ADVERTISEMENT

ಜಾಮಿಯಾ ಮಿಲಿಯಾ ವಿವಿ ಲೈಬ್ರರಿಯಲ್ಲಿದ್ದವರು 'ಕಲ್ಲು ತೂರಾಟಗಾರರು': ಬಿಜೆಪಿ

ಏಜೆನ್ಸೀಸ್
Published 17 ಫೆಬ್ರುವರಿ 2020, 7:48 IST
Last Updated 17 ಫೆಬ್ರುವರಿ 2020, 7:48 IST
ಅಮಿತ್ ಮಾಳವೀಯ
ಅಮಿತ್ ಮಾಳವೀಯ   

ನವದೆಹಲಿ: ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿ ಲೈಬ್ರರಿಯಲ್ಲಿ ಪೊಲೀಸರು ದೌರ್ಜನ್ಯ ಎಸಗಿರುವ ಕುರಿತಾದ ವಿಡಿಯೊ ಸದ್ದು ಮಾಡಿರುವಂತೆಯೇ, ಅಲ್ಲಿದ್ದ ವಿದ್ಯಾರ್ಥಿಗಳು ವಾಸ್ತವವಾಗಿ ಕಲ್ಲು ತೂರಾಟಗಾರರು ಎಂಬುದನ್ನು ವಿಡಿಯೊದಲ್ಲಿ ಸ್ಪಷ್ಟವಾಗಿ ತೋರಿಸಲಾಗಿದ್ದು, ಈ ಬಗ್ಗೆ ತನಿಖಾ ಏಜೆನ್ಸಿಗಳು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮಾಳವೀಯ ಅವರು, ಲೈಬ್ರರಿಯಲ್ಲಿದ್ದ ವಿದ್ಯಾರ್ಥಿಗಳು ಕೈಯಲ್ಲಿ ಕಲ್ಲುಗಳನ್ನು ಹಿಡಿದುಕೊಂಡಿದ್ದರು, ಮುಖವಾಡ (ಮಾಸ್ಕ್) ಧರಿಸಿದ್ದರು ಮತ್ತು 'ಮುಚ್ಚಿಟ್ಟಿದ್ದ' ಪುಸ್ತಕಗಳನ್ನು ಓದುತ್ತಿದ್ದರು ಎಂದು ಹೇಳಿದ್ದಾರೆ. ಈ ಕುರಿತು ಇಂಡಿಯಾ ಟುಡೇ ವರದಿಯ ವಿಡಿಯೊವನ್ನು ಕೂಡ ಅವರು ಟ್ಯಾಗ್ ಮಾಡಿದ್ದಾರೆ.

'ಈ ವಿದ್ಯಾರ್ಥಿಗಳೆಲ್ಲರೂ ಈ ಗ್ರಂಥಾಲಯದಲ್ಲಿ ನಿರಾತಂಕವಾಗಿ, ಆರಾಮವಾಗಿ ಅಧ್ಯಯನದಲ್ಲಿ ಮುಳುಗಿರುವ ಬದಲು, ಆತಂಕದ ಮುಖಭಾವದೊಂದಿಗೆ ಪ್ರವೇಶದ್ವಾರದತ್ತ ನೋಡುತ್ತಿದ್ದರು' ಎಂದು ಮಾಳವೀಯ ಹೇಳಿದ್ದಾರೆ.

ADVERTISEMENT

"ಕಲ್ಲು ತೂರಾಟದ ಸೆಶನ್ ಮುಗಿದ ಬಳಿಕ ಲೈಬ್ರರಿಯಲ್ಲಿ ಅಡಗಿಕೊಳ್ಳಲು ಯತ್ನಿಸಿದ ಜಾಮಿಯಾ ಗಲಭೆಗೋರರ ಅಂಗರಚನಾ ಶಾಸ್ತ್ರವೇ ಇದು?" ಎಂದು ಪ್ರಶ್ನಿಸಿರುವ ಅಮಿತ್ ಮಾಳವೀಯ, "ಜಾಮಿಯಾ ಗಲಭೆಕೋರರು ತಮ್ಮ ಗುರುತನ್ನು ತಾವೇ ಬಯಲಾಗಿಸಿಕೊಂಡಿದ್ದು ಒಳ್ಳೆಯದೇ ಆಯಿತು. ತನಿಖಾ ಏಜೆನ್ಸಿಗಳು ಈ ವಿಡಿಯೊವನ್ನು ಸಾಕ್ಷ್ಯವಾಗಿ ಪರಿಗಣಿಸಬೇಕು" ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ವಿಶ್ವವಿದ್ಯಾಲಯದ ಆವರಣದೊಳಗೆ ಪೊಲೀಸರು ನುಗ್ಗಿ ದೌರ್ಜನ್ಯ ನಡೆಸಿದ್ದಾರೆನ್ನಲಾದ ಘಟನೆ ನಡೆದ ಎರಡು ತಿಂಗಳ ಬಳಿಕ ಹೊಸ ವಿಡಿಯೊವೊಂದು ಕಾಣಿಸಿಕೊಂಡಿದ್ದು, ಅದರಲ್ಲಿ ಅರೆಸೇನಾಪಡೆ ಮತ್ತು ಪೊಲೀಸ್ ಸಿಬ್ಬಂದಿಗಳು ಡಿ.15ರಂದು ವಿದ್ಯಾರ್ಥಿಗಳನ್ನು ಲಾಠಿಯಿಂದ ಥಳಿಸುತ್ತಿದ್ದ ದೃಶ್ಯಗಳು ಇದ್ದವು. ಸಿಸಿಟಿವಿ ದೃಶ್ಯವೆಂಬಂತೆ ಕಂಡುಬರುವ ಈ 45 ಸೆಕೆಂಡುಗಳ ಈ ವಿಡಿಯೊದಲ್ಲಿ, ಏಳೆಂಟು ಪೊಲೀಸ್ ಸಿಬ್ಬಂದಿಗಳು ಓಲ್ಡ್ ರೀಡಿಂಗ್ ಹಾಲ್‌ಗೆ ಪ್ರವೇಶಿಸಿ, ಲಾಠಿಯಿಂದ ವಿದ್ಯಾರ್ಥಿಗಳಿಗೆ ಹೊಡೆಯುತ್ತಿದ್ದ ದೃಶ್ಯ ಕಾಣಿಸುತ್ತಿತ್ತು. ಭದ್ರತಾ ಸಿಬ್ಬಂದಿ ತಮ್ಮ ಮುಖವನ್ನು ಕರವಸ್ತ್ರದಿಂದ ಮುಚ್ಚಿಕೊಂಡಿದ್ದ ದೃಶ್ಯವೂ ಇದರಲ್ಲಿತ್ತು.

ಈ ವಿಡಿಯೊವನ್ನು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳನ್ನೊಳಗೊಂಡ ಜಾಮಿಯಾ ಸಮನ್ವಯ ಸಮಿತಿ ಬಿಡುಗಡೆ ಮಾಡಿತ್ತು. ಆ ಬಳಿಕ, ಪೊಲೀಸರ ಈ ದೌರ್ಜನ್ಯ ನಡೆಯುವ ಮೊದಲಿನ ವಿಡಿಯೊ ಕೂಡ ವೈರಲ್ ಆಗಿತ್ತು. ಅದರಲ್ಲಿ ಕಲ್ಲು ಹಿಡಿದುಕೊಂಡಿರುವ ವಿದ್ಯಾರ್ಥಿಗಳು ಆತಂಕಭರಿತರಾಗಿರುವ ದೃಶ್ಯವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.