ADVERTISEMENT

ರಾಜ್ಯ ಸರ್ಕಾರಗಳೇ ಒಳಮೀಸಲಾತಿ ಸೌಲಭ್ಯ ನೀಡಲಿ: ಎಲ್‌.ಹನುಮಂತಯ್ಯ

ವರದಿ ಅನುಷ್ಠಾನ; ನಿರ್ಲಕ್ಷ್ಯ ತೋರಿದ ಸಿದ್ದರಾಮಯ್ಯ: ಎಲ್‌.ಹನುಮಂತಯ್ಯ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 17:02 IST
Last Updated 10 ಅಕ್ಟೋಬರ್ 2020, 17:02 IST
ಎಲ್‌. ಹನುಮಂತಯ್ಯ
ಎಲ್‌. ಹನುಮಂತಯ್ಯ   

ನವದೆಹಲಿ: ಪರಿಶಿಷ್ಟ ಜಾತಿಯಲ್ಲಿ ಅತ್ಯಂತ ಹಿಂದುಳಿದಿರುವ ಜನಾಂಗದವರಿಗೆ ಒಳಮೀಸಲಾತಿ ಸೌಲಭ್ಯ ನೀಡುವಂತೆ ದೇಶದಾದ್ಯಂತ ಕೂಗು ಎದ್ದಿದೆ ಎಂದು ರಾಜ್ಯಸಭೆ ಸದಸ್ಯ, ಕಾಂಗ್ರೆಸ್‌ನ ಡಾ.ಎಲ್‌. ಹನುಮಂತಯ್ಯ ಅಭಿಪ್ರಾಯಪಟ್ಟರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಅಸ್ಪೃಶ್ಯರಲ್ಲದವರೂ ಪರಿಶಿಷ್ಟ ಜಾತಿಯಲ್ಲಿ ಸ್ಥಾನ ಪಡೆದಿರುವುದರಿಂದ ಅತ್ಯಂತ ಹಿಂದುಳಿದ ಮಾದಿಗ ಸಮಮುದಾಯದ ಜನತೆಗೆ ಅನ್ಯಾಯವಾಗಿದೆ. ಒಳಮೀಸಲಾತಿಯು ಪರಿಶಿಷ್ಟರನ್ನು ಒಡೆಯಲಿದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ ಎಂದರು.

ಒಳಮೀಸಲಾತಿ ಕುರಿತು ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಇತ್ತೀಚೆಗೆ ಮಹತ್ವದ ತೀರ್ಪು ನೀಡಿದೆ. ಕೇಂದ್ರ ಸರ್ಕಾರವು ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಒಳಮೀಸಲಾತಿ ದೊರೆಯುವಂತೆ ನೋಡಿಕೊಳ್ಳಬೇಕು. ಇಲ್ಲವೇ, ತಿದ್ದುಪಡಿ ತರದೆಯೇ ಆಯಾ ರಾಜ್ಯ ಸರ್ಕಾರಗಳೇ ಒಳಮೀಸಲಾತಿ ಸೌಲಭ್ಯ ಕಲ್ಪಿಸಲು ಅವಕಾಶ ನೀಡಬೇಕು ಎಂದು ಅವರು ಕೋರಿದರು.

ADVERTISEMENT

ಸಾಮಾಜಿಕ ನ್ಯಾಯ ಒದಗಿಸುವುದಾಗಿ ಘೋಷಿಸಿದ್ದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ, ಒಳಮೀಸಲಾತಿಯ ವರ್ಗೀಕರಣಕ್ಕೆ ಒತ್ತು ನೀಡಿರುವ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯ ಅನುಷ್ಠಾನಕ್ಕೆ ಶ್ರಮಿಸಲಿಲ್ಲ ಎಂದು ಅವರು ದೂರಿದರು.

ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಚುನಾವಣೆ ರಾಜಕೀಯವನ್ನೇ ಮುಂದಿರಿಸಿ ವರದಿಯ ಅನುಷ್ಠಾನಕ್ಕೆ ಮೀನ–ಮೇಷ ಎಣಿಸಿದ್ದು ತಪ್ಪಾಯಿತು ಎಂದ ಅವರು, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅನುಷ್ಠಾನದ ನಿಟ್ಟಿನಲ್ಲಿ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಪರಿಶಿಷ್ಟರಲ್ಲಿ ಬಲಿಷ್ಠವಾದ ಜಾತಿಯ ಜನ ಅಧಿಕ ಪ್ರಮಾಣದಲ್ಲಿ ಮೀಸಲಾತಿ ಸೌಲಭ್ಯ ಪಡೆಯುತ್ತಿದ್ದು, ದುರ್ಬಲರು ಹಿಂದುಳಿಯುತ್ತಿದ್ದಾರೆ. ಇದು ಅಸಮಾನತೆ ಮುಂದುವರಿಯಲು ಕಾರಣವಾಗಿದೆ ಎಂದ ಅವರು, ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಸರ್ಕಾರಿ ಸೌಲಭ್ಯವು ಬಲಿಷ್ಠರ ಪಾಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪರಿಶಿಷ್ಟರಲ್ಲಿ ಬಲಿಷ್ಠ ಸಮುದಾಯಕ್ಕೆ ಸೇರಿದ ರಾಜಕೀಯ ಮುಖಂಡರು, ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯಲ್ಲಿ ಅಂಕಿ– ಅಂಶಗಳು ಅಸಮರ್ಪಕವಾಗಿವೆ ಎಂಬ ಕಾರಣ ಮುಂದಿರಿಸಿದ್ದರಿಂದ ಅನುಷ್ಠಾನ ವಿಳಂಬವಾಗಿದೆ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರವು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೆ ಪದಾಧಿಕಾರಿಗಳನ್ನು ನೇಮಕ ಮಾಡದೆ ನಿರ್ಲಕ್ಷ್ಯ ತಾಳಿರುವುದು ಸರಿಯಲ್ಲ. ಪರಿಶಿಷ್ಟರ ಮೇಲಿನ ದೌರ್ಜನ್ಯಗಳು ನಿರಂತರ ಹೆಚ್ಚುತ್ತಿರುವುದರಿಂದ ತಡೆಗಾಗಿ ಅಗತ್ಯ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಅವರು ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.