ನವದೆಹಲಿ: ಮಗಳ ವಿವಾಹದ ವೆಚ್ಚವನ್ನು ಭರಿಸುವುದು ತಂದೆಯ ಕರ್ತವ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ದಂಪತಿಯ ವಿಚ್ಛೇದನಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಮಗಳ ಮದುವೆಯ ಖರ್ಚಿಗಾಗಿ ₹10 ಲಕ್ಷ ನೀಡುವಂತೆ ತಂದೆಗೆ ಸೂಚಿಸಿದ ಪೀಠ, ದಂಪತಿಯ ವಿಚ್ಛೇದನಕ್ಕೆ ಕುಟುಂಬ ನ್ಯಾಯಾಲಯವು ನೀಡಿದ್ದ ಅನುಮತಿಯನ್ನು ಎತ್ತಿಹಿಡಿಯಿತು.
ವಿಚ್ಛೇದನದ ವಿರುದ್ಧ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠ ನಡೆಸಿತು. 1996ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಜೋಡಿಯ ಸಂಬಂಧ ಸಂಪೂರ್ಣ ಬೇರ್ಪಟ್ಟಿರುವುದು ಮತ್ತು ಮಧ್ಯಸ್ಥಿಕೆಯ ಪ್ರಯತ್ನ ವಿಫಲವಾಗಿರುವುದನ್ನು ಪೀಠವು ಗಮನಿಸಿತು.
‘ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯದ ಹೊರತಾಗಿಯೂ ತನ್ನ ಮಗಳ ವಿವಾಹದ ವೆಚ್ಚಗಳನ್ನು ಭರಿಸುವುದು ಪುರುಷನ ಕರ್ತವ್ಯವಾಗಿದೆ. ಆದ್ದರಿಂದ ಈ ಉದ್ದೇಶಕ್ಕಾಗಿ ₹10 ಲಕ್ಷವನ್ನು ನೀಡಬೇಕೆಂದು ಬಯಸುತ್ತೇವೆ’ ಎಂದು ಪೀಠ ತಿಳಿಸಿತು.
ದಂಪತಿಯ ವಿಚ್ಛೇದನಕ್ಕೆ ಅನುಮತಿ ನೀತಿ ಕುಟುಂಬ ನ್ಯಾಯಾಲಯವು 2019ರಲ್ಲಿ ಹಾಗೂ ದೆಹಲಿ ಹೈಕೋರ್ಟ್ 2023ರಲ್ಲಿ ನೀಡಿದ್ದ ತೀರ್ಪಿನಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.