ADVERTISEMENT

ಕೊಯಮತ್ತೂರು: ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಂದ ಉಪಗ್ರಹ ಅಭಿವೃದ್ಧಿ

₹ 2.5 ಕೋಟಿ ವೆಚ್ಚ: ಇಂದು ಉದ್ಘಾಟನೆ, ಫೆಬ್ರುವರಿಯಲ್ಲಿ ಇಸ್ರೊಗೆ ಹಸ್ತಾಂತರ

ಪಿಟಿಐ
Published 27 ಜನವರಿ 2021, 10:39 IST
Last Updated 27 ಜನವರಿ 2021, 10:39 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕೊಯಮತ್ತೂರು: ಕೊಯಮತ್ತೂರಿನ ಶ್ರೀಶಕ್ತಿ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿಯ 12 ಜನ ವಿದ್ಯಾರ್ಥಿಗಳು ₹ 2.5 ಕೋಟಿ ವೆಚ್ಚದಲ್ಲಿ ಉಪಗ್ರಹವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.

‘ಶ್ರೀಶಕ್ತಿಸ್ಯಾಟ್‌’ ಎಂದು ಹೆಸರಿಸಲಾಗಿರುವ ಈ ಉಪಗ್ರಹದ ಕಾರ್ಯಾಚರಣೆಗೆ ಇಸ್ರೊ ಅಧ್ಯಕ್ಷ ಡಾ.ಕೆ.ಶಿವನ್‌ ಅವರು ಜ. 28ರಂದು ಚಾಲನೆ ನೀಡುವರು. ಈ ಉಪಗ್ರಹವನ್ನು ಫೆಬ್ರುವರಿಯಲ್ಲಿ ಇಸ್ರೊಗೆ ಹಸ್ತಾಂತರಿಸಲಾಗುತ್ತದೆ ಎಂದು ಕಾಲೇಜಿನ ಚೇರಮನ್‌ ಡಾ.ತಂಗವೇಲ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೇಂದ್ರ ಸರ್ಕಾರವು ಬಾಹ್ಯಾಕಾಶ ಕ್ಷೇತ್ರದಲ್ಲಿ ಸಂಶೋಧನೆಗೆ ಉತ್ತೇಜನ ನೀಡುವ ಸಲುವಾಗಿ ಕಳೆದ ವರ್ಷ ‘ಇಂಡಿಯನ್‌ ನ್ಯಾಷನಲ್‌ ಸ್ಪೇಸ್‌ ಪ್ರೊಮೊಷನ್‌ ಆ್ಯಂಡ್‌ ಆಥರೈಜೇಷನ್‌ ಸೆಂಟರ್‌ (ಐಎನ್‌ಎಸ್‌ಪಿಎಸಿ)’ ಸ್ಥಾಪಿಸಿದೆ.

ADVERTISEMENT

‘ಐಎನ್‌ಎಸ್‌ಪಿಎಸಿ ನೆರವು ಹಾಗೂ ಇಸ್ರೊ ಸಹಯೋಗದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಈ ಉಪಗ್ರಹವನ್ನು ಅಭಿವೃದ್ಧಿಪಡಿಸಿದ್ದಾರೆ’ ಎಂದು ಡಾ.ತಂಗವೇಲ್‌ ತಿಳಿಸಿದರು.

‘ಶ್ರೀಶಕ್ತಿಸ್ಯಾಟ್‌ನ ತೂಕ 460 ಗ್ರಾಂ ಇದೆ. ಆದರೆ, 10 ಕೆ.ಜಿ ವರೆಗೆ ತೂಕವಿರುವ ನ್ಯಾನೋ ಉಪಗ್ರಹಗಳಂತೆಯೇ ಇದು ಕಾರ್ಯ ನಿರ್ವಹಿಸುವುದು’ ಎಂದು ತಿಳಿಸಿದರು.

‘ಅಂತರಿಕ್ಷದಲ್ಲಿ ಇಂಟರ್‌ನೆಟ್‌ ಆಫ್‌ ಥಿಂಗ್ಸ್‌, ಈಗಾಗಲೇ ಬಾಹ್ಯಾಕಾಶದಲ್ಲಿರುವ ಉಪಗ್ರಹಗಳ ನಡುವಿನ ಸಂವಹನ ಕುರಿತಂತೆ ಪ್ರಾತ್ಯಕ್ಷಿಕೆ ನೀಡಲು ಶ್ರೀಶಕ್ತಿಸ್ಯಾಟ್‌ ಅನ್ನು ಬಳಸಲಾಗುವುದು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.