ಪ್ರಧಾನಿ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದರು
ಪಿಟಿಐ ಚಿತ್ರ
ನವದೆಹಲಿ: ದೇಶದ ಪ್ರಮುಖ ಸೇನಾ ನೆಲೆಗಳನ್ನು ರಕ್ಷಿಸಲು ಮತ್ತು ಶತ್ರುವಿನ ಬೆದರಿಕೆಗೆ ನಿರ್ಣಾಯಕ ಪ್ರತ್ಯುತ್ತರ ನೀಡಲು ಸ್ವದೇಶಿ ತಂತ್ರಜ್ಞಾನ ಬಳಸಿ ‘ಸುದರ್ಶನ ಚಕ್ರ’ ಹೆಸರಿನ ವಾಯು ರಕ್ಷಣಾ ವ್ಯವಸ್ಥೆ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದರು.
ನೆರೆ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾ ಒಡ್ಡಿರುವ ಭದ್ರತಾ ಸವಾಲುಗಳ ನಡುವೆಯೇ ಪ್ರಧಾನಿ ಈ ಮಹತ್ವದ ಹೇಳಿಕೆ ನೀಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನವದೆಹಲಿಯ ಕೆಂಪುಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ‘ಸುದರ್ಶನ ಚಕ್ರ’ ಯೋಜನೆ ಸೇರಿದಂತೆ ಹಲವು ಘೋಷಣೆಗಳನ್ನು ಮಾಡಿದರು.
ಭಾರತದಲ್ಲೇ ತಯಾರಾಗುವ ಯುದ್ಧ ವಿಮಾನಗಳಿಗೆ ಬೇಕಾದ ಜೆಟ್ ಎಂಜಿನ್‌ಗಳನ್ನು ಸ್ವದೇಶದಲ್ಲೇ ಅಭಿವೃದ್ಧಿಪಡಿಸಲು ಕರೆ ನೀಡಿದ ಅವರು, ಮಿಲಿಟರಿ ಸಲಕರಣೆಗಳಿಗೆ ವಿದೇಶಿ ತಂತ್ರಜ್ಞಾನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬೇಕೆಂದು ಸಲಹೆ ನೀಡಿದರು.
ಪ್ರಧಾನಿಯ ಪ್ರಮುಖ ಘೋಷಣೆಗಳು:
ಸುದರ್ಶನ ಚಕ್ರ;
ವಾಯು ರಕ್ಷಣಾ ವ್ಯವಸ್ಥೆಯನ್ನು ‘ವಿಸ್ತರಿಸಲು, ಬಲಪಡಿಸಲು ಮತ್ತು ಆಧುನೀಕರಣಗೊಳಿಸಲು’ ಭಾರತವು ‘ಸುದರ್ಶನ ಚಕ್ರ’ ಎಂಬ ಯೋಜನೆ ಪ್ರಾರಂಭಿಸಲಿದೆ ಎಂದು ಪ್ರಧಾನಿ ಪ್ರಕಟಿಸಿದರು. ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯ ಅಗತ್ಯವನ್ನು ಒತ್ತಿಹೇಳಿದ ಅವರು, ‘2035ರ ವೇಳೆಗೆ ರಾಷ್ಟ್ರವು ತನ್ನ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ. ಅದಕ್ಕಾಗಿ ಭಗವಾನ್ ಶ್ರೀ ಕೃಷ್ಣನ ಸುದರ್ಶನ ಚಕ್ರದಿಂದ ಸ್ಫೂರ್ತಿ ಪಡೆಯುತ್ತಿದೆ’ ಎಂದು ಹೇಳಿದರು.
‘ಇಡೀ ಆಧುನಿಕ ವ್ಯವಸ್ಥೆಯ ಸಂಶೋಧನೆ, ಅಭಿವೃದ್ಧಿ ಮತ್ತು ತಯಾರಿಕೆ ಭಾರತದಲ್ಲೇ ನಡೆಯಬೇಕು. ನಮ್ಮ ಯುವಜನರ ಪ್ರತಿಭೆಯನ್ನು ಅದಕ್ಕಾಗಿ ಬಳಸಿಕೊಳ್ಳಬೇಕು. ಈ ಪ್ರಬಲ ವ್ಯವಸ್ಥೆಯು ಭಯೋತ್ಪಾದಕ ದಾಳಿಯನ್ನು ಎದುರಿಸುವುದು ಮಾತ್ರವಲ್ಲದೆ, ಭಯೋತ್ಪಾದಕರನ್ನು ಹುಡುಕಿ ಮಟ್ಟಹಾಕಲಿದೆ’ ಎಂದರು.
