ್ಷವೂ ಈ ರೀತಿ ವರ್ತಿಸಿಲ್ಲ
-ದಿನೇಶ್‌ ಶರ್ಮ, ಉತ್ತರ ಪ್ರದೇಶ ಉಪಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.