ಭುಗಿಲೆದ್ದ ಪ್ರತಿಭಟನೆ
ಅಹಮದಾಬಾದ್: ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆಯಲ್ಲಿ ಕಿರಿಯ ವಿದ್ಯಾರ್ಥಿ 10ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಕೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಪ್ರತಿಭಟನೆಗಳು ನಡೆದಿವೆ.
ಈ ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಕಾಂಗ್ರೆಸ್‌ನ ರಾಷ್ಟ್ರೀಯ ವಿದ್ಯಾರ್ಥಿ ಸಂಘಟನೆ (NSUI) ಕಾರ್ಯಕರ್ತರು ಹಾಗೂ ಮೃತ ವಿದ್ಯಾರ್ಥಿಯ ಪೋಷಕರು, ಸಂಬಂಧಿಕರು ಸೆವೆಂತ್ ಡೇ ಅಡ್ವೆಂಟಿಸ್ಟ್ ಶಾಲೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆ ಪರಿಣಾಮ ಮನಿನಗರ್, ಕೋಕ್ರಾ ಮತ್ತು ಈಸನ್‌ಪುರ ಸೇರಿ ಇಲ್ಲಿನ ಹಲವು ಪ್ರದೇಶಗಳಲ್ಲಿ 200ಕ್ಕೂ ಹೆಚ್ಚು ಶಾಲೆಗಳು ಮುಚ್ಚಲ್ಪಟ್ಟಿದ್ದವು.
ಶಾಲಾ ಆವರಣದಲ್ಲಿ ಕಳ್ಳತನ, ಜಗಳ ಮತ್ತು ಹೊಡೆದಾಟಗಳು ನಿಯಮಿತವಾಗಿ ನಡೆಯುತ್ತಿವೆ. ಈ ಬಗ್ಗೆ ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದರೂ ಯಾವುದೇ ಕ್ರಮಕೈಗೊಳ್ಳಲಾಗುತ್ತಿಲ್ಲ ಪ್ರತಿಭಟನಾಕಾರರು ದೂರಿದ್ದಾರೆ.
ಇದೇ ವೇಳೆ ರಾಷ್ಟ್ರೀಯ ವಿದ್ಯಾರ್ಥಿ ಸಂಘಟನೆ ಕಾರ್ಯಕರ್ತರು ಶಾಲೆಯನ್ನು ಮುಚ್ಚಬೇಕು ಎಂದು ಆಗ್ರಹಿಸಿದರು. ಕಾರ್ಯಕರ್ತರು ಶಾಲೆಯೊಳಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದರು.
ಲಕ್ಷಾಂತರ ರೂಪಾಯಿ ಶುಲ್ಕ ಪಡೆಯುವ ನೀವು ವಿದ್ಯಾರ್ಥಿಗಳಿಗೆ ಏನು ಕಲಿಸುತ್ತಿದ್ದೀರಿ? ಆಡಳಿತ ಮಂಡಳಿ ಸರಿಯಾದ ಕ್ರಮ ತೆಗೆದುಕೊಂಡಿದ್ದರೆ ಈ ಕೊಲೆ ನಡೆಯುತ್ತಿರಲಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರೊಬ್ಬರು ಪ್ರತಿಭಟನೆ ವೇಳೆ ಹೇಳಿದ್ದಾರೆ.
ಶಾಲಾ ಆಡಳಿತ ಮಂಡಳಿಯಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಶಿಕ್ಷಣ ಸಚಿವ ಪ್ರಫುಲ್ ಪನ್ಶೇರಿಯಾರವರು, ಹತ್ಯೆ ಮಾಡಿರುವ, ಕಾನೂನು ಸಂಘರ್ಷಕ್ಕೆ ಒಳಪಟ್ಟ ವಿದ್ಯಾರ್ಥಿಯನ್ನು ವಶಕ್ಕೆ ಪಡೆಯಲಾಗಿದೆ. ಜನರು ಶಾಂತಿ ಕಾಪಾಡುವಂತೆ ಅವರು ಮನವಿ ಮಾಡಿದ್ದಾರೆ.
ಶಾಲೆಯನ್ನು ಧ್ವಂಸ ಮಾಡಿದ್ದಕ್ಕೆ ಆಡಳಿತ ಮಂಡಳಿಯು ಪೊಲೀಸರಿಗೆ ದೂರು ನೀಡಿದೆ. 500ಕ್ಕೂ ಹೆಚ್ಚು ಜನರ ವಿರುದ್ಧ ಗಲಭೆ, ಹಲ್ಲೆ ಹಾಗೂ ಆಸ್ತಿ ನಷ್ಟ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.