ADVERTISEMENT

ಡಿಜಿಟಲ್‌ ವಂಚನೆ: ಎಸ್‌ಒಪಿ ರೂಪಿಸಲು ಸುಪ್ರೀಂ ಕೋರ್ಟ್‌ ತಾಕೀತು

ಪಿಟಿಐ
Published 9 ಫೆಬ್ರುವರಿ 2026, 13:55 IST
Last Updated 9 ಫೆಬ್ರುವರಿ 2026, 13:55 IST
   

ನವದೆಹಲಿ: ಡಿಜಿಟಲ್‌ ವಂಚನೆ ಮೂಲಕ ₹54,000 ಕೋಟಿಗೂ ಹೆಚ್ಚಿನ ಹಣವನ್ನು ದೋಚಿರುವುದು ‘ಡಕಾಯಿತಿ’ಗೆ ಸಮ ಎಂದಿರುವ  ಸುಪ್ರೀಂಕೋರ್ಟ್‌, ಸೈಬರ್‌ ವಂಚನೆ ಪ್ರಕರಣಗಳನ್ನು ತಡೆಯಲು ಪ್ರಮಾಣೀಕೃತ  ಕಾರ್ಯಾಚರಣೆ ವಿಧಾನವನ್ನು (ಎಸ್‌ಒಪಿ) ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸೋಮವಾರ ಕಟ್ಟುನಿಟ್ಟಿನ  ಸೂಚನೆ ನೀಡಿದೆ. 

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ), ಇತರೆ ಪ್ರಮುಖ ಬ್ಯಾಂಕ್‌ಗಳು, ದೂರಸಂಪರ್ಕ ಇಲಾಖೆಯ ಸಲಹೆಗಳನ್ನು ಪಡೆದು ’ಎಸ್‌ಒಪಿ’ ರೂಪಿಸಬೇಕು. ’ಎಸ್‌ಒಪಿ’ ಸಿದ್ಧಗೊಂಡ ನಂತರ, ನಾಲ್ಕು ವಾರಗಳಲ್ಲಿ ಇದಕ್ಕೆ ಸಂಬಂಧಿಸಿದ  ಒಪ್ಪಂದದ ಕರಡನ್ನು ಪ್ರಕಟಿಸಬೇಕು ಎಂದು ಕೇಂದ್ರ ಗೃಹ ಇಲಾಖೆಗೆ ನ್ಯಾಯಪೀಠ ನಿರ್ದೇಶಿಸಿದೆ. 

‘ಡಿಜಿಟಲ್‌ ವಂಚನೆಯ ಮೊತ್ತವು ಸಣ್ಣ ರಾಜ್ಯಗಳ ಬಜೆಟ್‌ಗಿಂತಲೂ ಹೆಚ್ಚಿರುವುದು ಕಳವಳಕಾರಿ. ತಕ್ಷಣವೇ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು’ ಎಂದು  ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್  ಮತ್ತು ನ್ಯಾಯಮೂರ್ತಿ ಜಾಯ್‌ಮಲ್ಯ  ಬಾಗ್ಚಿ, ಎನ್‌.ವಿ. ಅಂಜರಿಯಾ  ಅವರಿದ್ದ ಪೀಠವು ತಾಕೀತು ಮಾಡಿದೆ. 

ADVERTISEMENT

ಅಧಿಕಾರಿಗಳ ಪಾತ್ರವನ್ನೂ ಪರಿಶೀಲಿಸಿ:  ಡಿಜಿಟಲ್‌ ವಂಚನೆ ಪ್ರಕರಣಗಳಲ್ಲಿ, ಸೈಬರ್‌ ಅಪರಾಧಿಗಳು ಮಾತ್ರವಲ್ಲ, ಬ್ಯಾಂಕ್‌ ಅಧಿಕಾರಿಗಳ ಶಾಮೀಲು ಹಾಗೂ ನಿರ್ಲಕ್ಷ್ಯವನ್ನೂ  ಆಗಾಗ್ಗ ಪರಿಶೀಲನೆಗೆ ಒಳಪಡಿಸುತ್ತಿರಬೇಕು. ಈ ನಿಟ್ಟಿನಲ್ಲಿ ಆರ್‌ಬಿಐ ಬ್ಯಾಂಕ್‌ಗಳಿಗೆ  ಸೂಚನೆ ನೀಡಬೇಕು, ನಿಗಾ  ವಹಿಸಬೇಕು ಎಂದೂ ನ್ಯಾಯಪೀಠ ಹೇಳಿದೆ. 

ಡಿಜಿಟಲ್‌ ಅರೆಸ್ಟ್‌; ಸಿಬಿಐ ತನಿಖೆ

ದೇಶದ ವಿವಿಧೆಡೆ ನಡೆದಿರುವ ‘ಡಿಜಿಟಲ್‌ ಅರೆಸ್ಟ್‌’  ಪ್ರಕರಣಗಳನ್ನು ಪತ್ತೆ ಹಚ್ಚಿ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್‌ ಸಿಬಿಐಗೆ ಸೂಚಿಸಿದೆ. ಜತೆಗೆ ‘ಡಿಜಿಟಲ್‌ ಅರೆಸ್ಟ್‌‘ ಪ್ರಕರಣಗಳ ತನಿಖೆ ಮುಂದುವರಿಸಲು ಸಿಬಿಐಗೆ ಅನುಮತಿ ನೀಡುವಂತೆ ಗುಜರಾತ್‌ ಮತ್ತು ದೆಹಲಿ ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶಿಸಿದೆ.

‘ಡಿಜಿಟಲ್‌ ಅರೆಸ್ಟ್‌’ ಪ್ರಕರಣಗಳಲ್ಲಿ ಗ್ರಾಹಕರಿಗೆ ಪರಿಹಾರ ವಿತರಿಸಲು ಆರ್‌ಬಿಐ ಮತ್ತು ದೂರಸಂಪರ್ಕ ಇಲಾಖೆ ಜಂಟಿಯಾಗಿ ಚೌಕಟ್ಟು ರೂಪಿಸುವಂತೆಯೂ ಸುಪ್ರೀಂಕೋರ್ಟ್‌ ಹೇಳಿದೆ.

ಡಿಜಿಟಲ್‌ ವಂಚನೆಗೆ ಒಳಗಾದವರಿಗೆ ಪರಿಹಾರ ವಿತರಿಸಲು ಅಮಿಕಸ್‌ ಕ್ಯೂರಿ ಮಂಡಿಸಿದ್ದ ಸಲಹೆಗಳನ್ನು ಪರಿಶೀಲಿಸುವಂತೆ ಸುಪ್ರೀಂಕೋರ್ಟ್‌ ಡಿಸೆಂಬರ್‌ 16ರಂದು ಸೂಚನೆ ನೀಡಿತ್ತು. ಸೈಬರ್‌ ಅಪರಾಧಿಗಳು ದೇಶದಿಂದ ದೋಚುತ್ತಿರುವ ಅಪಾರ ಪ್ರಮಾಣದ ಹಣದ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. 

ಸೈಬರ್‌ ಅಪರಾಧಿಗಳ ಜಾಡನ್ನು ಪತ್ತೆ ಹಚ್ಚಲು ಮತ್ತು ಅಕ್ರಮ ವಹಿವಾಟು ನಡೆಯುವ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಲು ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನವನ್ನು ಯಾಕೆ ಬಳಸುತ್ತಿಲ್ಲ ಎಂದೂ ಆರ್‌ಬಿಐಗೆ ಸುಪ್ರೀಂಕೋರ್ಟ್‌  ಪ್ರಶ್ನಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.