‘ಸುದರ್ಶನ ಚಕ್ರ’ ಹೆಸರಿನ ವಾಯು ರಕ್ಷಣಾ ವ್ಯವಸ್ಥೆಯ ಬಗ್ಗೆ ಪ್ರಧಾನಿ ಹೆಚ್ಚಿನ ವಿವರಗಳನ್ನು ನೀಡದಿದ್ದರೂ, ಇದು ಇಸ್ರೇಲ್‌ನ ‘ಐರನ್ ಡೋಮ್’ ವಾಯು ರಕ್ಷಣಾ ವ್ಯವಸ್ಥೆಯ ಮಾದರಿಯಲ್ಲಿರಬಹುದು ಎಂದು ತಜ್ಞರು ಹೇಳಿದ್ದಾರೆ.
ಜಿಎಸ್‌ಟಿ ಸುಧಾರಣೆ:
ಪ್ರಧಾನಿ ಅವರು ಸರಕು ಮತ್ತು ಸೇವಾ ತೆರಿಗೆಯಲ್ಲಿ (ಜಿಎಸ್‌ಟಿ) ಭಾರಿ ಪ್ರಮಾಣದ ಸುಧಾರಣೆ ತರುವುದಾಗಿ ಘೋಷಿಸಿದರಲ್ಲದೆ, ದೇಶದ ಜನರಿಗೆ ದೀಪಾವಳಿ ಕೊಡುಗೆಯ ಭರವಸೆ ನೀಡಿದರು.
‘ಜಿಎಸ್‌ಟಿಗೆ ಸಂಬಂಧಿಸಿದ ಮಹತ್ವದ ಸುಧಾರಣೆಗಳನ್ನು ದೀಪಾವಳಿ ವೇಳೆ ಅನಾವರಣಗೊಳಿಸಲಾಗುವುದು. ಅಗತ್ಯ ವಸ್ತುಗಳ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡಲಾಗುವುದು ಮತ್ತು ಎಂಎಸ್‌ಎಂಇಗಳು, ಸಣ್ಣ ವ್ಯಾಪಾರಿಗಳು ಮತ್ತು ಗ್ರಾಹಕರ ಮೇಲಿನ ಹೊರೆ ಇಳಿಸಲಾಗುವುದು’ ಎಂದರು.
ಆರ್ಥಿಕ ಬೆಳವಣಿಗೆಯ ವೇಗ ಹೆಚ್ಚಿಸಲು ಮತ್ತು 2047ರ ವೇಳೆಗೆ ದೇಶದ ಆರ್ಥಿಕತೆಯ ಗಾತ್ರವನ್ನು 10 ಟ್ರಿಲಿಯನ್ ಡಾಲರ್‌ಗೆ ತಲುಪಿಸುವ ನಿಟ್ಟಿನಲ್ಲಿ ಮಹತ್ವದ ಸುಧಾರಣೆಗಳನ್ನು ತರಲು ಕಾರ್ಯಪಡೆಯೊಂದನ್ನು ರಚಿಸುವುದಾಗಿ ಘೋಷಿಸಿದರು.
ಉದ್ಯೋಗ ಯೋಜನೆ:
ಮುಂದಿನ ಎರಡು ವರ್ಷಗಳಲ್ಲಿ 3.5 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿರುವ ‘ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜ್‌ಗಾರ್ ಯೋಜನೆ’ ಪ್ರಾರಂಭಿಸುವುದಾಗಿ ಘೋಷಿಸಿದರು. ₹1 ಲಕ್ಷ ಕೋಟಿ ಮೊತ್ತದ ಈ ಯೋಜನೆಯಡಿ, ಹೊಸದಾಗಿ ಉದ್ಯೋಗಕ್ಕೆ ಸೇರಿಕೊಂಡ ಯುವಜನರು ಪ್ರತಿ ತಿಂಗಳು ₹15 ಸಾವಿರ ಆರ್ಥಿಕ ನೆರವು ಪಡೆಯಲಿದ್ದಾರೆ. ಈ ಉಪಕ್ರಮದಿಂದ ಸುಮಾರು ಮೂರು ಕೋಟಿ ಯುವಜನರು ಪ್ರಯೋಜನ ಪಡೆಯುವ ನಿರೀಕ್ಷೆಯಿದೆ.
