ನವದೆಹಲಿ: ಬಿಹಾರದಲ್ಲಿ ಕೈಗೊಂಡಿರುವ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್‌ಐಆರ್) ವೇಳೆ, ಪಟ್ಟಿಯಿಂದ ಹೆಸರು ಕೈಬಿಡಲಾದವರು ತಮ್ಮ ಹೆಸರು ಸಲ್ಲಿಸುವ ಬೇಡಿಕೆಯನ್ನು ಆನ್‌ಲೈನ್ ಮೂಲಕ ಸಲ್ಲಿಸಲು ಅನುಮತಿ ನೀಡುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.
ಸದ್ಯ, ಭೌತಿಕವಾಗಿ ಬೇಡಿಕೆ ಸಲ್ಲಿಸಲು ಅವಕಾಶ ಇದೆ. ಇದರ ಜೊತೆಗೆ, ‘ಎಸ್‌ಐಆರ್’ ಅಡಿ ಸ್ವೀಕರಿಸಬಹುದಾದ 11 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯೊಂದಿಗೆ ಆಧಾರ್ ಸಂಖ್ಯೆ ನಮೂದಿಸಿದ ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಲು ಅವಕಾಶ ನೀಡಬೇಕು ಎಂದು ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರು ಇದ್ದ ಪೀಠ, ಈ ಕುರಿತ ಅರ್ಜಿ ವಿಚಾರಣೆ ನಡೆಸಿತು.
‘ಎಸ್‌ಐಆರ್ ಅಡಿ ಪಟ್ಟಿಯಿಂದ ಕೈಬಿಡಲಾಗಿರುವ 65 ಲಕ್ಷ ಮತದಾರರ ಹೆಸರುಗಳನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಈ ಕುರಿತು ಆಕ್ಷೇಪಣೆ ಸಲ್ಲಿಸುವುದಕ್ಕೆ ಮತದಾರರ ನೆರವಿಗೆ ರಾಜಕೀಯ ಪಕ್ಷಗಳು ಮುಂದೆ ಬರುತ್ತಿಲ್ಲ’ ಎಂದು ಅಚ್ಚರಿ ವ್ಯಕ್ತಪಡಿಸಿದ ಪೀಠವು, ಮುಂದಿನ ವಿಚಾರಣೆ ವೇಳೆ ರಾಜಕೀಯ ಪಕ್ಷಗಳನ್ನು ಕಕ್ಷಿದಾರರನ್ನಾಗಿ ಸೇರ್ಪಡೆ ಮಾಡುವಂತೆ ಬಿಹಾರದ ಮುಖ್ಯ ಚುನಾವಣಾ ಅಧಿಕಾರಿಗೆ ನಿರ್ದೇಶನ ನೀಡಿತು.
‘ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾದವರು ತಮ್ಮ ಅರ್ಜಿಗಳನ್ನು ಸಲ್ಲಿಸಲು ನೆರವು ನೀಡಿರುವುದಕ್ಕೆ ಸಂಬಂಧಿಸಿ ಮುಂದಿನ ವಿಚಾರಣೆ ಒಳಗಾಗಿ ಎಲ್ಲ ರಾಜಕೀಯ ಪಕ್ಷಗಳು ವಸ್ತುಸ್ಥಿತಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದ ಪೀಠ, ವಿಚಾರಣೆಯನ್ನು ಸೆಪ್ಟೆಂಬರ್ 8ಕ್ಕೆ ಮುಂದೂಡಿತು.
‘ಪಟ್ಟಿ ಪ್ರಕಟಿಸಲಾಗಿದೆ’: ವಿಚಾರಣೆ ವೇಳೆ, ಚುನಾವಣಾ ಆಯೋಗ ಪರ ಹಾಜರಿದ್ದ ಹಿರಿಯ ವಕೀಲ ರಾಕೇಶ್ ದ್ವಿವೇದಿ,‘ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ’ ಎಂಬ ಬಗ್ಗೆ ರಾಜಕೀಯ ಪಕ್ಷಗಳು ಹುಯಿಲೆಬ್ಬಿಸುತ್ತಿವೆ. ಆದರೆ, ಆಯೋಗದಲ್ಲಿ ವಿಶ್ವಾಸ ಇಡಿ ಹಾಗೂ 15 ದಿನ ಸಮಯಾವಕಾಶ ಕೊಡಿ. ವಿನಾಕಾರಣ ಯಾರ ಹೆಸರನ್ನೂ ಕೈಬಿಟ್ಟಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲಾಗುವುದು’ ಎಂದು ಪೀಠಕ್ಕೆ ಅರುಹಿದರು.
