ನವದೆಹಲಿ: ಎಂಬಿಬಿಎಸ್ ಹಾಗೂ ಆಯುಷ್ ಪದ್ಧತಿ ವೈದ್ಯರಿಗೆ ನೀಡುವ ವೇತನ, ಭತ್ಯೆಗಳು ಹಾಗೂ ನಿವೃತ್ತಿ ವಯಸ್ಸು ಸೇರಿದಂತೆ ವಿವಿಧ ವಿಚಾರಗಳಿಗೆ ಸಂಬಂಧಿಸಿ ಸಮಾನತೆ ಇರಬೇಕು ಎಂಬ ಬಗ್ಗೆ ವಿಸ್ತೃತ ಪೀಠವೇ ಸ್ಪಷ್ಟ ಆದೇಶ ಹೊರಡಿಸುವುದು ಸೂಕ್ತ ಎಂದು ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ಹೇಳಿದೆ.
ಎರಡೂ ಪದ್ಧತಿಯ ವೈದ್ಯರು ಹೊಂದಿರುವ ಶೈಕ್ಷಣಿಕ ಅರ್ಹತೆ, ಅವರು ಅನುಸರಿಸುವ ಚಿಕಿತ್ಸಾ ವಿಧಾನ, ಕಾರ್ಯವೈಖರಿಯಂತಹ ಅಂಶಗಳ ಆಧಾರದ ಮೇಲೆ ಅವರಿಗೆ ನೀಡುವ ಸೌಲಭ್ಯಗಳಲ್ಲಿ ಸಮಾನತೆ ಇರಬೇಕೇ ಬೇಡವೇ ಎಂಬುದನ್ನು ನಿರ್ಧರಿಸಬೇಕಾಗುತ್ತದೆ. ಹೀಗಾಗಿ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಲಾಗುವುದು ಎಂದು ಮುಖ್ಯನ್ಯಾಯಮೂರ್ತಿ ಬಿ.ಆರ್. ಗವಾಯಿ ಹಾಗೂ ನ್ಯಾಯಮೂರ್ತಿ ಕೆ.ವಿನೋದಚಂದ್ರನ್ ಅವರು ಇದ್ದ ಪೀಠ ಹೇಳಿದೆ.
ಈ ವಿಚಾರವಾಗಿ ರಾಜಸ್ಥಾನ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ನಡೆಸಿದ ಪೀಠವು, ಈ ಎರಡೂ ವೈದ್ಯಕೀಯ ಪದ್ಧತಿಗಳ ಸೇವಾ ನಿಯಮಗಳಿಗೆ ಸಂಬಂಧಿಸಿ ಈ ಹಿಂದೆ ಹಲವು ತೀರ್ಪುಗಳನ್ನು ನೀಡಿರುವ ಸುಪ್ರೀಂ ಕೋರ್ಟ್, ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ ಎಂದಿದೆ.
ವಿಚಾರಣೆ ವೇಳೆ, ವೈದ್ಯರಿಗೆ ನೀಡುವ ವೇತನ ಹಾಗೂ ಅವರ ನಿವೃತ್ತಿ ವಯಸ್ಸಿನ ಕುರಿತು ನ್ಯಾಯಾಲಯವು ತಾನು ನೀಡಿದ ತೀರ್ಪುಗಳಲ್ಲಿ ಭಿನ್ನ ನಿಲುವುಗಳನ್ನು ತಳೆದಿದೆ ಎಂಬ ಅಂಶವನ್ನು ಅರ್ಜಿದಾರರ ವಕೀಲರು ಕೂಡ ಪೀಠದ ಗಮನಕ್ಕೆ ತಂದರು.
ಅನೇಕ ರಾಜ್ಯಗಳು ಬೇರೆ ಬೇರೆ ವೈದ್ಯಕೀಯ ಪದ್ಧತಿಯ ವೈದ್ಯರ ನಿವೃತ್ತಿ ವಯಸ್ಸನ್ನು ಬೇರೆಬೇರೆಯೇ ನಿಗದಿ ಮಾಡಿವೆ. ಜನರಿಗೆ ವೈದ್ಯಕೀಯ ಸೇವೆ ಒದಗಿಸುವ ಹೊಣೆಗಾರಿಕೆ ಹಾಗೂ ಅಲೋಪಥಿ ಪದ್ಧತಿ ವೈದ್ಯರ ಸಂಖ್ಯೆ ಕಡಿಮೆ ಇರುವುದು ಇದಕ್ಕೆ ಕಾರಣ ಎಂದು ಹೇಳಿವೆ
ಅಲೋಪಥಿ ಹಾಗೂ ಆಯುಷ್/ಆಯುರ್ವೇದ ವೈದ್ಯರ ಶೈಕ್ಷಣಿಕ ಅರ್ಹತೆಗಳೇ ಬೇರೆ. ಹೀಗಾಗಿ, ಆಯುಷ್ ವೈದ್ಯರು ಅಲೋಪಥಿ ವೈದ್ಯರಿಗೆ ಸಮಾನ ವೇತನ ಹಾಗೂ ಇತರ ಸೌಲಭ್ಯಗಳನ್ನು ಕೇಳುವಂತಿಲ್ಲ ಎಂದು ಡಾ.ಸೊಲೊಮನ್ ವರ್ಸಸ್ ಕೇರಳ ಸರ್ಕಾರ ಮತ್ತು ಇತರರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ಹೇಳಿದೆ
ಆಯುಷ್ ವೈದ್ಯರು ಹಾಗೂ ಕೇಂದ್ರದ ಆರೋಗ್ಯ ಯೋಜನೆಗಳಡಿ ಕಾರ್ಯ ನಿರ್ವಹಿಸುವ ವೈದ್ಯರು ಬೇರೆಬೇರೆ ವೈದ್ಯಕೀಯ ಪದ್ಧತಿಗಳಡಿ ಚಿಕಿತ್ಸೆ ನೀಡುತ್ತಿದ್ದರೂ, ರೋಗಿಗಳಿಗೆ ಔಷಧೋಪಚಾರದ ಸೇವೆ ಒದಗಿಸುತ್ತಾರೆ. ಹೀಗಾಗಿ, ಯಾವುದೇ ರೀತಿಯಲ್ಲಿ ಅವರನ್ನು ವರ್ಗೀಕರಿಸುವುದು ತರ್ಕಬದ್ಧವಲ್ಲ ಹಾಗೂ ಪಕ್ಷಪಾತದ ನಡೆಯಾಗಲಿದೆ ಎಂದು ನವದೆಹಲಿ ನಗರ ಪಾಲಿಕೆ ವರ್ಸಸ್ ಡಾ.ರಾಮನರೇಶ್ ಶರ್ಮಾ ಹಾಗೂ ಇತರರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠವೊಂದು ಹೇಳಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.