ADVERTISEMENT

ಅಲಿ ಖಾನ್‌ ಪ್ರಕರಣ: ತಡೆಯಾಜ್ಞೆ ವಿಸ್ತರಿಸಿದ ಸುಪ್ರೀಂ ಕೋರ್ಟ್‌

ಪಿಟಿಐ
Published 6 ಜನವರಿ 2026, 16:19 IST
Last Updated 6 ಜನವರಿ 2026, 16:19 IST
.
.   

ನವದೆಹಲಿ: ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಲಿ ಖಾನ್‌ ಮಹಮೂದಾಬಾದ್‌ ವಿರುದ್ಧ ಹರಿಯಾಣ ಎಸ್‌ಐಟಿ ಸಲ್ಲಿಸಿರುವ ಆರೋಪಪಟ್ಟಿಯನ್ನು ‍ಪರಿಗಣಿಸದಂತೆ ವಿಚಾರಣಾ ನ್ಯಾಯಾಲಯಕ್ಕೆ ನೀಡಿರುವ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ವಿಸ್ತರಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 2025ರ ಆಗಸ್ಟ್‌ನಲ್ಲಿ ಎಸ್‌ಐಟಿ, ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ. ಹರಿಯಾಣ ಸರ್ಕಾರ ಇದುವರೆಗೂ ಅನುಮತಿ ನೀಡಿಲ್ಲ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌.ವಿ ರಾಜು ಅವರು ತಿಳಿಸಿದ ಬಳಿಕ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠವು ಈ ಆದೇಶ ಹೊರಡಿಸಿತು.

ಆಪರೇಷನ್‌ ಸಿಂಧೂರ ಕುರಿತು ಅಲಿ ಖಾನ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ್ದ ಪೋಸ್ಟ್‌ಗಳಿಗೆ ಸಂಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ.

ADVERTISEMENT

ರಾಜ್ಯ ಸರ್ಕಾರವು ಉದಾರ ಮನಸ್ಸು ತೋರಿ ಈ ಪ್ರಕರಣವನ್ನು ಮುಕ್ತಾಯಗೊಳಿಸಲು ಒಲವು ತೋರುತ್ತಿರುವುದರಿಂದ ಅನುಮತಿ ನೀಡುತ್ತಿಲ್ಲವೇ ಎಂಬ ಕುರಿತು ಸ್ಪಷ್ಟ ಸೂಚನೆಗಳನ್ನು ಪಡೆಯಲು ಹೆಚ್ಚಿನ ಕಾಲಾವಕಾಶ ಬೇಕು ಎಂದು ರಾಜು ಅವರು ಕೋರಿದರು.

ಸರ್ಕಾರದಿಂದ ಸ್ಪಷ್ಟ ಸೂಚನೆಗಳನ್ನು ಪಡೆಯಲು ಸಾಲಿಸಿಟರ್‌ ಜನರಲ್‌ ಅವರಿಗೆ ಅವಕಾಶ ನೀಡಿದ ಪೀಠ, ಆರು ವಾರಗಳ ಬಳಿಕ ವಿಚಾರಣೆ ನಡೆಸುವುದಾಗಿ ತಿಳಿಸಿತು. ಈ ಅವಧಿಯಲ್ಲಿ ಅಲಿ ಖಾನ್ ಅವರು ಜವಾಬ್ದಾರಿಯಿಂದ ವರ್ತಿಸುವರು ಎಂಬ ನಿರೀಕ್ಷೆಯಿದೆ ಎಂದು ಪೀಠವು ಹೇಳಿತು.

‘ಅವರು (ರಾಜ್ಯ ಸರ್ಕಾರ) ಅನುಮತಿ ನೀಡದಿರಲು ನಿರ್ಧರಿಸಿದರೆ, ನಿಮಗೆ ಸಾಮಾಜಿಕ ಮಾಧ್ಯಮದಲ್ಲಿ ತೋಚಿದ್ದನ್ನೆಲ್ಲಾ ಬರೆಯಬಹುದು ಎಂದರ್ಥವಲ್ಲ. ಸರ್ಕಾರ ಔದಾರ್ಯ ತೋರಿಸಿದರೆ, ನೀವು ಕೂಡಾ ಹೆಚ್ಚಿನ ಜವಾಬ್ದಾರಿಯಿಂದ ವರ್ತಿಸಬೇಕು’ ಎಂದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.