‘ಪಟ್ಟಿಯಿಂದ ಕೈಬಿಡಲಾಗಿರುವ 65 ಲಕ್ಷ ಮತದಾರರ ಹೆಸರು, ಕೈಬಿಡಲು ಕಾರಣಗಳನ್ನು ಒಳಗೊಂಡ ವಿವರಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಕಟಿಸಲಾಗಿದೆ. ಈ ವಿವರಗಳನ್ನು ಮುಖ್ಯ ಚುನಾವಣಾ ಅಧಿಕಾರಿ, ಜಿಲ್ಲಾ ಚುನಾವಣಾ ಅಧಿಕಾರಿಗಳ ಕಚೇರಿ, ಪಂಚಾಯಿತಿ ಮತ್ತು ಮಂಡಲ ಮಟ್ಟದ ಕಚೇರಿ, ಕಚೇರಿಯ ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮಗಳ ಖಾತೆಗಳಲ್ಲಿ ಪ್ರಕಟಿಸಲಾಗಿದೆ’ ಎಂದು ಪೀಠಕ್ಕೆ ತಿಳಿಸಿದರು.
ಪ್ರಮುಖ ಅಂಶಗಳು
ಹೆಸರು ಕೈಬಿಡಲಾದ ಮತದಾರರು ಭೌತಿಕವಾಗಿ ತಮ್ಮ ಬೇಡಿಕೆಗಾಗಿ ಅರ್ಜಿ ಸಲ್ಲಿಸಿದ್ದಲ್ಲಿ ಅದಕ್ಕೆ ಸಂಬಂಧಪಟ್ಟ ಸ್ವೀಕೃತಿ ಪತ್ರವನ್ನು ಚುನಾವಣಾ ಅಧಿಕಾರಿಗಳು ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರುಗಳಿಗೆ ನೀಡಬೇಕು
ಮತದಾರರು ಸಲ್ಲಿಸಿರುವ ಅರ್ಜಿಯು ಪರಿಪೂರ್ಣವಾಗಿದೆ ಎಂಬುದಕ್ಕೆ ಈ ಸ್ವೀಕೃತಿ ಪತ್ರವು ದೃಢೀಕರಣ ಅಲ್ಲ
ಮೃತಪಟ್ಟಿರುವ ಮತ್ತು ಸ್ವ ಇಚ್ಛೆಯಿಂದ ಬೇರೆ ಕ್ಷೇತ್ರಗಳಿಗೆ ವಲಸೆ ಹೋಗಿರುವವರನ್ನು ಹೊರತುಪಡಿಸಿ ತಮ್ಮ ಹೆಸರುಗಳನ್ನು ಸೇರ್ಪಡೆ ಮಾಡಲು ಅರ್ಜಿಗಳನ್ನು ಸಲ್ಲಿಸಲು ಪಟ್ಟಿಯಿಂದ ಹೆಸರು ಕೈಬಿಡಲಾದ ಮತದಾರರಿಗೆ ನೆರವಾಗುವಂತೆ 1.60 ಲಕ್ಷಕ್ಕೂ ಅಧಿಕ ಬೂತ್ ಮಟ್ಟದ ಏಜೆಂಟರುಗಳಿಗೆ (ಬಿಎಲ್‌ಎ) ಮಾನ್ಯತೆ ಹೊಂದಿರುವ ರಾಜಕೀಯ ಪಕ್ಷಗಳು ಸೂಚನೆ ನೀಡಬೇಕು
ಪಟ್ಟಿಯಿಂದ ಕೈಬಿಡಲಾದ ಹೆಸರುಗಳಿಗೆ ಸಂಬಂಧಿಸಿ ಆಗಸ್ಟ್ 1ರಿಂದ ಈ ವರೆಗೆ ಬಿಎಲ್‌ಎ ಅವರಿಂದ ಕೇವಲ ಎರಡು ಆಕ್ಷೇಪಣೆಗಳು ಸಲ್ಲಿಕೆಯಾಗಿವೆ.
ಆಯೋಗಕ್ಕೆ ಅಪಖ್ಯಾತಿ: ಕಾಂಗ್ರೆಸ್
ಬಿಹಾರದಲ್ಲಿ ನಡೆದ ‘ಎಸ್‌ಐಆರ್’ಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳನ್ನು ಸ್ವಾಗತಿಸಿರುವ ಕಾಂಗ್ರೆಸ್ ‘ಈ ಆದೇಶದಿಂದಾಗಿ ಪ್ರಜಾಪ್ರಭುತ್ವಕ್ಕೆ ಚುನಾವಣಾ ಆಯೋಗದ ಭೀಕರ ದಾಳಿಯಿಂದ ರಕ್ಷಣೆ ಸಿಕ್ಕಂತಾಗಿದೆ’ ಎಂದು ಕಾಂಗ್ರೆಸ್ ಶುಕ್ರವಾರ ಹೇಳಿದೆ. ಮತ್ತೊಂದೆಡೆ ‘ಚುನಾವಣಾ ಆಯೋಗದ ಮುಖವಾಡ ಕಳಚಿ ಬಿದ್ದಿದೆ ಹಾಗೂ ಅದು ಅಪಖ್ಯಾತಿಗೂ ಒಳಗಾದಂತಾಗಿದೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.