
ನವದೆಹಲಿ : ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆಯನ್ನು (ಸಿಎಸ್‌ಆರ್) ಕಾರ್ಪೊರೇಟ್ ಪರಿಸರ ಜವಾಬ್ದಾರಿಯಿಂದ (ಸಿಇಆರ್) ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪರಿಸರ ಮತ್ತು ಪರಿಸರ ವ್ಯವಸ್ಥೆಯಲ್ಲಿನ ಇತರ ಜೀವಿಗಳ ಸಮಾನ ಹಕ್ಕುಗಳನ್ನು ನಿರ್ಲಕ್ಷಿಸುವಂತಿಲ್ಲ. ಅವುಗಳನ್ನು ನಿರ್ಲಕ್ಷಿಸುವ ಕಂಪನಿಗಳು ತಮ್ಮನ್ನು ಸಾಮಾಜಿಕವಾಗಿ ಹೊಣೆಗಾರರು ಎಂದು ಹೇಳಿಕೊಳ್ಳಲು ಆಗದು ಎಂದು ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಎ.ಎಸ್.ಚಂದೂರ್ಕರ್ ಅವರ ಪೀಠ ಖಾರವಾಗಿ ಹೇಳಿದೆ .
ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ನವೀಕರಿಸಲಾಗದ ವಿದ್ಯುತ್ ಉತ್ಪಾದಕಗಳ ಕಾರ್ಯಾಚರಣೆಯಿಂದ ಸಂಕಷ್ಟ ಎದುರಿಸುತ್ತಿರುವ ಹೆಬ್ಬಕ ಪಕ್ಷಿ ಸಂಕುಲದ ರಕ್ಷಣೆ ದೃಷ್ಟಿಯಿಂದ ಪೀಠ ಕೆಲ ನಿರ್ದೇಶನಗಳನ್ನು ನೀಡಿದೆ. ಹೆಬ್ಬಕಗಳನ್ನು ಅಳಿವಿನ ಅಂಚಿನಲ್ಲಿರುವ ಪಕ್ಷಿ ಪ್ರಭೇದದಲ್ಲಿ ಗುರುತಿಸಲಾಗಿದೆ.
ಸಾಮಾಜಿಕ ಹೊಣೆಗಾರಿಕೆಯು ಅಂತರ್ಗತವಾಗಿ ಪರಿಸರ ಹೊಣೆಗಾರಿಕೆಯನ್ನೂ ಒಳಗೊಂಡಿರಬೇಕು ಎಂದು ಪೀಠ ಸೂಚಿಸಿದೆ.
ದೇಶದ ಪ್ರಜೆಗಳು ಕಾಡು, ಸರೋವರ, ನದಿ, ವನ್ಯಜೀವಿಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ರಕ್ಷಿಸಬೇಕು ಮತ್ತು ಸುಧಾರಿಸಬೇಕು. ಅಲ್ಲದೆ ಸಕಲ ಜೀವಿಗಳ ಬಗ್ಗೆ ಸಹಾನುಭೂತಿ ಹೊಂದಿರಬೇಕು ಎಂಬುದು ಮೂಲಭೂತ ಕರ್ತವ್ಯ. ಭಾರತದ ಸಂವಿಧಾನವು 51ಎ(ಜಿ) ವಿಧಿಯಲ್ಲಿ ಇವುಗಳನ್ನು ಉಲ್ಲೇಖಿಸಿದೆ ಎಂದು ಪೀಠ ಹೇಳಿದೆ.
ಕಾರ್ಪೊರೇಟ್ ಕಂಪನಿಗಳು ಸಮಾಜದ ಮುಖ್ಯ ಅಂಗವಾಗಿ ಈ ಮೂಲಭೂತ ಕರ್ತವ್ಯಗಳನ್ನು ಹಂಚಿಕೊಳ್ಳಬೇಕು. ಸಿಎಸ್‌ಆರ್ ನಿಧಿಗಳ ಮೂಲಕ ಈ ಕರ್ತವ್ಯ ನಿಭಾಯಿಸಬೇಕು. ಪರಿಸರ ಸಂರಕ್ಷಣೆಗಾಗಿ ಹಣವನ್ನು ಹಂಚಿಕೆ ಮಾಡುವುದು ಸ್ವಯಂಪ್ರೇರಿತವಾಗಿ ಮಾಡುವ ದಾನವಲ್ಲ. ಅದು ಸಾಂವಿಧಾನಿಕ ಬಾಧ್ಯತೆಯಾಗಿದೆ ಎಂಬುದನ್ನು ನೆನಪಿಡಬೇಕು ಎಂದು ಪೀಠ ತಿಳಿಸಿದೆ.
ರಾಜಸ್ಥಾನ ಮತ್ತು ಗುಜರಾತಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನವೀಕರಿಸಲಾಗದ ವಿದ್ಯುತ್ ಉತ್ಪಾದಕಗಳ ಕಂಪನಿಗಳು ಅಳಿವಿನ ಅಂಚಿನಲ್ಲಿರುವ ಹೆಬ್ಬಕ ಪಕ್ಷಿಗಳ ವಾಸಸ್ಥಾನದಲ್ಲಿ ಚಟುವಟಿಕೆಗಳನ್ನು ನಡೆಸುತ್ತಿವೆ. ಈ ಪ್ರದೇಶಗಳಲ್ಲಿ ಪಕ್ಷಿ ಸಂಕುಲಕ್ಕೆ ತೊಂದರೆ ಆಗದಂತೆ ಎಚ್ಚರದಿಂದ ಚಟುವಟಿಕೆಗಳನ್ನು ನಡೆಸಬೇಕು. ಅವುಗಳ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಪೀಠ ಸೂಚಿಸಿದೆ.
ಹೆಬ್ಬಕಗಳ ರಕ್ಷಣೆಗೆ ಕೋರಿ ಪರಿಸರವಾದಿ ಎಂ.ಕೆ.ರಂಜಿತ್ ಸಿನ್ಹ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಪೀಠ ಈ ಕುರಿತು ನಿರ್ದೇಶನಗಳನ್ನು ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.