ನವದೆಹಲಿ: ಸಿವಿಲ್ ಜಡ್ಜ್ ಹುದ್ದೆಗೆ ಸತತ ಮೂರು ವರ್ಷ ಕಾನೂನು ವೃತ್ತಿ ಮಾಡಿರಬೇಕು ಅಥವಾ ಎಲ್‌ಎಲ್‌ಎಲ್‌ಬಿ ಪದವಿಯನ್ನು ಮೊದಲ ಪ್ರಯತ್ನದಲ್ಲೇ ಶೇ 70 ರಷ್ಟು ಅಂಕಗಳೊಂದಿಗೆ ತೇರ್ಗಡೆಗೊಂಡಿರಬೇಕು ಎನ್ನುವ ಮಧ್ಯಪ್ರದೇಶ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದು ಮಾಡಿದೆ.
ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಿದ್ದರಿಂದ, 2022ರ ಸಿವಿಲ್ ಜಡ್ಜ್ ಜೂನಿಯರ್ ವಿಭಾಗದ (ಪ್ರವೇಶ ಹಂತ) ಪರೀಕ್ಷೆಯ ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳನ್ನು ಅನರ್ಹಗೊಳಿಸಿ ಮಧ್ಯಪ್ರದೇಶ ಹೈಕೋರ್ಟ್ 2024ರ ಜೂನ್ 13ರಂದು ತೀರ್ಪು ನೀಡಿತ್ತು. ಇದನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ. 2022ರಲ್ಲಿ ಪೂರ್ವಭಾವಿ ಪರೀಕ್ಷೆ ಬರೆದು, 2024ರಲ್ಲಿ ಪ್ರಾಥಮಿಕ ಪರೀಕ್ಷೆ ಅಭ್ಯರ್ಥಿಗಳಿಗೆ ಇದು ಅನ್ವಯಿಸದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ತನ್ನ ವಿಭಾಗೀಯ ಪೀಠದ ಆದೇಶವನ್ನು ಪ್ರಶ್ನಿಸಿ ಮಧ್ಯಪ್ರದೇಶ ಹೈಕೋರ್ಟ್ ಸಲ್ಲಿಸಿರುವ ವಿಶೇಷ ಮೇಲ್ಮನವಿಯ ವಿಚಾರಣೆಗೆ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅತುಲ್ ಎಸ್. ಚಂದೂರ್ಕರ್ ಅವರಿದ್ದ ಪೀಠವು ಅಂಗೀಕರಿಸಿದೆ. ತೀರ್ಪಿನ ವಿಸ್ತೃತ ಪ್ರತಿ ಲಭ್ಯವಾಗಬೇಕಿದೆ.
2023ರ ಜೂನ್ 23ರಂದು ಮಧ್ಯಪ್ರದೇಶದ ನ್ಯಾಯಾಂಗ ಸೇವೆ (ನೇಮಕಾತಿ ಹಾಗೂ ಸೇವಾ ನಿಬಂಧನೆಗಳು) ನಿಯಮಗಳು –1994ಕ್ಕೆ ತಿದ್ದುಪಡಿ ಮಾಡಲಾಗಿತ್ತು. ಈ ತಿದ್ದುಪಡಿಯನ್ವಯ ಸಿವಿಲ್ ಜಡ್ಜ್ ಹುದ್ದೆಯ ಪರೀಕ್ಷೆ ಬರೆಯಬೇಕಿದ್ದರೆ, ಸತತ ಮೂರು ವರ್ಷ ಕಾನೂನು ವೃತ್ತಿ ಮಾಡಿರಬೇಕು ಅಥವಾ ಎಲ್‌ಎಲ್‌ಬಿ ಪರೀಕ್ಷೆಯನ್ನು ಒಂದೇ ಪ್ರಯತ್ನದಲ್ಲಿ ಶೇ 70ಕ್ಕಿಂತ ಹೆಚ್ಚು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಎಸ್‌ಸಿ ಹಾಗೂ ಎಸ್‌ಟಿ ವಿದ್ಯಾರ್ಥಿಗಳಿಗೆ ಈ ಮಿತಿ ಶೇ 50. ಎನ್ನುವ ತಿದ್ದುಪಡಿ ಮಾಡಲಾಗಿತ್ತು.
ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಮಧ್ಯಪ್ರದೇಶ ಹೈಕೋರ್ಟ್ ತಿರಸ್ಕರಿಸಿತ್ತು. ಆದರೆ ತಿದ್ದುಪಡಿ ನಿಯಮದ ಬಳಿಕವೂ ನಮಗೆ ಅರ್ಹತೆ ಇದೆ ಎಂದು ಆಯ್ಕೆಯಾಗದ ಇಬ್ಬರು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಪ್ರಾಥಮಿಕ ಪರೀಕ್ಷೆಯಲ್ಲಿ ತೇರ್ಗಡೆಗೊಂಡರೂ, ತಿದ್ದುಪಡಿ ಮಾಡಿದ ನಿಯಮಗಳನ್ವಯ ಅರ್ಹತೆ ಪಡೆಯದವರ ನೇಮಕಾತಿಯನ್ನು ಮಾಡಕೂಡದು ಎಂದು ಹೈಕೋರ್ಟ್ ಹೇಳಿತ್ತು.
2024ರ ಜನವರಿ 1ರಂದು ನಡೆದ ಪ್ರಾಥಮಿಕ ಪರೀಕ್ಷೆಯಲ್ಲಿ ತೇರ್ಗಡೆಗೊಂಡು, ಪರಿಷ್ಕೃತ ಕಾನೂನಿನ್ವಯ ಅರ್ಹತೆ ಪಡೆಯದ ವಿದ್ಯಾರ್ಥಿಗಳು ನೇಮಕಾತಿಗೆ ಅರ್ಹರಲ್ಲ ಎಂದು ತನ್ನ ವಿಭಾಗೀಯ ಪೀಠ ನೀಡಿದ ಆದೇಶ ಪ್ರಶ್ನಿಸಿ ಮಧ್ಯಪ್ರದೇಶ ಹೈಕೋರ್ಟ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
(ಪಿಟಿಐ ಹಾಗೂ ಲೈವ್ ಲಾ ವರದಿ ಆಧರಿಸಿದ ಸುದ್ದಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.