
ಐಸ್ಟಾಕ್ ಚಿತ್ರ
ನವದೆಹಲಿ: ‘ಕ್ಷಮಿಸು ಮಮ್ಮಿ. ಎಷ್ಟೋ ಬಾರಿ ನಿಮಗೆ ಬೇಸರ ತಂದಿದ್ದೇನೆ. ಇದು ಕೊನೆಯ ಬಾರಿ. ಶಾಲೆಯಲ್ಲಿ ಶಿಕ್ಷಕರು ಇರುವುದೇ ಹಾಗೆ. ಅವರ ಬಗ್ಗೆ ಏನು ಹೇಳಲಿ...’ ಎಂದು ಡೆತ್ ನೋಟ್ ಬರೆದಿಟ್ಟ 10ನೇ ತರಗತಿ ವಿದ್ಯಾರ್ಥಿ ದೆಹಲಿ ಮೆಟ್ರೊಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ.
ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಾಲಕ ಮತ್ತು ಆತ ಬರೆದಿಟ್ಟ ಡೆತ್ ನೋಟ್ ತೀವ್ರ ಆಘಾತ ಸೃಷ್ಟಿಸಿದೆ.
ಮಗನ ಸಾವಿನಿಂದ ತೀವ್ರವಾಗಿ ನೊಂದಿರುವ ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದು, ಅದರಲ್ಲಿ ತಮ್ಮ ಪುತ್ರನ ಸಾವಿಗೆ ಶಾಲೆಯ ಪ್ರಾಂಶುಪಾಲ ಮತ್ತು ಮೂವರು ಶಿಕ್ಷಕರೇ ಕಾರಣ ಎಂದು ಆರೋಪಿಸಿದ್ದಾರೆ.
‘ಬೆಳಿಗ್ಗೆ ಎಂದಿನಂತೆ ಮಗನನ್ನು ಶಾಲೆಗೆ ಬಿಟ್ಟೆ. ಮಧ್ಯಾಹ್ನ 2.45ರ ಸುಮಾರಿಗೆ ಕರೆಯೊಂದು ಬಂತು. ದೆಹಲಿ ಕೇಂದ್ರ ಭಾಗದಲ್ಲಿರುವ ರಾಜೇಂದ್ರ ಮೆಟ್ರೊ ನಿಲ್ದಾಣದ ಬಳಿ ಮಗ ತೀವ್ರವಾಗಿ ಗಾಯಗೊಂಡಿದ್ದಾನೆ ಎಂಬ ಸುದ್ದಿ ಆಘಾತ ತಂದಿತು. ಗಾಯಗೊಂಡ ಮಗನನ್ನು ಬಿಎಲ್ ಕಪೂರ್ ಆಸ್ಪತ್ರೆಗೆ ಕರೆತರುವಂತೆ ಕರೆ ಮಾಡಿದವರಿಗೆ ಮನವಿ ಮಾಡಿಕೊಂಡೆ. ಕುಟುಂಬದವರೊಂದಿಗೆ ಆಸ್ಪತ್ರೆಗೆ ಹೋದೆ. ಆದರೆ ಅಷ್ಟರೊಳಗೆ ಆತ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು’ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
‘ಶಾಲೆಯಲ್ಲಿ ಶಿಕ್ಷಕರೊಬ್ಬರು ಕಳೆದ ಕೆಲ ದಿನಗಳಿಂದ ಮಗನಿಗೆ ಬೆದರಿಕೆಯೊಡ್ಡುತ್ತಿದ್ದರು. ವರ್ಗಾವಣೆ ಪತ್ರ ನೀಡಿ ಶಾಲೆಯಿಂದ ಹೊರಹಾಕುವುದಾಗಿ ಹೆದರಿಸುತ್ತಿದ್ದರು ಎಂದು ಮಗನ ಸ್ನೇಹಿತರು ಹೇಳಿದ್ದಾರೆ. ಶಾಲೆಯಲ್ಲಿ ಶಿಕ್ಷಕರು ನೀಡುತ್ತಿದ್ದ ಮಾನಸಿಕ ಕಿರುಕುಳ ಕುರಿತು ಸದಾ ತನ್ನ ತಾಯಿ ಬಳಿ ಮಗ ಹೇಳಿಕೊಳ್ಳುತ್ತಿದ್ದ. ಅದನ್ನು ಶಾಲೆಯ ಗಮನಕ್ಕೆ ತಂದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
‘ಬಾಲಕನ ಚೀಲದಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ‘ಈ ಚೀಟಿ ಯಾರಿಗೇ ದೊರೆತರೂ, ತಕ್ಷಣ ಈ ಸಂಖ್ಯೆಗೆ ಕರೆ ಮಾಡಿ. ನಾನು ತೆಗೆದುಕೊಂಡಿರುವ ಈ ನಿರ್ಧಾರಕ್ಕಾಗಿ ಕ್ಷಮೆ ಕೋರುತ್ತೇನೆ. ಆದರೆ ಶಾಲೆಯಲ್ಲಿ ಏನು ನಡೆದಿದೆಯೋ ಅದನ್ನು ಎದುರಿಸಲು ನನ್ನ ಬಳಿ ಇದನ್ನು ಹೊರತುಪಡಿಸಿ ಅನ್ಯ ಮಾರ್ಗವೇ ಇರಲಿಲ್ಲ’ ಎಂದು ಬಾಲಕ ಬರೆದಿದ್ದಾನೆ ಎಂದು ವರದಿಯಾಗಿದೆ.
‘ಜತೆಗೆ ತನ್ನ ಅಂಗಾಂಗಳು ಸುಸ್ಥಿತಿಯಲ್ಲಿದ್ದರೆ ಅವುಗಳನ್ನು ಅಗತ್ಯ ಇರುವವರಿಗೆ ದಾನ ಮಾಡಿ’ ಎಂದೂ ಬಾಲಕ ಮನವಿ ಮಾಡಿಕೊಂಡಿದ್ದಾನೆ.
20 ವರ್ಷದ ತನ್ನ ಅಣ್ಣನ್ನು ನೆನೆದಿರುವ ಬಾಲಕ, ಅವರ ಕ್ಷಮೆಯನ್ನೂ ಕೋರಿದ್ದಾನೆ. ಎಷ್ಟೋ ಬಾರಿ ಅವರಿಗೆ ನೋವಾಗುವಂತೆ ನಡೆದುಕೊಂಡಿದ್ದೇನೆ. ಆದರೆ ನಾನೊಬ್ಬ ಉತ್ತಮ ಮನಷ್ಯನಾಗಲು ಸಾಧ್ಯವಾಗದಿದ್ದಕ್ಕೆ ತಂದೆಗೆ ಮತ್ತು ಸದಾ ಬೆಂಬಲವಾಗಿ ನಿಂತ ತಾಯಿಗೆ ಧನ್ಯವಾದ ಹೇಳಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.