ADVERTISEMENT

Stray Dogs Case|ಬೀದಿ ನಾಯಿ ಹಾವಳಿ: ನ.3ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

ಪಿಟಿಐ
Published 2 ನವೆಂಬರ್ 2025, 13:09 IST
Last Updated 2 ನವೆಂಬರ್ 2025, 13:09 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ಬೀದಿ ನಾಯಿಗಳ ಹಾವಳಿ ತಡೆಗಟ್ಟುವಿಕೆ ಕುರಿತ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಸೋಮವಾರ ವಿಚಾರಣೆ ನಡೆಸಲಿದೆ.

ನ್ಯಾಯಮೂರ್ತಿಗಳಾದ ವಿಕ್ರಮನಾಥ್, ಸಂದೀಪ್ ಮೆಹ್ತಾ ಹಾಗೂ ಎನ್‌.ವಿ.ಅಂಜಾರಿಯಾ ಅವರಿರುವ ವಿಶೇಷ ನ್ಯಾಯಪೀಠವು ವಿಚಾರಣೆ ನಡೆಸಲಿದೆ. ನ್ಯಾಯಾಲಯದ ಆದೇಶದಂತೆ ಪಶ್ಚಿಮ ಬಂಗಾಳ ಹಾಗೂ ತೆಲಂಗಾಣ ರಾಜ್ಯಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಪೀಠದ ಮುಂದೆ ಹಾಜರಾಗಬೇಕಿದೆ. 

ಪ್ರಾಣಿಗಳ ಜನನ ನಿಯಂತ್ರಣ (ಎಬಿಸಿ) ನಿಯಮಗಳ ಅನುಸಾರ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ತಿಳಿಸಿ ಎಂದು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ‍ಪ್ರದೇಶಗಳಿಗೆ ಆ.22ರಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು.  

ADVERTISEMENT

ಅ.27ರಂದು ವಿಚಾರಣೆ ನಡೆಸಿದ ಪೀಠವು, ‘ತಾನು ಆದೇಶ ನೀಡಿದ್ದರೂ ಪಶ್ಚಿಮ ಬಂಗಾಳ ಮತ್ತು ತೆಲಂಗಾಣ ಹೊರತುಪಡಿಸಿ ಇತರ ಯಾವುದೇ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಪ್ರಮಾಣ ಪತ್ರ ಸಲ್ಲಿಸಿಲ್ಲ’ ಎಂದು ತರಾಟೆಗೆ ತೆಗೆದುಕೊಂಡಿತ್ತು. ಹೀಗಾಗಿ ಎಲ್ಲಾ ಮುಖ್ಯ ಕಾರ್ಯದರ್ಶಿಗಳು ವಿಚಾರಣೆಗೆ ಹಾಜಾರಾಗಬೇಕೆಂದು ಆದೇಶಿಸಿತ್ತು. 

ಖುದ್ದಾಗಿ ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ಮುಖ್ಯ ಕಾರ್ಯದರ್ಶಿಗಳು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಅದನ್ನು ನ್ಯಾಯಾಲಯವು ಅ.31ರಂದು ನಿರಾಕರಿಸಿತ್ತು. ‘ಹೀಗಾದರೆ ನ್ಯಾಯಾಲಯದ ಆದೇಶಕ್ಕೆ ಗೌರವವಿರುವುದಿಲ್ಲ’ ಎಂದು ಹೇಳಿತ್ತು. 

ದೆಹಲಿಯಲ್ಲಿ ಬೀದಿ ನಾಯಿ ಕಡಿತದ ಪ್ರಕರಣಗಳು ಹೆಚ್ಚಾಗಿದ್ದು, ಅದರಲ್ಲೂ ಮಕ್ಕಳು ರೇಬಿಸ್‌ಗೆ ಬಲಿಯಾಗುತ್ತಿದ್ದಾರೆ ಎಂಬ ಮಾಧ್ಯಮ ವರದಿ ಆಧಾರದ ಮೇಲೆ ಜುಲೈ 28ರಂದು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಸುಪ್ರೀಂ ಕೋರ್ಟ್‌, ಅದರ ವಿಚಾರಣೆಯನ್ನು ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.