
ಸುಪ್ರೀಂ ಕೋರ್ಟ್
ನವದೆಹಲಿ: ವೈವಾಹಿಕ ವಿವಾದದ ಕಾರಣದಿಂದಾಗಿ, ಆರು ತಿಂಗಳ ವಯಸ್ಸಿನ ಅವಳಿ ಮಕ್ಕಳನ್ನು ತಾಯಿಯಿಂದ ಬೇರ್ಪಡಿಸಿದ್ದ ಪತಿಯನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ‘ಇದು ಅತ್ಯಂತ ಕ್ರೂರವಾದ ನಡೆ’ ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರ ನೇತೃತ್ವದ ಪೀಠ, ‘ಮಕ್ಕಳ ಕಲ್ಯಾಣವೇ ಅತ್ಯಂತ ಮುಖ್ಯ. ಚಿಕ್ಕ ಮಕ್ಕಳನ್ನು ತಾಯಿಯ ಆರೈಕೆಯಿಂದ ವಂಚಿತರನ್ನಾಗಿ ಮಾಡಲು ಸಾಧ್ಯವಿಲ್ಲ’ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಈಗ ಆ ಮಕ್ಕಳಿಗೆ ಒಂದೂವರೆ ವರ್ಷವಾಗಿದೆ. ದಂಪತಿಯು ತಮ್ಮ ಮಕ್ಕಳೊಂದಿಗೆ ನ್ಯಾಯಮೂರ್ತಿಗಳ ಎದುರು ಫೆಬ್ರುವರಿ 26ರಂದು ಹಾಜರಾಗುವಂತೆ ಪೀಠ ಸೂಚಿಸಿದೆ.
‘ತನ್ನ ಪತ್ನಿ ಲಖನೌದಲ್ಲಿ ದಾಖಲಿಸಿರುವ ಪ್ರಕರಣವನ್ನು ಪಂಜಾಬ್‌ಗೆ ವರ್ಗಾಯಿಸಬೇಕು’ ಎಂದು ಪತಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ವಿಚಾರಣೆ ಸಂದರ್ಭದಲ್ಲಿ ಪತಿಯ ಪರ ವಕೀಲರು, ‘ಅವಳಿ ಮಕ್ಕಳ ವಿಷಯದಲ್ಲಿ ನ್ಯಾಯಾಲಯವು ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಬದಲಾವಣೆ ಮಾಡಿದರೆ ಅದು ಮಕ್ಕಳ ಮೇಲೆ ಪರಿಣಾಮ ಬೀರಬಹುದು’ ಎಂದು ವಾದಿಸಿದರು.
‘ಆರು ತಿಂಗಳ ಮಕ್ಕಳಿಗೆ ತಾಯಿ ನೀಡುವ ಆರೈಕೆಯನ್ನು ಯಾವುದೇ ದಾದಿ ಅಥವಾ ಅಜ್ಜಿ ನೀಡಲು ಸಾಧ್ಯವಿಲ್ಲ’ ಎಂದು ಪೀಠ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.