ADVERTISEMENT

ಇಸ್ರೇಲ್‌ ರಾಯಭಾರ ಕಚೇರಿ ಬಳಿ ಸ್ಫೋಟ ಪ್ರಕರಣ: ನಾಲ್ವರು ವಿದ್ಯಾರ್ಥಿಗಳ ಬಂಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜೂನ್ 2021, 14:34 IST
Last Updated 24 ಜೂನ್ 2021, 14:34 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಇದೇ ವರ್ಷ ಜನವರಿಯಲ್ಲಿ ಇಸ್ರೇಲ್‌ ರಾಯಭಾರ ಕಚೇರಿಯ ಬಳಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಲಡಾಖ್‌ ಮೂಲದ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರ ವಿಶೇಷ ತಂಡವು ಲಡಾಖ್‌ನ ಕಾರ್ಗಿಲ್‌ನಲ್ಲಿ ವಿದ್ಯಾರ್ಥಿಗಳನ್ನು ಬಂಧಿಸಿ ರಾಷ್ಟ್ರ ರಾಜಧಾನಿಗೆ ಕರೆತಂದಿದ್ದಾರೆ.

ಬಂಧಿತರನ್ನು ಕಾರ್ಗಿಲ್‌ನ ಥಾಂಗ್ ಗ್ರಾಮದ ನಿವಾಸಿಗಳಾದ ನಜೀರ್ ಹುಸೇನ್ (26), ಜುಲ್ಫಿಕರ್ ಅಲಿ ವಜೀರ್ (25), ಐಯಾಜ್ ಹುಸೇನ್ (28) ಮತ್ತು ಮುಜಮ್ಮಿಲ್ ಹುಸೇನ್ (25) ಎಂದು ಗುರುತಿಸಲಾಗಿದೆ.

ADVERTISEMENT

ಪೊಲೀಸರ ಪ್ರಕಾರ, ಜಿಂದಾಲ್‌ ಹೌಸ್‌ ಸಮೀಪ ಎಪಿಜೆ ಅಬ್ದುಲ್‌ ಕಲಾಂ ರಸ್ತೆಯಲ್ಲಿ ಆ ದಿನ ಸಂಜೆ (2021ರ ಜನವರಿ 29) ಕಡಿಮೆ ತೀವ್ರತೆಯ ಸುಧಾರಿತ ಸಾಧನ ಸ್ಫೋಟಗೊಂಡಿತ್ತು.

ಸ್ಫೋಟ ಸ್ಥಳದ ಸಮೀಪದಲ್ಲಿದ್ದ ಮೂರು ಕಾರುಗಳ ಕಿಟಕಿಗಳ ಗಾಜುಗಳಿಗೆ ಹಾನಿಯಾಗಿತ್ತು, ಅದನ್ನು ಹೊರತು ಪಡಿಸಿದರೆ ಕಟ್ಟಡಗಳಿಗೆ ಹಾನಿಯಾಗಿರಲಿಲ್ಲ ಹಾಗೂ ಯಾವುದೇ ವ್ಯಕ್ತಿಗೆ ತೊಂದರೆಯಾಗಿರಲಿಲ್ಲ.

ಭಾರತ ಮತ್ತು ಇಸ್ರೇಲ್‌ ನಡುವೆ ರಾಜತಾಂತ್ರಿಕ ಸಂಬಂಧ ಆರಂಭವಾದ ವಾರ್ಷಿಕೋತ್ಸವದ ದಿನವೇ ಸ್ಫೋಟ ಸಂಭವಿಸಿತ್ತು. 1992ರ ಜನವರಿ 29ರಿಂದ ಭಾರತ–ಇಸ್ರೇಲ್‌ ನಡುವೆ ರಾಜತಾಂತ್ರಿಕ ಬಾಂಧವ್ಯ ವೃದ್ಧಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.