ADVERTISEMENT

ಸೋಲಾಪುರ – ಮುಂಬೈ ವಿಮಾನ ಸೇವೆಗೆ ಸಿಎಂ ಫಡಣವೀಸ್‌ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 15:47 IST
Last Updated 15 ಅಕ್ಟೋಬರ್ 2025, 15:47 IST
   

ಸೋಲಾಪುರ: ಸೋಲಾಪುರ- ಮುಂಬೈ ನೂತನ ವಿಮಾನ ಸೇವೆಗೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಬುಧವಾರ ಚಾಲನೆ ನೀಡಿದರು.

ಸೋಲಾಪುರ- ಮುಂಬೈ ವಿಮಾನಸೇವೆಯು ಜಿಲ್ಲೆಯ ಔದ್ಯೋಗಿಕ ಅಭಿವೃದ್ಧಿ, ಪ್ರವಾಸೋದ್ಯಮ ವಲಯವನ್ನು ಉತ್ತೇಜಿಸುತ್ತದೆ ಹಾಗೂ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಫಡಣವೀಸ್‌ ವಿಶ್ವಾಸ ವ್ಯಕ್ತಪಡಿಸಿದರು.

ಮುಂಬರುವ ದಿನಗಳಲ್ಲಿ ರಾತ್ರಿ ಲ್ಯಾಂಡಿಂಗ್ ಸೌಲಭ್ಯ, ಬೊಯಿಂಗ್‌ ವಿಮಾನಗಳ ಸೇವೆ ಪ್ರಾರಂಭಿಸಲು ಪ್ರಯತ್ನಿಸಲಾಗುವುದು ಎಂದರು.

ADVERTISEMENT

ಸೋಲಾಪುರದಲ್ಲಿ ವಿಮಾನ ಸೇವೆ ಪ್ರಾರಂಭವಾಗಿದ್ದರಿಂದ ಶೀಘ್ರದಲ್ಲೇ ಐಟಿ ಪಾರ್ಕ್ ಸ್ಥಾಪಿಸಲಾಗುವುದು. ಇದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳು ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಉದ್ಯಮಿಗಳು ವಿಮಾನ ಸೇವೆಯ ಲಭ್ಯತೆ ಇರುವಿಕೆಯ ಮೂಲಕ ಹಣ ಹೂಡಿಕೆ ಮಾಡಲು ನಿರ್ಧರಿಸುತ್ತಾರೆ. ವಿಶ್ವ ಮಾರುಕಟ್ಟೆಗೆ ಸಂಪರ್ಕ ಸಾಧಿಸಲು ವಿಮಾನಸೇವೆ ಅತ್ಯಂತ ಮಹತ್ವದ್ದಾಗಿದೆ ಎಂದರು.

ಸೋಲಾಪುರ ನಗರದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಪ್ರಯತ್ನ ಶೀಲವಾಗಿದೆ. ನೀರು ಸರಬರಾಜು ಜಲವಾಹಿನಿಗೆ ಸರ್ಕಾರ ₹1 ಕೋಟಿ ನಿಧಿ ನೀಡಲು ನಿರ್ಧರಿಸಿದೆ. ನಗರದಲ್ಲಿ ದಿನನಿತ್ಯ ನೀರು ಸರಬರಾಜು ಮಾಡಲು ಅನುಕೂಲವಾಗಲಿದೆ ಎಂದರು.

ಪಂಢರಪುರ, ತುಳಜಾಪುರ ಹಾಗೂ ಸೋಲಾಪುರ ಈ ಧಾರ್ಮಿಕ ಸ್ಥಳಗಳು ವಿಮಾನ ಸೇವೆ ಮುಂಬೈಗೆ ಸಂಪರ್ಕ ಹೊಂದಿದ್ದರಿಂದ ಭಕ್ತರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಲಿದ್ದು, ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಅತಿವೃಷ್ಟಿ ಹಾಗೂ ಪ್ರವಾಹ ಉಂಟಾಗಿ ರೈತರ ಜೀವನ ಅಸ್ತವ್ಯಸ್ತಗೊಂಡಿದ್ದು, ಅಂತಹ ಕಠಿಣ ಸಮಯದಲ್ಲಿ ಉಸ್ತುವಾರಿ ಸಚಿವ ಜಯಕುಮಾರ ಗೋರೆ ಹಾಗೂ ಜಿಲ್ಲಾಧಿಕಾರಿ ಕುಮಾರ ಆಶೀರ್ವಾದ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಪ್ರವಾಹ ಪೀಡಿತರಿಗೆ ಯಾವುದೇ ಜೀವ ಹಾನಿಯಾಗದಂತೆ ವಸತಿ, ಆಹಾರ ಜಾನುವಾರುಗಳಿಗೆ ಮೇವಿನ ವ್ಯವಸ್ಥೆಯನ್ನು ಅತ್ಯಂತ ಕಾಳಜಿ ಪೂರ್ವಕವಾಗಿ ನಿಯೋಜನೆ ಮಾಡಿ ಕಠಿಣ ಪರಿಸ್ಥಿತಿಯನ್ನು ಎದುರಿಸಿ ಯಶಸ್ವಿಗೊಳಿಸಿದ್ದಕ್ಕಾಗಿ ಸರ್ಕಾರದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಕೇಂದ್ರ ವಿಮಾನಯಾನ ರಾಜ್ಯ ಸಚಿವ ಮುರಳಿಧರ ಮೊಹೋಳ, ಉಸ್ತುವಾರಿ ಸಚಿವ ಜಯಕುಮಾರ ಗೋರೆ, ರಸ್ತೆ ಸಾರಿಗೆ ಸಚಿವ ಪ್ರತಾಪ ಸರನಾಯಕ, ಶಾಸಕರಾದ ವಿಜಯಕುಮಾರ ದೇಶಮುಖ, ಸುಭಾಷ ದೇಶಮುಖ, ಸಚಿನ ಕಲ್ಯಾಣ ಶೆಟ್ಟಿ, ದೇವೇಂದ್ರ ಕೋಠೆ, ಮಾಜಿ ಸಂಸದ ಜಯಸಿದ್ದೇಶ್ವರ ಸ್ವಾಮೀಜಿ, ಜಿಲ್ಲಾಧಿಕಾರಿ ಕುಮಾರ್ ಆಶೀರ್ವಾದ, ಕೋಲ್ಹಾಪುರ ವಿಭಾಗಿಯ ಐ. ಜಿ. ಸುನೀಲ ಫುಲಾರಿ, ಜಿಲ್ಲಾ ಪಂಚಾಯಿತಿ ಸಿಇಒ ಕುಲದೀಪ ಜಂಗಮ, ಮಹಾನಗರ ಪಾಲಿಕೆ ಆಯುಕ್ತ ಸಚಿನ ಒಂಬಾಸೆ, ಸ್ಟಾರ್ ಏರ್ ಲೈನ್ಸ್ ಸಂಸ್ಥಾಪಕ ಸಂಜಯ ಘೋಡಾವತ್‌, ಪೊಲೀಸ್ ಅಧಿಕ್ಷಕ ಅತುಲ ಕುಲಕರ್ಣಿ, ವಿಮಾನ ನಿಲ್ದಾಣದ ಸಹಾಯಕ ವ್ಯವಸ್ಥಾಪಕ ಅಂಜನಿ ಕುಮಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.