ಈ ಯೋಜನೆಯು ಸ್ವತಂತ್ರ ಭಾರತದಿಂದ ಸಮೃದ್ಧ ಭಾರತದೆಡೆಗಿನ ಸೇತುವೆಯನ್ನು ಬಲಪಡಿಸುವಲ್ಲಿ ಪ್ರಮುಖ ಹೆಜ್ಜೆ ಎಂದು ಸರ್ಕಾರ ಪರಿಗಣಿಸಿದೆ. ದೇಶದಾದ್ಯಂತ ಉದ್ಯೋಗ ಸೃಷ್ಟಿಸುವ ಪ್ರಯತ್ನದ ಭಾಗವಾಗಿ ಮೋದಿ ನೇತೃತ್ವದ ಸಚಿವ ಸಂಪುಟ ಇದೇ ವರ್ಷ ಜುಲೈ 1ರಂದು ಈ ಯೋಜನೆಗೆ ಅನುಮೋದನೆ ನೀಡಿತ್ತು.
ಜನಸಂಖ್ಯಾ ಮಿಷನ್:
ಒಳನುಸುಳುವಿಕೆ ಮತ್ತು ಅಕ್ರಮ ವಲಸೆಯಿಂದಾಗಿ ದೇಶದ ಗಡಿಗೆ ಹೊಂದಿಕೊಂಡಿರುವ ಪ್ರದೇಶಗಳ ಜನಸಂಖ್ಯೆಯ ಸ್ವರೂಪದಲ್ಲಿ ಅಸಮತೋಲನ ಕಂಡುಬಂದಿರುವುದು ಕಳವಳಕ್ಕೆ ಕಾರಣವಾಗಿದೆ ಎಂದು ಹೇಳಿದರು. ರಾಷ್ಟ್ರೀಯ ಭದ್ರತೆಗೆ ಎದುರಾಗಿರುವ ಈ ಸವಾಲು ಎದುರಿಸಲು ಮತ್ತು ದೇಶದ ಜನರ ಒಗ್ಗಟ್ಟು, ಸಮಗ್ರತೆ ಹಾಗೂ ಹಕ್ಕುಗಳ ರಕ್ಷಣೆ ಖಾತರಿಪಡಿಸಿಕೊಳ್ಳಲು ಉನ್ನತ ಮಟ್ಟದ ಜನಸಂಖ್ಯಾ ಮಿಷನ್ ಪ್ರಾರಂಭಿಸುವುದಾಗಿ ಘೋಷಿಸಿದರು.
ಅಣು ವಿದ್ಯುತ್ ಸ್ಥಾವರ ನಿರ್ಮಾಣ:
ಮುಂದಿನ ಎರಡು ದಶಕಗಳಲ್ಲಿ ದೇಶದ ಪರಮಾಣು ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹತ್ತು ಪಟ್ಟು ಹೆಚ್ಚಿಸುವ ಗುರಿ ಇಟ್ಟುಕೊಳ್ಳಲಾಗಿದ್ದು, ಅದಕ್ಕಾಗಿ 10 ಹೊಸ ಅಣು ವಿದ್ಯುತ್ ಸ್ಥಾವರಗಳ ನಿರ್ಮಾಣದ ಕೆಲಸ ನಡೆಯುತ್ತಿದೆ ಎಂದು ಪ್ರಧಾನಿ ಹೇಳಿದರು.
