ADVERTISEMENT

ಹಿಂದಿ ಹೇರಿಕೆ ಗುಜರಾತ್‌ನಿಂದ ಜಾರಿಯಾಗಲಿ! ಟಿಆರ್‌ಎಸ್‌ ನಾಯಕರ ಸವಾಲು

ಐಎಎನ್ಎಸ್
Published 23 ಅಕ್ಟೋಬರ್ 2022, 8:29 IST
Last Updated 23 ಅಕ್ಟೋಬರ್ 2022, 8:29 IST
ಕೆ.ಟಿ ರಾಮರಾವ್‌
ಕೆ.ಟಿ ರಾಮರಾವ್‌    

ಹೈದರಾಬಾದ್‌: ಐಐಟಿಯಂತಹ ತಾಂತ್ರಿಕ ಮತ್ತು ತಾಂತ್ರಿಕೇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ ಮಾಧ್ಯಮ ಹಿಂದಿ ಮತ್ತು ಸ್ಥಳೀಯ ಭಾಷೆ ಆಗಿರಬೇಕು ಎಂಬ ಸಂಸದೀಯ ಸಮಿತಿಯ ಶಿಫಾರಸಿಗೆ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ತೀವ್ರ ವಿರೋಧ ವ್ಯಕ್ತಪಡಿಸಿದೆ.

ಈ ಬಗ್ಗೆ ಕೇವಲ ಹೇಳಿಕೆಯನ್ನಷ್ಟೆ ಬಿಡುಗಡೆ ಮಾಡದ ಟಿಆರ್‌ಎಸ್, ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ. ಹಿಂದಿ ಏರಿಕೆಯಿಂದಾಗುವ ಅಪಾಯಗಳ ಬಗ್ಗೆ ಆತಂಕ ವ್ಯಕ್ತಪಡಿಸಿದೆ.

ಟಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಅವರು ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಇದು ಅಸಾಂವಿಧಾನಿಕ ಎಂದಿದ್ದಾರೆ. ಅಲ್ಲದೇ, ಸಮಿತಿ ಶಿಫಾರಸನ್ನು ಅಂಗೀಕರಿಸಬಾರದು ಎಂದು ಆಗ್ರಹಿಸಿದ್ದಾರೆ.

ADVERTISEMENT

ಹಿಂದಿಯ ಪರೋಕ್ಷ ಹೇರಿಕೆಯು ಕೋಟ್ಯಂತರ ಯುವಕರ ಜೀವನವನ್ನು ಹೇಗೆ ಹಾಳುಮಾಡುತ್ತಿದೆ ಎಂಬುದನ್ನು ಟಿಆರ್‌ಎಸ್ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಕೇಂದ್ರೀಯ ಉದ್ಯೋಗಗಳಿಗೆ ಅರ್ಹತಾ ಪರೀಕ್ಷೆಗಳು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ನಡೆಯುತ್ತವೆ. ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಉದ್ಯೋಗಾವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಅವರು ಬರೆದಿದ್ದಾರೆ. ಆದ್ದರಿಂದ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲೂ ನಡೆಸುವಂತೆ ಅವರು ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಪ್ರಯತ್ನವು ಭಾರತದಲ್ಲಿ ಸಾಮಾಜಿಕ–ಆರ್ಥಿಕ ವಿಭನೆಗೆ ಕಾರಣವಾಗಲಿದೆ ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಇದಿಷ್ಟೇ ಅಲ್ಲದೇ ಹಲವು ನಾಯಕರು ಕೇಂದ್ರ ನಡೆಯನ್ನು ಖಂಡಿಸಿದ್ದಾರೆ. ಬಿಜೆಪಿಯು ಭಾಷೆ ವಿಚಾರದಲ್ಲಿ ದ್ವಂದ್ವ ನಿಲುವು ಹೊಂದಿದೆ ಎಂದು ಆರೋಪಿಸಿದ್ದಾರೆ. ಹಿಂದಿ ಜಾರಿಯನ್ನು ಗುಜರಾತ್‌ನಿಂದ ಆರಂಭಿಸಲು ಬಿಜೆಪಿಗೆ ಧೈರ್ಯವಿದೆಯೇ ಎಂಬ ಪ್ರಶ್ನೆಗಳು ಕೇಳಿ ಬಂದಿವೆ.

‘ಗುಜರಾತ್ ಸರ್ಕಾರವು ಫೆಬ್ರುವರಿಯಲ್ಲಿ ರಾಜ್ಯದ ಎಲ್ಲಾ ಸೂಚನಾ ಫಲಕಗಳು ಗುಜರಾತಿಯಲ್ಲಿ ಇರಬೇಕೆಂಬ ನಿರ್ಧಾರವನ್ನು ತೆಗೆದುಕೊಂಡಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಹಿಂದಿಯನ್ನು ಕಲಿಯಬೇಕು ಎಂದು ರಾಜ್ಯಗಳನ್ನು ಒತ್ತಾಯಿಸುತ್ತಿದೆ. ಆದರೆ ಗುಜರಾತ್ ಕೇವಲ ಗುಜರಾತಿ ಬಗ್ಗೆ ಮಾತನಾಡುತ್ತಿದೆ. ಹಿಂದಿ ಕಲಿಯುವಂತೆ ಕೇಂದ್ರ ಸರ್ಕಾರ ದಕ್ಷಿಣದ ರಾಜ್ಯಗಳಿಗೆ ಬೋಧಿಸುವ ಬದಲಿಗೆ, ಗುಜರಾತ್‌ನಿಂದಲೇ ಹಿಂದಿಯನ್ನು ಜಾರಿ ಮಾಡಲಿ’ ಎಂದು ಟಿಆರ್‌ಎಸ್‌ನ ಸಾಮಾಜಿಕ ಮಾಧ್ಯಮ ವಿಭಾಗದ ಸಂಚಾಲಕ, ರಾಜ್ಯ ಖನಿಜ ಅಭಿವೃದ್ಧಿ ನಿಗಮದ (ಟಿಎಸ್‌ಎಂಡಿ) ಅಧ್ಯಕ್ಷರಾದ ಕ್ರಿಶಾಂಕ್ ಮಣ್ಣೆ ಆಗ್ರಹಿಸಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.