ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ
ನವದೆಹಲಿ: ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಭೂಷಣ್ ರಾಮಕೃಷ್ಣ ಗವಾಯಿ (ಬಿ.ಆರ್. ಗವಾಯಿ) ಹೆಸರನ್ನು ಹಾಲಿ ಸಿಜೆಐ ಸಂಜೀವ್ ಖನ್ನಾ ಅವರು ಕೇಂದ್ರ ಸರ್ಕಾರಕ್ಕೆ ಬುಧವಾರ ಶಿಫಾರಸು ಮಾಡಿದ್ದಾರೆ.
ಗವಾಯಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಖನ್ನಾ ಅವರ ನಂತರದ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ. ಖನ್ನಾ ಅವರು ಸಿಜೆಐ ಸ್ಥಾನದಿಂದ ಮೇ 13ರಂದು ನಿವೃತ್ತರಾಗಲಿದ್ದಾರೆ. ಗವಾಯಿ ಅವರು ದೇಶದ 52ನೆಯ ಸಿಜೆಐ ಆಗಿ ಮೇ 14ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
2019ರ ಮೇ 24ರಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದ ಗವಾಯಿ ಅವರಿಗೆ ಸಿಜೆಐ ಆಗಿ ಆರು ತಿಂಗಳಿಗೂ ಹೆಚ್ಚಿನ ಅವಧಿ ಸಿಗಲಿದೆ. ಅವರು ಈ ವರ್ಷದ ನವೆಂಬರ್ 23ರಂದು ನಿವೃತ್ತರಾಗಲಿದ್ದಾರೆ.
ನ್ಯಾಯಮೂರ್ತಿ ಗವಾಯಿ ಅವರು ಪರಿಶಿಷ್ಟ ಜಾತಿಗೆ ಸೇರಿದವರು ಎಂದು ನ್ಯಾಯಾಂಗ ಕಲಾಪಗಳ ವರದಿಗಾರಿಕೆಯಲ್ಲಿ ತೊಡಗಿರುವ ‘ಸುಪ್ರೀಂ ಕೋರ್ಟ್ ಅಬ್ಸರ್ವರ್’ ಜಾಲತಾಣ ಉಲ್ಲೇಖಿಸಿದೆ.
1960ರ ನವೆಂಬರ್ 24ರಂದು ಅಮರಾವತಿಯಲ್ಲಿ ಜನಿಸಿದ ಗವಾಯಿ ಅವರು ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ 2003ರ ನವೆಂಬರ್ 14ರಂದು ಅಧಿಕಾರ ವಹಿಸಿಕೊಂಡರು. 2005ರ ನವೆಂಬರ್ 12ರಂದು ಅವರ ಸೇವೆಯು ಕಾಯಂ ಆಯಿತು.
ಮಹತ್ವದ ತೀರ್ಪುಗಳನ್ನು ಪ್ರಕಟಿಸಿದ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದ ಭಾಗವಾಗಿ ನ್ಯಾಯಮೂರ್ತಿ ಗವಾಯಿ ಅವರು ಕರ್ತವ್ಯ ನಿರ್ವಹಿಸಿದ್ದಾರೆ.
ಸಂವಿಧಾನದ 370ನೆಯ ವಿಧಿಯ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಕೇಂದ್ರದ ತೀರ್ಮಾನವನ್ನು ಎತ್ತಿಹಿಡಿದ ಐವರು ನ್ಯಾಯಮೂರ್ತಿಗಳ ಪೀಠದ ಭಾಗವಾಗಿದ್ದರು.
ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಪಡಿಸಿದ ಸಂವಿಧಾನ ಪೀಠದಲ್ಲಿ ನ್ಯಾಯಮೂರ್ತಿ ಗವಾಯಿ ಇದ್ದರು.
ನೋಟು ರದ್ದತಿ ತೀರ್ಮಾನವನ್ನು ಬಹುಮತದ ಮೂಲಕ ಎತ್ತಿಹಿಡಿದ ಸಂವಿಧಾನ ಪೀಠದಲ್ಲಿಯೂ ಅವರು ಇದ್ದರು.
ಮೀಸಲಾತಿಗಾಗಿ ಪರಿಶಿಷ್ಟ ಜಾತಿಗಳ ಒಳವರ್ಗೀಕರಣದ ಸಾಂವಿಧಾನಿಕ ಅಧಿಕಾರವು ರಾಜ್ಯ ಸರ್ಕಾರಗಳಿಗೆ ಇದೆ ಎಂದು ಬಹುಮತದ ಆಧಾರದಲ್ಲಿ ತೀರ್ಪು ನೀಡಿದ ಏಳು ನ್ಯಾಯಮೂರ್ತಿಗಳ ಪೀಠದಲ್ಲಿ ಅವರು ಒಬ್ಬರಾಗಿದ್ದರು.
ಗವಾಯಿ ನೇತೃತ್ವದ ನ್ಯಾಯಪೀಠವು ಇಡೀ ದೇಶಕ್ಕೆ ಅನ್ವಯವಾಗುವ ಮಾರ್ಗಸೂಚಿಯೊಂದನ್ನು ಹೊರಡಿಸಿ ಕಾರಣ ಕೇಳಿ ನೋಟಿಸ್ ಕೊಡದೆ ಯಾವ ಆಸ್ತಿಯನ್ನೂ ಧ್ವಂಸಗೊಳಿಸುವಂತೆ ಇಲ್ಲ ಎಂದು ಹೇಳಿತು. ಸಂಬಂಧಪಟ್ಟ ವ್ಯಕ್ತಿಗೆ ನೋಟಿಸ್‌ಗೆ ಪ್ರತಿಕ್ರಿಯೆ ನೀಡಲು 15 ದಿನ ಕಾಲಾವಕಾಶ ಕೊಡಬೇಕು ಎಂದು ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.