ADVERTISEMENT

ಬಾರ್ ಕೌನ್ಸಿಲ್‌ಗಳಲ್ಲಿ ವಿಶೇಷ ಸಾಮರ್ಥ್ಯದ ವಕೀಲರ ಪ್ರಾತಿನಿಧ್ಯ ಖಾತರಿ: ಸುಪ್ರೀಂ

ಪಿಟಿಐ
Published 5 ಜನವರಿ 2026, 14:17 IST
Last Updated 5 ಜನವರಿ 2026, 14:17 IST
.
.   

ನವದೆಹಲಿ: ಬಾರ್‌ ಕೌನ್ಸಿಲ್‌ಗಳಲ್ಲಿ ವಿಶೇಷ ಸಾಮರ್ಥ್ಯದ ವಕೀಲರ ಪ್ರಾತಿನಿಧ್ಯವನ್ನು ಖಾತರಿಪಡಿಸುತ್ತೇವೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

ವಿಶೇಷ ಸಾಮರ್ಥ್ಯದ ವಕೀಲರ ಪ್ರಾತಿನಿಧ್ಯವನ್ನು ಸಾಂಸ್ಥಿಕಗೊಳಿಸಲು ಶಾಸನಬದ್ಧ ತಿದ್ದುಪಡಿಯ ಅಗತ್ಯವಿದೆ ಎಂಬುದನ್ನೂ ನ್ಯಾಯಪೀಠವು ಗಮನಿಸಿದೆ.

ಬಾರ್ ಕೌನ್ಸಿಲ್‌ ಆಫ್‌ ಇಂಡಿಯಾಕ್ಕೆ (ಬಿಸಿಐ) ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವ ವಕೀಲರಿಂದ ₹1.25 ಲಕ್ಷದ ಬದಲು, ₹15 ಸಾವಿರ ನಾಮನಿರ್ದೇಶನ ಶುಲ್ಕ ಪಡೆಯುವಂತೆ ಸೂಚಿಸಿದೆ.

ADVERTISEMENT

ವಕೀಲ ಪಂಕಜ್‌ ಸಿನ್ಹಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠವು, ಭಾರತೀಯ ವಕೀಲರ ಪರಿಷತ್ತು ಶಾಸನಬದ್ಧವಾದ ಚೌಕಟ್ಟಿನಲ್ಲಿದ್ದು, ವಕೀಲರ ರಾಜ್ಯ ಪರಿಷತ್ತುಗಳಲ್ಲಿ ವಿಶೇಷ ಸಾಮರ್ಥ್ಯದ ವಕೀಲರ ಭಾಗವಹಿಸುವಿಕೆಗೆ ಪೂರಕವಾದ ನಾಮನಿರ್ದೇಶನ ಶುಲ್ಕ, ನಿಯಮಾವಳಿ ರೂಪಿಸಿಕೊಳ್ಳಬೇಕು ಎಂದು ಹೇಳಿತು.

ವಕೀಲರ ಪರಿಷತ್ತಿನ ವಿವಿಧ ಸಮಿತಿಗಳಲ್ಲಿ ವಿಶೇಷ ಸಾಮರ್ಥ್ಯದ ವಕೀಲರಿಗೆ ಅವಕಾಶ ನೀಡುವುದನ್ನು ಬಿಸಿಐ ಕೋರ್ಟ್‌ಗೆ ಖಾತರಿಪಡಿಸಬೇಕು. ನ್ಯಾಯಾಲಯದ ಕಾಳಜಿಯನ್ನು ತಿಳಿಯಬೇಕು ಎಂದಿತು.

ಬಿಸಿಐನ ನಿರ್ಧಾರ ತೆಗೆದುಕೊಳ್ಳುವ ಸಮಿತಿಗಳಲ್ಲಿ ವಿಶೇಷ ಸಾಮರ್ಥ್ಯದ ವಕೀಲರು ಸಕ್ರಿಯರಾಗಿ ಭಾಗಿಯಾಗಬೇಕು. ಆದರೆ, ಚುನಾವಣಾ ಶುಲ್ಕವೇ ದುಬಾರಿಯಾಗಿದೆ. ಇಂತಹವರಿಗೆ ಸಾಂಕೇತಿಕ ಶುಲ್ಕವನ್ನಷ್ಟೇ ವಿಧಿಸಬೇಕು ಎಂದು ಸಿಜೆಐ ಸೂರ್ಯ ಕಾಂತ್‌ ಹೇಳಿದರು.

ವಿಶೇಷ ಸಾಮರ್ಥ್ಯ ಹೊಂದಿದ ವಕೀಲರಿಗೆ ₹25 ಸಾವಿರ ಶುಲ್ಕ ಭರಿಸುವುದು ಸಹ ಹೊರೆಯಾಗಬಹುದು ಎಂಬುದನ್ನು ವಕೀಲೆ ಇಂದಿರಾ ಜೈಸಿಂಗ್ ನ್ಯಾಯಪೀಠದ ಗಮನಕ್ಕೆ ತಂದರು.

ವಕೀಲರ ಕಳವಳವನ್ನು ಅರ್ಥಮಾಡಿಕೊಂಡ ಬಿಸಿಐ ಅಧ್ಯಕ್ಷ ಮತ್ತು ಹಿರಿಯ ವಕೀಲ ಮನನ್‌ ಕುಮಾರ್‌ ಮಿಶ್ರಾ ಅವರು ಸಾಂಕೇತಿಕ ನಾಮನಿರ್ದೇಶನದ ಶುಲ್ಕವಾಗಿ ₹15 ಸಾವಿರ ನಿಗದಿಪಡಿಸಬಹುದು ಎಂದು ಹೇಳಿದರು. ಇದಕ್ಕೆ ವಕೀಲರ ಪರಿಷತ್ತು ಸಿದ್ಧವಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.