ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಪ್ರದೇಶದಲ್ಲಿನ (ದೆಹಲಿ–ಎನ್‌ಸಿಆರ್) ಬೀದಿ ನಾಯಿಗಳ ಸ್ಥಳಾಂತರಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಮೂರ್ತಿಗಳು ಇರುವ ಹೊಸ ಪೀಠವು ಆಗಸ್ಟ್ 14ರಂದು (ಗುರುವಾರ) ನಡೆಸಲಿದೆ.
ನ್ಯಾಯಮೂರ್ತಿಗಳಾದ ವಿಕ್ರಮನಾಥ್, ಸಂದೀಪ್ ಮೆಹ್ತಾ ಹಾಗೂ ಎನ್.ವಿ.ಅಂಜಾರಿಯಾ ಅವರು ಇರುವ ತ್ರಿಸದಸ್ಯ ಪೀಠವನ್ನು ಈ ಪ್ರಕರಣದ ವಿಚಾರಣೆಗಾಗಿ ರಚಿಸಲಾಗಿದೆ.
ಬೀದಿ ನಾಯಿಗಳನ್ನು ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಇದಕ್ಕೆ ದೇಶದಾದ್ಯಂತ ವಿರೋಧ ವ್ಯಕ್ತವಾದ ಕಾರಣ, ಸುಪ್ರೀಂ ಕೋರ್ಟ್ ಗುರುವಾರ ಈ ಕುರಿತು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆಗೆ ಮೂವರು ನ್ಯಾಯಮೂರ್ತಿಗಳಿರುವ ಪೀಠ ರಚಿಸಿದೆ.
ಬೀದಿನಾಯಿಗಳನ್ನು ಶಾಶ್ವತವಾಗಿ ಸ್ಥಳಾಂತರ ಮಾಡುವಂತೆ ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಆರ್.ಮಹಾದೇವನ್ ಅವರು ಇದ್ದ ಪೀಠ ಆಗಸ್ಟ್ 11ರಂದು ನಿರ್ದೇಶನ ನೀಡಿತ್ತು.
ಬೀದಿನಾಯಿಗಳ ಸಮಸ್ಯೆ ಕುರಿತ ಬೇರೊಂದು ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಜೆಐ ಬಿ.ಆರ್.ಗವಾಯಿ ಅವರಿಗೆ, ದ್ವಿಸದಸ್ಯ ಪೀಠವು ಆಗಸ್ಟ್ 11ರಂದು ನೀಡಿರುವ ತೀರ್ಪು ಕುರಿತು ಅರ್ಜಿದಾರರ ಗಮನ ಸೆಳೆದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಜೆಐ ಅವರು, ಈ ಕುರಿತು ಪರಿಶೀಲಿಸುವುದಾಗಿ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.