ADVERTISEMENT

ವಶಪಡಿಸಿಕೊಂಡಿದ್ದ ಹಡಗು ಬಿಡುಗಡೆಗೆ ಒಪ್ಪಂದ

ಸೂಯೆಜ್‌ ಕಾಲುವೆ ಪ್ರಾಧಿಕಾರ ಮತ್ತು ಹಡಗು ಕಂಪನಿ ನಡುವೆ ಸಹಮತ

ಏಜೆನ್ಸೀಸ್
Published 5 ಜುಲೈ 2021, 7:47 IST
Last Updated 5 ಜುಲೈ 2021, 7:47 IST
.
.   

ಕೈರೊ: ಸೂಯೆಜ್ ಕಾಲುವೆಯ ಜಲಮಾರ್ಗದಲ್ಲಿ ಈ ವರ್ಷದ ಮಾರ್ಚ್‌ ತಿಂಗಳಲ್ಲಿ ಸಿಲುಕಿಕೊಂಡಿದ್ದ ಅತಿದೊಡ್ಡ ಸರಕು ಹಡಗು ‘ಎವರ್‌ಗಿವನ್‌’ ಬಿಡುಗಡೆಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಸೂಯೆಜ್‌ ಕಾಲುವೆ ಪ್ರಾಧಿಕಾರ ತಿಳಿಸಿದೆ.

ಎವರ್‌ ಗಿವನ್‌ ಬೃಹತ್‌ ಕಂಟೇನರ್‌ಗಳ ಹಡಗಿನ ಮಾಲೀಕತ್ವ ಹೊಂದಿರುವ ಜಪಾನ್‌ನ ಶೋಯಿ ಕಿಸೆನ್‌ ಕೈಷಾ ಕಂಪನಿಯ ಜತೆ ಪ್ರಾಧಿಕಾರವು ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿದೆ. ಆದರೆ, ಒಪ್ಪಂದದ ವಿವರಗಳನ್ನು ಪ್ರಾಧಿಕಾರ ಬಹಿರಂಗಪಡಿಸಿಲ್ಲ.

ಬುಧವಾರ ಇಸ್ಮೈಲಿಯಾ ನಗರದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗುವುದು. ಅದೇ ದಿನವೇ ವಶಪಡಿಸಿಕೊಂಡಿದ್ದ ಹಡಗು ಬಿಡುಗಡೆ ಮಾಡಲಾಗುವುದು ಎಂದು ಪ್ರಾಧಿಕಾರವು ತಿಳಿಸಿದೆ.

ADVERTISEMENT

‘ಕಳೆದ ತಿಂಗಳು ಪರಿಹಾರ ಮೊತ್ತಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, ಸಹಿ ಹಾಕುವವರೆಗೂ ವಿವರಗಳನ್ನು ಬಹಿರಂಗಪಡಿಸದಂತೆಯೂ ಒಪ್ಪಂದವಾಗಿದೆ’ ಎಂದು ಸೂಯೆಜ್‌ ಕಾಲುವೆ ಪ್ರಾಧಿಕಾರದ ಮುಖ್ಯಸ್ಥ ಲೆಫ್ಟಿನೆಂಟ್‌ ಜನರಲ್‌ ಒಸಾಮಾ ರಾಬಿ ತಿಳಿಸಿದ್ದಾರೆ.

ಮಾರ್ಚ್‌ 23ರಂದು ಈ ಹಡಗು ಸೂಯೆಜ್‌ ಕಾಲುವೆಯಲ್ಲಿ ಸಿಲುಕಿಕೊಂಡಿದ್ದರಿಂದ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಆರು ದಿನಗಳ ಸತತ ಪ್ರಯತ್ನದ ಬಳಿಕ ತೆರವುಗೊಳಿಸಲಾಗಿತ್ತು. ಆದರೆ, ಹಡಗನ್ನು ವಶಪಡಿಸಿಕೊಳ್ಳಲಾಗಿತ್ತು. ಹಡಗು ಸಿಲುಕಿಕೊಂಡಿದ್ದರಿಂದ ಸಂಚಾರಕ್ಕೆ ವ್ಯತ್ಯಯವಾಗಿರುವ ನಷ್ಟವನ್ನು ಭರಿಸುವಂತೆ ಸೂಯೆಜ್‌ ಕಾಲುವೆ ಪ್ರಾಧಿಕಾರ ಒತ್ತಾಯಿಸಿತ್ತು.

91.6 ಕೋಟಿ ಡಾಲರ್‌ (₹6,813.07 ಕೋಟಿ) ಪರಿಹಾರ ಮೊತ್ತ ನೀಡುವಂತೆ ಸೂಯೆಜ್‌ ಕಾಲುವೆ ಪ್ರಾಧಿಕಾರ ಒತ್ತಾಯಿಸಿತ್ತು. ಬಳಿಕ ಈ ಮೊತ್ತವನ್ನು 55.5 ಕೋಟಿ ಡಾಲರ್‌ಗೆ(₹4,127.89) ಇಳಿಕೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.