ADVERTISEMENT

ಅವಧಿಗೆ ಮುನ್ನ ಬಿಡುಗಡೆ ಹಕ್ಕು: ಏಕಮಾದರಿ ಮಾರ್ಗಸೂಚಿಗೆ ಸುಪ್ರೀಂ ಕೋರ್ಟ್ ಒಲವು

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 18:53 IST
Last Updated 14 ಆಗಸ್ಟ್ 2021, 18:53 IST

ನವದೆಹಲಿ (ಪಿಟಿಐ): ಅವಧಿಗೆ ಮುನ್ನವೇ ಬಿಡುಗಡೆ ಹೊಂದಲು ಕೈದಿಗಳಿಗಿರುವ ಕಾನೂನು ಬದ್ಧ ಹಕ್ಕನ್ನು ರಕ್ಷಿಸಲು, ದೇಶದಾದ್ಯಂತ ಏಕರೂಪಿ, ಮಾದರಿ ಮಾರ್ಗಸೂಚಿ ರೂಪಿಸುವ ಬಗ್ಗೆ ಪರಿಶೀಲಿಸುವಂತೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ(ಎನ್‌ಎಎಲ್‌ಎಸ್‌ಎ) ಸುಪ್ರೀಂ ಕೋರ್ಟ್ ಹೇಳಿದೆ.

ಕೊಲೆ ಪ್ರಕರಣದಲ್ಲಿ ವ್ಯಕ್ತಿಯೊಬ್ಬನಿಗೆ ಅಹಮದಾಬಾದ್‌ ಹೈಕೋರ್ಟ್‌ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಆದರೆ, ಆಗ್ರಾ ಜೈಲು ಆಡಳಿತ ಹೊರಡಿಸಿರುವ ಬಂಧನ ಪ್ರಮಾಣಪತ್ರದಲ್ಲಿ ಆ ಅಪರಾಧಿಗೆ ರಿಯಾಯಿತಿಯೊಂದಿಗೆ 16 ವರ್ಷಗಳ ಜೈಲು ಶಿಕ್ಷೆಯನ್ನು ನೀಡಲಾಗಿದೆ ಎಂಬುದನ್ನು ನ್ಯಾಯಾಲಯ ಉಲ್ಲೇಖಿಸಿತು.

ಅಪರಾಧಿಗೆ ಕಾನೂನುಬದ್ಧವಾಗಿ ಸಿಗಬೇಕಾದ ಹಕ್ಕಿನ ಕುರಿತು ಮಾಹಿತಿ ನೀಡುವಂತೆ, ಜೈಲು ಅಧಿಕಾರಿಗೆ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಮತ್ತು ಎಂ.ಆರ್‌. ಶಾ ಅವರಿದ್ದ ಪೀಠ ನಿರ್ದೇಶನ ನೀಡಿತು.ಅಲ್ಲದೇ ಉತ್ತರ ಪ್ರದೇಶ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚನೆ ನೀಡಿದ ನ್ಯಾಯಪೀಠ, ವಕೀಲರ ತಂಡ ಎಲ್ಲಾ ಜೈಲುಗಳಿಗೂ ಭೇಟಿ ನೀಡಿ, ಅಪರಾಧಿಗಳು ಯಾವ ರೀತಿಯ ಅಪರಾಧಗಳಿಗೆ ಶಿಕ್ಷೆ ಪಡೆಯುತ್ತಿದ್ದಾರೆ ಮತ್ತು ಅವರಿಗೆ ನೀಡಲಾಗಿರುವ ಶಿಕ್ಷೆಯ ಅವಧಿ ಕುರಿತು ಮಾಹಿತಿ ಪಡೆಯಬೇಕು. ಜೊತೆಗೆ, ಅವಧಿಗೂ ಮುನ್ನ ಬಿಡುಗಡೆ ಪಡೆಯಲು ಅರ್ಜಿ ಸಲ್ಲಿಸುವ ಕುರಿತು ಅಪರಾಧಿಗಳಿಗೆ ತಿಳಿವಳಿಕೆ’ ನೀಡಬೇಕು ಎಂದಿದೆ.

ADVERTISEMENT

ಈ ಸಂದರ್ಭದಲ್ಲಿ ಅಪರಾಧಿಗಳು ಕಾನೂನು ಸಲಹೆ ಕೇಳಿದರೆ, ಅದರ ಬಗ್ಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಡಿಎಲ್‌ಎಸ್‌ಎ) ಹಿರಿಯ ಜೈಲು ಅಧೀಕ್ಷಕರು ಎರಡು ವಾರಗಳ ಒಳಗೆ ತಿಳಿಸಬೇಕು. ಅಪರಾಧಿಗೆ ಅಗತ್ಯವಿರುವ ನೆರವನ್ನು ಡಿಎಲ್‌ಎಸ್‌ಎ ನೀಡಬೇಕು. ಅದರ ಪ್ರತಿಯನ್ನು ಉತ್ತರ ಪ್ರದೇಶ ಕಾನೂನು ಪ್ರಾಧಿಕಾರ, ಎನ್‌ಎಲ್‌ಎಸ್‌ಎಯ ಕಾರ್ಯದರ್ಶಿ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನೀಡಬೇಕು ಎಂದು ಕೋರ್ಟ್ ನಿರ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.