ADVERTISEMENT

ಡೀಪ್‌ಫೇಕ್‌ಗೆ ಸಿಲುಕಿದ ಕರ್ನಲ್‌ ಖುರೇಷಿ: ಪಿಐಎಲ್‌ ವಿಚಾರಣೆಗೆ ‘ಸುಪ್ರೀಂ’ ನಕಾರ

ಪಿಟಿಐ
Published 16 ಮೇ 2025, 10:28 IST
Last Updated 16 ಮೇ 2025, 10:28 IST
   

ನವದೆಹಲಿ: ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಅಧಿಕೃತವಾದ ಮಾಹಿತಿ ಒದಗಿಸುತ್ತಿದ್ದ ತಂಡದ ಭಾಗವಾಗಿದ್ದ ಕರ್ನಲ್ ಸೋಫಿಯಾ ಖುರೇಷಿ ಅವರ ಡೀಪ್‌ಫೇಕ್‌ ವಿಡಿಯೊಗಳು ಪ್ರಸಾರವಾಗುತ್ತಿವೆ ಎಂದು ಆರೋಪಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ‍ಪರಿಗಣಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಎ.ಐ ಮೂಲಕ ಸೃಷ್ಟಿಸಿರುವ ಡೀಪ್‌ಫೇಕ್‌ ವಿಡಿಯೊಗಳು ಆನ್‌ಲೈನ್‌ನಲ್ಲಿ ಪ್ರಸಾರವಾಗುವುದನ್ನು ತಡೆಯಲು ಮಾದರಿ ಕಾನೂನು ರೂಪಿಸಲು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಮಿತಿ ನೇಮಿಸುವಂತೆ ಕೋರಿ ನರೇಂದ್ರ ಕುಮಾರ್‌ ಗೋಸ್ವಾಮಿ ಅವರು ಪಿಐಎಲ್‌ನಲ್ಲಿ ಕೋರಿದ್ದರು.

ಅರ್ಜಿದಾರರು ಪಿಐಎಲ್‌ನಲ್ಲಿ ‘ಗಂಭೀರ ವಿಷಯ’ವನ್ನೇ ಎತ್ತಿದ್ದಾರೆ ಎಂಬುದನ್ನು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ ಮತ್ತು ಎನ್‌.ಕೋಟೀಶ್ವರ್‌ ಸಿಂಗ್‌ ಅವರನ್ನೊಳಗೊಂಡ ಪೀಠ ಒಪ್ಪಿಕೊಂಡಿತು. ಆದರೆ ಇದೇ ರೀತಿಯ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್‌ ನಡೆಸುತ್ತಿದೆ ಎಂದಿತು.

ADVERTISEMENT

‘ಇದು ಗಂಭೀರ ವಿಷಯವಲ್ಲ ಎಂದು ನಾವು ಹೇಳುತ್ತಿಲ್ಲ. ಆದರೆ ದೆಹಲಿ ಹೈಕೋರ್ಟ್ ಒಂದೆರಡು ವರ್ಷಗಳಿಂದ ಇದೇ ವಿಷಯದ ಬಗ್ಗೆ ವಿಚಾರಣೆ ನಡೆಸುತ್ತಿದೆ. ನಾವು ಈ ಅರ್ಜಿಯನ್ನು ಪರಿಗಣಿಸಿದರೆ, ಹೈಕೋರ್ಟ್ ತಾನು ನಡೆಸುತ್ತಿರುವ ವಿಚಾರಣೆಯನ್ನು ಅರ್ಧಕ್ಕೆ ನಿಲ್ಲಿಸುತ್ತದೆ. ಹಾಗಾದಲ್ಲಿ, ಹಲವು ವರ್ಷಗಳ ಅದರ ಶ್ರಮ ವ್ಯರ್ಥವಾಗುತ್ತದೆ. ಈ ವಿಷಯದ ಬಗ್ಗೆ ನೀವು ದೆಹಲಿ ಹೈಕೋರ್ಟ್‌ ಮೊರೆ ಹೋಗುವುದು ಸೂಕ್ತ’ ಎಂದು ಪೀಠವು ಅರ್ಜಿದಾರರಿಗೆ ಹೇಳಿದೆ. ‌

ಕರ್ನಲ್‌ ಸೋಫಿಯಾ ಅವರ ಡೀಪ್‌ಫೇಕ್‌ ವಿಡಿಯೊಗಳ ಪ್ರಸಾರವು ಮನಸ್ಸಿಗೆ ನೋವುಂಟು ಮಾಡಿದೆ. ಅವರ ಹಲವಾರು ನಕಲಿ ವಿಡಿಯೊಗಳು ಆನ್‌ಲೈನ್‌ನಲ್ಲಿ ಪ್ರಸಾರ ಮಾಡಲಾಗುತ್ತಿದೆ’ ಎಂದು ಗೋಸ್ವಾಮಿ ಅರ್ಜಿಯಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.