ADVERTISEMENT

ಸುನೇತ್ರಾ ಪ್ರಮಾಣ ನಾಳೆ? ಎನ್‌ಸಿಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಘೋಷಣೆ ಸಾಧ್ಯತೆ

ಪಿಟಿಐ
Published 30 ಜನವರಿ 2026, 16:18 IST
Last Updated 30 ಜನವರಿ 2026, 16:18 IST
ಸುನೇತ್ರಾ
ಸುನೇತ್ರಾ   

ಮುಂಬೈ/ಪುಣೆ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ, ದಿವಂಗತ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ನೂತನ ಉಪ ಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.

ಪ್ರಸ್ತುತ ರಾಜ್ಯಸಭಾ ಸದಸ್ಯೆಯಾಗಿರುವ ಸುನೇತ್ರಾ ಅವರು ರಾಜ್ಯದ ಮೊದಲ ಮಹಿಳಾ ಉಪ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

‘ಸುನೇತ್ರಾ ಅವರ ಹೆಸರನ್ನು ಅಂತಿಮಗೊಳಿಸಲು ಪಕ್ಷವು ಶನಿವಾರ ಮಧ್ಯಾಹ್ನ 2ಕ್ಕೆ ಇಲ್ಲಿನ ವಿಧಾನಭವನದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಲಿದೆ. ಅವರ ಪ್ರಮಾಣವಚನ ಸ್ವೀಕಾರ ಸಮಾರಂಭ ಸಂಜೆ ನಡೆಯಲಿದೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ. 

ADVERTISEMENT

2024ರ ಲೋಕಸಭಾ ಚುನಾವಣೆಯವರೆಗೂ ಸುನೇತ್ರಾ ಅವರು ರಾಜಕೀಯ ಕ್ಷೇತ್ರದಿಂದ ದೂರವೇ ಉಳಿದುಕೊಂಡಿದ್ದರು. ಆ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಅವರು ಬಾರಾಮತಿಯಿಂದ ಎನ್‌ಸಿಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಆದರೆ, ಸಾಕಷ್ಟು ಕುತೂಹಲ ಕೆರಳಿಸಿದ ಸ್ಪರ್ಧೆಯಲ್ಲಿ ತನ್ನ ನಾದಿನಿ ಎನ್‌ಸಿಪಿಯ (ಎಸ್‌ಪಿ) ಸುಪ್ರಿಯಾ ಸುಳೆ ಎದುರು ಪರಾಭವಗೊಂಡರು. ಸುನೇತ್ರಾ ಆ ಬಳಿಕ ರಾಜ್ಯಸಭೆಗೆ ಆಯ್ಕೆಯಾದರು.

ಶುಕ್ರವಾರ ಸಂಜೆ ಸುದ್ದಿಗಾರರ ಜತೆ ಮಾತನಾಡಿದ್ದ ಮಹಾರಾಷ್ಟ್ರದ ಸಚಿವ ಛಗನ್‌ ಭುಜಬಲ್‌, ‘ಎನ್‌ಸಿಪಿ ಶಾಸಕಾಂಗ ಪಕ್ಷದ ಸಭೆ ಜನವರಿ 31ರಂದು ನಡೆಯಲಿದ್ದು, ಸುನೇತ್ರಾ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯಾಗಿ ಘೋಷಿಸಲಾಗುವುದು’ ಎಂದು ಮಾಹಿತಿ ನೀಡಿದ್ದರು.

‘ಶಾಸಕಾಂಗ ಪಕ್ಷದ ಸಭೆಯಲ್ಲಿ ಸುನೇತ್ರಾ ಅವರನ್ನು ನಾಯಕಿಯಾಗಿ ಘೋಷಿಸಿದ ಬಳಿಕ ಶನಿವಾರವೇ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಯಾವುದೇ ಅಭ್ಯಂತರ ಇಲ್ಲ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ತಿಳಿಸಿದ್ದಾರೆ’ ಎಂದು ಹೇಳಿದ್ದರು.  

ಎನ್‌ಸಿಪಿ ಮುಖಂಡರಿಂದ ಫಡಣವೀಸ್‌ ಭೇಟಿ: ಎನ್‌ಸಿಪಿಯ ಹಿರಿಯ ನಾಯಕರು ಶುಕ್ರವಾರ ದೇವೇಂದ್ರ ಫಡಣವೀಸ್‌ ಅವರನ್ನು ಭೇಟಿಯಾದರು. ದಕ್ಷಿಣ ಮುಂಬೈನಲ್ಲಿರುವ ಮುಖ್ಯಮಂತ್ರಿ ಅವರ ಅಧಿಕೃತ ನಿವಾಸ ‘ವರ್ಷಾ’ದಲ್ಲಿ ಸುಮಾರು ಒಂದೂವರೆ ಗಂಟೆ ನಡೆದ ಸಭೆಯಲ್ಲಿ ಛಗನ್ ಭುಜಬಲ್, ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್, ರಾಜ್ಯ ಘಟಕದ ಅಧ್ಯಕ್ಷ ಸುನಿಲ್ ತಟ್ಕರೆ ಮತ್ತು ಮಾಜಿ ಸಚಿವ ಧನಂಜಯ ಮುಂಡೆ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಿದರು ಎಂದು ಮೂಲಗಳು ತಿಳಿಸಿವೆ.

ಸಿಐಡಿ ತನಿಖೆ ಆರಂಭ: ಅಜಿತ್ ಪವಾರ್ ಮತ್ತು ಇತರ ನಾಲ್ವರ ಸಾವಿಗೆ ಕಾರಣವಾದ ವಿಮಾನ ಅಪಘಾತದ ಕುರಿತು ಮಹಾರಾಷ್ಟ್ರ ಅಪರಾಧ ತನಿಖಾ ದಳ (ಸಿಐಡಿ) ತನಿಖೆ ಪ್ರಾರಂಭಿಸಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಜನವರಿ 28ರ ದುರಂತದ ಬಳಿಕ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ದಾಖಲಾಗಿರುವ ಆಕಸ್ಮಿಕ ಸಾವು ಪ್ರಕರಣದ ಬಗ್ಗೆ ಸಿಐಡಿ ತನಿಖೆಗೆ ರಾಜ್ಯ ಪೊಲೀಸರು ಆದೇಶ ಹೊರಡಿಸಿದ್ದಾರೆ ಎಂದು ಹೇಳಿದ್ದಾರೆ.

ಅಜಿತ್ ಪವಾರ್‌ (66) ಮತ್ತು ಇತರ ನಾಲ್ವರು ಪ್ರಯಾಣಿಸುತ್ತಿದ್ದ ಲಘು ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಪತನಗೊಂಡಿತ್ತು. ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದರು.

ಅಸ್ಥಿ ವಿಸರ್ಜನೆ (ಪುಣೆ ವರದಿ): ಅಜಿತ್‌ ಪವಾರ್‌ ಅವರ ಚಿತಾಭಸ್ಮವನ್ನು ಹುಟ್ಟೂರಾದ ಬಾರಾಮತಿ ಬಳಿ ನೀರಾ ಮತ್ತು ಕರ್ಹಾ ನದಿಗಳ ಸಂಗಮದಲ್ಲಿ ಅವರ ಹಿರಿಯ ಪುತ್ರ ಪಾರ್ಥ್‌ ಶುಕ್ರವಾರ ವಿಸರ್ಜಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.