ADVERTISEMENT

ವಿವಾದಾತ್ಮಕ ಕೃಷಿ ಕಾಯ್ದೆ: ‘ಸುಪ್ರೀಂ’ಗೆ ವರದಿ ಸಲ್ಲಿಸಿದ ಅಧ್ಯಯನ ಸಮಿತಿ

ಪಿಟಿಐ
Published 31 ಮಾರ್ಚ್ 2021, 12:12 IST
Last Updated 31 ಮಾರ್ಚ್ 2021, 12:12 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ‘ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಅಧ್ಯಯನ ಮಾಡಲು ಸುಪ್ರೀಂ ಕೋರ್ಟ್ ನೇಮಿಸಿದ್ದ ನಾಲ್ವರು ಸದಸ್ಯರ ಅಧ್ಯಯನ ಸಮಿತಿಯು ಈ ತಿಂಗಳ 19ರಂದು ಸುಪ್ರೀಂ ಕೋರ್ಟ್‌ಗೆ ತನ್ನ ವರದಿಯನ್ನು ಸಲ್ಲಿಸಿದೆ’ ಎಂದು ಸಮಿತಿಯ ಸದಸ್ಯರೊಬ್ಬರು ಬುಧವಾರ ತಿಳಿಸಿದ್ದಾರೆ.

‘ಮಾರ್ಚ್ 19ರಂದು ಸಮಿತಿಯು ತನ್ನ ಅಧ್ಯಯನ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ಕುರಿತು ಮುಂದಿನ ಕ್ರಮವನ್ನು ನ್ಯಾಯಾಲಯವು ನಿರ್ಧರಿಸಲಿದೆ’ ಎಂದು ಅಧ್ಯಯನ ಸಮಿತಿಯ ಸದಸ್ಯರಲ್ಲೊಬ್ಬರಾದ ಪಿ.ಕೆ. ಮಿಶ್ರಾ ಅವರು ತಿಳಿಸಿದ್ದಾರೆ.

ವಿವಾದಾತ್ಮಕ ಕೃಷಿಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಐದು ತಿಂಗಳಿನಿಂದ ನವದೆಹಲಿಯ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮುಂದಿನ ಆದೇಶದವರೆಗೆ ಕಾಯ್ದೆಯನ್ನು ಅನುಷ್ಠಾನಗೊಳಿಸಬಾರದು ಎಂದು ಸುಪ್ರೀಂ ಕೋರ್ಟ್ ಜ. 11ರಂದು ನಿರ್ದೇಶನ ನೀಡಿತ್ತು. ಈ ಬಿಕ್ಕಟ್ಟನ್ನು ಪರಿಹರಿಸಲು ಸುಪ್ರೀಂ ಕೋರ್ಟ್ ನಾಲ್ವರು ಸದಸ್ಯರ ಅಧ್ಯಯನ ಸಮಿತಿಯನ್ನೂ ನೇಮಕ ಮಾಡಿತ್ತು. ಸಮಿತಿಯು ಎರಡು ತಿಂಗಳ ಕಾಲ ಅಧ್ಯಯನ ನಡೆಸಿದೆ.

ADVERTISEMENT

ಸಮಿತಿಯ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಸಮಿತಿಯು ವಿವಿಧ ರೈತ ಗುಂಪುಗಳು, ರೈತರ ಉತ್ಪನ್ನ ಸಂಸ್ಥೆಗಳು, ವೃತ್ತಿಪರರು, ವಿವಿಧ ಶಿಕ್ಷಣ ತಜ್ಞರು, ಸರ್ಕಾರಿ ಮತ್ತು ಖಾಸಗಿ ಕೃಷಿ ಮಾರುಕಟ್ಟೆ ಮಂಡಳಿಗಳೊಂದಿಗೆ 12ಕ್ಕೂ ಹೆಚ್ಚು ಸುತ್ತಿನ ಸಮಾಲೋಚನೆಯನ್ನು ನಡೆಸಿದೆ. ಸಮಿತಿಯು ತನ್ನ ವರದಿಯನ್ನು ಅಂತಿಮಗೊಳಿಸುವ ಮುನ್ನ 9 ಆಂತರಿಕ ಸಭೆಗಳನ್ನೂ ನಡೆಸಿದೆ.

ಸಮಿತಿಯಲ್ಲಿ ಪಿ.ಕೆ. ಮಿಶ್ರಾ ಅವರೊಂದಿಗೆ ಶೆಟ್ಕಾರಿ ಸಂಘಟನೆಯ ಅಧ್ಯಕ್ಷ ಅನಿಲ್ ಘನಾತ್ವ್, ಕೃಷಿ ಅರ್ಥಶಾಸ್ತ್ರಜ್ಞ ಹಾಗೂ ಕೃಷಿ ಉತ್ಪನ್ನ ಬೆಲೆಗಳ ಆಯೋಗದ ಮಾಜಿ ಅಧ್ಯಕ್ಷ ಅಶೋಕ್ ಗುಲಾಟಿ ಕೂಡಾ ಸದಸ್ಯರಾಗಿದ್ದರು. ಮತ್ತೊಬ್ಬ ಸದಸ್ಯರಾಗಿದ್ದ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಭೂಪಿಂದರ್ ಸಿಂಗ್ ಮನ್‌ ಅವರು ಸಮಿತಿಯು ಕಾರ್ಯಾರಂಭ ಮಾಡುವ ಮೊದಲೇ ಸಮಿತಿಯಿಂದ ಹಿಂದೆ ಸರಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.