ಆರ್‌ಎಸ್‌ಎಸ್ ಕಳೆದ 100 ವರ್ಷಗಳಿಂದ ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಇದು ಒಂದು ರೀತಿಯಲ್ಲಿ ವಿಶ್ವದ ಅತಿದೊಡ್ಡ ಎನ್ಜಿಒನರೇಂದ್ರ ಮೋದಿ ಪ್ರಧಾನಿ
103 ನಿಮಿಷಗಳ ಭಾಷಣ:
ಪ್ರಧಾನಿ ಮೋದಿ ಅವರು ಸುದೀರ್ಘ 103 ನಿಮಿಷ ಮಾತನಾಡಿ ತಮ್ಮದೇ ಹೆಸರಿನಲ್ಲಿದ್ದ ಸುದೀರ್ಘ ಭಾಷಣದ ದಾಖಲೆ ಮುರಿದರು. ಕಳೆದ ವರ್ಷ 98 ನಿಮಿಷಗಳ ಭಾಷಣ ಮಾಡಿದ್ದು ಅವರ ಸುದೀರ್ಘ ಭಾಷಣ ಎನಿಸಿತ್ತು. 2016ರಲ್ಲಿ ಅವರು 96 ನಿಮಿಷ ಭಾಷಣ ಮಾಡಿದ್ದರು. 2017ರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಾಡಿದ್ದ 56 ನಿಮಿಷಗಳ ಭಾಷಣ ಅವರ ಅತ್ಯಂತ ಕಡಿಮೆ ಅವಧಿಯ ಭಾಷಣವಾಗಿತ್ತು. ಸತತ 12ನೇ ಭಾಷಣ ಮೋದಿ ಅವರು ಕೆಂಪು ಕೋಟೆಯಿಂದ ಸತತ 12 ಭಾಷಣಗಳನ್ನು ಮಾಡುವ ಮೂಲಕ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಹಿಂದಿಕ್ಕಿದರು. ಮಾಜಿ ಪ್ರಧಾನಿ ಜವಾಹರಲಾಲ್ ಅವರು ಸತತ 17 ಸ್ವಾತಂತ್ರ್ಯ ದಿನಾಚರಣೆ ಭಾಷಣ ಮಾಡಿದ್ದಾರೆ. ಇಂದಿರಾ ಅವರು ಒಟ್ಟು 16 ಭಾಷಣ ಮಾಡಿದ್ದರೂ ಅದರಲ್ಲಿ 11 ಭಾಷಣ (1966ರಿಂದ 1977ರವರೆಗೆ) ಸತತವಾಗಿದ್ದವು.
ಪ್ರಧಾನಿ ಮಾತು...
* ‘ನುಸುಳುಕೋರರು’ ನನ್ನ ದೇಶದ ಯುವಕರ ಜೀವನೋಪಾಯವನ್ನು ಕಸಿದುಕೊಳ್ಳುತ್ತಿದ್ದು ಇಲ್ಲಿನ ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡಿದ್ದಾರೆ. ಅದನ್ನು ಸಹಿಸಲು ಸಾಧ್ಯವಿಲ್ಲ
* ಬಾಹ್ಯಾಕಾಶ ಕ್ಷೇತ್ರದಲ್ಲಿ 300ಕ್ಕೂ ಹೆಚ್ಚು ನವೋದ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಸಾವಿರಾರು ಯುವಕರು ಈ ನವೋದ್ಯಮಗಳಲ್ಲಿ ಪೂರ್ಣ ಸಾಮರ್ಥ್ಯದೊಂದಿಗೆ ಕೆಲಸ ಮಾಡುತ್ತಿದ್ದಾರೆ
* ದೇಶದ ಅಗತ್ಯಕ್ಕೆ ಬೇಕಾದಷ್ಟು ರಸಗೊಬ್ಬರವನ್ನು ಇಲ್ಲಿಯೇ ತಯಾರಿಸುವಂತಾಗಬೇಕು ಎಂದು ಯುವಕರು ಕೈಗಾರಿಕಾ ವಲಯ ಮತ್ತು ಖಾಸಗಿ ವಲಯದವರಿಗೆ ಹೇಳಲು ಬಯಸುತ್ತೇನೆ. ರಸಗೊಬ್ಬರಗಳಿಗೆ ನಾವು ಯಾರನ್ನೂ ಅವಲಂಬಿಸಬಾರದು
* ಈ ವರ್ಷಾಂತ್ಯದಲ್ಲಿ ಭಾರತದ ದೇಸಿ ಸೆಮಿಕಂಡಕ್ಟರ್ ಚಿಪ್ ಮಾರುಕಟ್ಟೆಗೆ ಬರಲಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.