ADVERTISEMENT

ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ದೀಪಸ್ತಂಭ: ‘ಬೆಟ್ಟದ ದೀಪ’ಕ್ಕೆ ಕೋರ್ಟ್‌ ಒಪ್ಪಿಗೆ

ಪಿಟಿಐ
Published 6 ಜನವರಿ 2026, 15:55 IST
Last Updated 6 ಜನವರಿ 2026, 15:55 IST
   

ಮದುರೈ/ತಮಿಳುನಾಡು: ಇಲ್ಲಿನ ತಿರುಪರನ್‌ಕುಂದ್ರಂ ಬೆಟ್ಟದಲ್ಲಿರುವ ದೀಪ ಸ್ತಂಭದಲ್ಲಿ ದೀಪ ಹಚ್ಚಲು ಅನುಮತಿ ನೀಡಿ ಏಕಸದಸ್ಯ ಪೀಠ ನೀಡಿದ್ದ ತೀರ್ಪನ್ನು ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠವು ಮಂಗಳವಾರ ಎತ್ತಿ ಹಿಡಿದಿದೆ.

ಬೆಟ್ಟದಲ್ಲಿ ದೀಪಸ್ತಂಭ ಇರುವ ಜಾಗವು ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನಕ್ಕೆ ಸೇರಿದೆ ಎಂದು ಸ್ಪಷ್ಟವಾಗಿ ಹೇಳಿರುವ ನ್ಯಾಯಮೂರ್ತಿ  ಜೆ. ಜಯಚಂದ್ರನ್‌ ಮತ್ತು ಕೆ.ಕೆ. ರಾಮಕೃಷ್ಣನ್‌ ಅವರನ್ನು ಒಳಗೊಂಡ ವಿಭಾಗೀಯ ಪೀಠವು, ‘ಕಾರ್ತಿಕ ಮಾಸದಲ್ಲಿ ಈ  ದೀಪಸ್ತಂಭದಲ್ಲಿ ದೇವಸ್ಥಾನದ ವತಿಯಿಂದಲೇ ದೀಪ ಹಚ್ಚಬೇಕು. ದೀಪ ಹಚ್ಚಲು ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ’ ಎಂದು ಹೇಳಿತು. 

‘ಈ ಪ್ರಕರಣದಲ್ಲಿ ‘ರಾಜಕೀಯ ಕಾರ್ಯಸೂಚಿ’ ಜಾರಿಗಾಗಿ ಈ ಮಟ್ಟಕ್ಕೆ ಇಳಿಯಬಾರದು’ ಎಂದೂ ಪೀಠವು ಆಡಳಿತಾರೂಢ ಡಿಎಂಕೆಗೆ ತಾಕೀತು ಮಾಡಿತು.

ADVERTISEMENT

ಶೈವ ಧರ್ಮದ ಆಗಮ ಶಾಸ್ತ್ರದ ಪ್ರಕಾರ ಈ ಸ್ಥಳದಲ್ಲಿ ದೀಪ ಹಚ್ಚುವುದಕ್ಕೆ ನಿಷೇಧ ಇದೆ ಎನ್ನುವ ವಾದವನ್ನು ಸಾಬೀತುಪಡಿಸಲು ಬಲವಾದ ಸಾಕ್ಷ್ಯಗಳನ್ನು ಹಾಜರುಪಡಿಸಲು ಅರ್ಜಿದಾರರು ವಿಫಲರಾಗಿದ್ದಾರೆ ಎಂದು ನ್ಯಾಯಪೀಠ ಹೇಳಿತು. ಜತೆಗೆ ಬೆಟ್ಟದಲ್ಲಿ ದೀಪ ಹಚ್ಚವುದು ‘ಪದ್ಧತಿ ಅಲ್ಲ’ ಎನ್ನುವುದನ್ನು ಸಾಬೀತುಪಡಿಸುವುದು ಸರ್ಕಾರದ ವಿಷಯವಲ್ಲ’ ಎಂದು ಹೇಳಿತು. 

‘ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿರುವ ದೀಪಸ್ತಂಭದಲ್ಲಿ ದೀಪ ಹಚ್ಚುವುದರಿಂದ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುತ್ತದೆ ಎಂದು ತಮಿಳುನಾಡು ಸರ್ಕಾರ ಇದಕ್ಕೆ ಅನುಮತಿ ನಿರಾಕರಿಸುತ್ತಿರುವುದನ್ನು ನಂಬಲು ಸಾಧ್ಯವಿಲ್ಲ. ಒಂದು ವೇಳೆ ಇಂತಹ ಯಾವುದೇ ಅಹಿತಕರ ಘಟನೆ ನಡೆದರೆ ಅದನ್ನು ರಾಜ್ಯ ಸರ್ಕಾರವೇ ಪ್ರಾಯೋಜಿಸಿದೆ ಎಂದರ್ಥ. ಯಾವುದೇ ರಾಜ್ಯಗಳು, ರಾಜಕೀಯಕ್ಕಾಗಿ ಈ ಮಟ್ಟಕ್ಕೆ ಇಳಿಯಬಾರದು’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

‘ಮುರುಗನ ಭಕ್ತರ ಜಯ’

ದೇವಸ್ಥಾನದ ವತಿಯಿಂದ ದೀಪಸ್ತಂಭದಲ್ಲಿ ದೀಪ ಹಚ್ಚಲು ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದ ವಕೀಲ ರಾಮ ರವಿಕುಮಾರ್ ಕೋರ್ಟ್‌ ಆದೇಶವನ್ನು ಸ್ವಾಗತಿಸಿದ್ದು ‘ಇದು ಮುರುಗನ ಭಕ್ತರಿಗೆ ಲಭಿಸಿದ ಜಯವಾಗಿದೆ’ ಎಂದು ಹೇಳಿದ್ದಾರೆ.  ತೀರ್ಪನ್ನು ಬಿಜೆಪಿ ಸ್ವಾಗತಿಸಿದ್ದು ‘ಕೋರ್ಟ್‌ ಡಿಎಂಕೆ ಕೆನ್ನೆಗೆ ಬಾರಿಸಿದೆ’ ಎಂದು ಹೇಳಿದೆ. 

