ADVERTISEMENT

ವೇಗದೂತ ವಂದೇ ಭಾರತ್‌ ರೈಲಿನ ಮೇಲೆ ಮತ್ತೆ ಕಲ್ಲು ತೂರಾಟ

ಏಜೆನ್ಸೀಸ್
Published 24 ಫೆಬ್ರುವರಿ 2019, 12:46 IST
Last Updated 24 ಫೆಬ್ರುವರಿ 2019, 12:46 IST
   

ನವದೆಹಲಿ: ದೇಶೀಯ ನಿರ್ಮಿತ ಅತಿ ವೇಗದ ರೈಲು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಮೇಲೆ ಕಿಡಿಗೇಡುಗಳು ಮತ್ತೆ ಕಲ್ಲು ತೂರಿದ್ದಾರೆ. ವಾರಣಸಿ–ದೆಹಲಿ ನಡುವೆ ಸಂಚರಿಸುತ್ತಿದ್ದ ರೈಲಿಗೆ ಶನಿವಾರ ಕಲ್ಲು ತೂರಿರುವ ಪರಿಣಾಮ, ರೈಲ್ವೆ ಚಾಲಕನ ಮುಂದಿನ ಗಾಜಿನ ಪರದೆ ಹಾಗೂ ಅಕ್ಕ–ಪಕ್ಕದ ಕಿಟಿಕಿ ಗಾಜುಗಳಿಗೆ ಹಾನಿಯಾಗಿದೆ.

ಡಿಬ್ರೂಗಢ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಜಾನುವಾರಿನ ಮೇಲೆ ಹರಿದು ಸಾಗಿದ್ದು, ಈ ಘಟನೆಯ ಬೆನ್ನಲೇ ಉತ್ತರ‍ಪ್ರದೇಶದ ಅಛಲ್ದಾದಲ್ಲಿ ರೈಲಿನ ಮೇಲೆ ಕಲ್ಲು ತೂರುವುದು ಪ್ರಾರಂಭವಾಗಿದೆ ಎಂದು ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಅಧಿಕಾರಿ ಹೇಳಿದ್ದಾರೆ.

ಚಾಲಕನ ವಿಂಡ್‌ಸ್ಕ್ರೀನ್‌, ಸಿ4, ಸಿ6, ಸಿ8, ಸಿ13 ಬೋಗಿಗಳಲ್ಲಿ ಒಂದೊಂದು ಕಿಟಿಕಿ ಗಾಜು ಪುಡಿಯಾಗಿವೆ ಹಾಗೂ ಸಿ12ನಲ್ಲಿ ಎರಡು ಕಿಟಕಿಗಳ ಗಾಜುಗಳಿಗೆ ಹಾನಿಯಾಗಿದೆ. ಕಲ್ಲು ತೂರಾಟದ ಬಳಿಕ ತಾಂತ್ರಿಕ ಸಿಬ್ಬಂದಿ ರೈಲಿಗೆ ಆಗಿರುವ ಹಾನಿಯ ಪರಿಶೀಲನೆ ನಡೆಸಿದ್ದು, ಸಂಚಾರಕ್ಕೆ ತೊಂದರೆ ಎಂದಿದ್ದಾರೆ.

ADVERTISEMENT

ಅಲ್ಲಿಂದ ವಂದೇ ಭಾರತ್‌ ಎಕ್ಸ್‌ಪ್ರೆಸ್‌, ತನ್ನ ಎಂದಿನ ವೇಗದಲ್ಲಿ ಸಂಚಾರ ಮುಂದುವರಿಸಿ ರಾತ್ರಿ 11:05ಕ್ಕೆ ದೆಹಲಿ ರೈಲ್ವೆ ನಿಲ್ದಾಣ ತಲುಪಿದೆ. ಹಾನಿಯಾಗಿರುವ ಕಿಟಿಕಿಗಳಲ್ಲಿ ರಕ್ಷಣಾ ಪದರಗಳನ್ನು ಅಳವಡಿಸಲಾಗಿದ್ದು, ಭಾನುವಾರ ಬೆಳಿಗ್ಗೆ ವಾರಣಸಿಗೆ ಪ್ರಯಾಣ ಬೆಳೆಸಿದೆ.

ನವದೆಹಲಿ ರೈಲ್ವೆ ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿ ಫೆ.15ರಂದು ಸೆಮಿ–ಹೈಸ್ಪೀಡ್‌ ರೈಲಿಗೆ ಚಾಲನೆ ನೀಡಿದ್ದರು. ಫೆ.17ರಿಂದ ಸಾರ್ವಜನಿಕ ಸಂಚಾರ ಪ್ರಾರಂಭಿಸಿತ್ತು. ಈವರೆಗೂ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ನಾಲ್ಕು ಬಾರಿ ಕಲ್ಲು ತೂರಾಟ ನಡೆದಿದೆ. 2018ರ ಡಿಸೆಂಬರ್‌ನಲ್ಲಿ ಪರೀಕ್ಷಾರ್ಥ ಸಂಚಾರದ ವೇಳೆ, 2019ರ ಫೆ.2 ಹಾಗೂ ಫೆ.20ರಂದು ಈ ರೈಲಿನ ಮೇಲೆ ಕಲ್ಲು ತೂರಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.