‘ಡಿಎಂಕೆ ಕಾಂಗ್ರೆಸ್‌ ಮತ್ತು ಇಂಡಿಯಾ ಕೂಟವು ಹಿಂದೂ ಮತ್ತು ಸನಾತನ ಧರ್ಮದ ವಿರೋಧಿಯಾಗಿದೆ’ ಎಂದು ಬಿಜೆ‍ಪಿ ಮುಖಂಡ ಪೀಯೂಷ್‌ ಗೋಯಲ್‌ ಹೇಳಿದ್ದಾರೆ. ‘ಸುಪ್ರೀಂಕೋರ್ಟ್‌ಗೆ ಹೋಗುತ್ತೇವೆ’ ‘ಮದುರೈ ಪೀಠದ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ರಾಜ್ಯ ಸರ್ಕಾರ ಹೊಂದಿದೆ’ ಎಂದು ತಮಿಳುನಾಡಿನ ನೈಸರ್ಗಿಕ ಸಂಪನ್ಮೂಲ ಸಚಿವ ಎಸ್‌. ರಘುಪತಿ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. 

‘ತಿರುಪರನ್‌ಕುಂದ್ರಂ ಬೆಟ್ಟದ ದೀಪಸ್ತಂಭದಲ್ಲಿ ಇದುವರೆಗೆ ದೀಪ ಹಚ್ಚಿರುವುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ. ಹೀಗಿರುವಾಗಿ ಹೊಸ ಸಂಪ್ರದಾಯವನ್ನು ಏಕೆ ಪ್ರಾರಂಭಿಸಬೇಕು’ ಎಂದು ಅವರು ಪ್ರಶ್ನಿಸಿದರು.

ಸರ್ಕಾರದ ವಾದವೇನು?

ಸುಬ್ರಹ್ಮಣ್ಯ ಸ್ವಾಮಿ  ದೇವಸ್ಥಾನ ಕಾಶಿ ವಿಶ್ವನಾಥ ದೇವಸ್ಥಾನ ಸಿಕಂದರ್‌ ಬಾದುಷಾ ದರ್ಗಾ ಇರುವ ತಿರುಪರನ್‌ಕುಂದ್ರಂ ಬೆಟ್ಟವು ಧಾರ್ಮಿಕ ಸಹಬಾಳ್ವೆಯ ತಾಣ. ದೀಪಸ್ತಂಭ ಇರುವ ಸ್ಥಳವು ದರ್ಗಾದಿಂದ 50 ಮೀಟರ್‌ ದೂರದಲ್ಲಿದೆ. ಹೀಗಾಗಿ ಇಲ್ಲಿ ದೀಪ ಹಚ್ಚಲು ಅವಕಾಶ ನೀಡಿದರೆ ಅದು ದರ್ಗಾಕ್ಕೆ ಹಾನಿ ಉಂಟು ಮಾಡುತ್ತದೆ ವಿವಾದಕ್ಕೆ ಕಾರಣವಾಗುತ್ತದೆ ಎಂದು ತಮಿಳುನಾಡು ಸರ್ಕಾರ ವಾದಿಸಿತ್ತು.

‘ದೀಪ ಹಚ್ಚಲು ಅನುಮತಿ ನೀಡಿದರೆ ಆಗಬಹುದಾದ ಗೊಂದಲ ಬಗ್ಗೆ ಜಿಲ್ಲಾಡಳಿತ ವ್ಯಕ್ತಪಡಿಸಿದ್ದ ಆತಂಕವನ್ನು ಕೋರ್ಟ್‌ ಗಮನಿಸಿದೆ. ಇದು ಅವರ ಅನುಕೂಲಕಕ್ಕಾಗಿ ಒಂದು ಸಮುದಾಯವನ್ನು ಇನ್ನೊಂದು ಸಮುದಾಯದ ವಿರುದ್ಧ ಎತ್ತಿಕಟ್ಟಲು ಅವರೇ ಸೃಷ್ಟಿಸಿರುವ ಕಾಲ್ಪನಿಕ ಭೂತ’ ಎಂದು ಕೋರ್ಟ್‌ ಹೇಳಿತು.  ಕಾರ್ತಿಕ ದೀಪೋತ್ಸವ ಆಚರಿಸಿ ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳದ ವ್ಯಾಪ್ತಿಗೆ ಬರುವ ಈ ಬೆಟ್ಟದ ಸಂರಕ್ಷಣೆಗೆ ಸೂಕ್ತ ಕ್ರಮ ವಹಿಸುವಂತೆ ಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಸೂಚಿಸಿದೆ. ಜತೆಗೆ ಕಾರ್ತಿಕ ಮಾಸದ ದೀಪೋತ್ಸವದ (ನವೆಂಬರ್‌–ಡಿಸೆಂಬರ್‌) ಸಂದರ್ಭದಲ್ಲಿ ಬೆಟ್ಟದಲ್ಲಿ ದೀಪ ಹಚ್ಚಲು ದೇವಸ್ಥಾನದ ವತಿಯಿಂದ ಕ್ರಮ ವಹಿಸಬೇಕು. ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್‌ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಬೇಕು ಎಂದು ನ್ಯಾಯಪೀಠ ಸೂಚಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.