ನವದೆಹಲಿ: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ ಎನ್ನಲಾದ ಪ್ರಕರಣವು ನ್ಯಾಯಾಂಗ ವಲಯದಲ್ಲಿ ಕೋಲಾಹಲ ಉಂಟುಮಾಡಿದೆ.
ಘಟನೆಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರು ವರ್ಮಾ ವಿರುದ್ಧ ಆಂತರಿಕ ತನಿಖೆ ಆರಂಭಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡುವ ಪ್ರಸ್ತಾಪಕ್ಕೂ, ಈ ಘಟನೆಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.
ವರ್ಮಾ ಅವರ ಮನೆಗೆ ಬಿದ್ದ ಬೆಂಕಿಯನ್ನು ನಂದಿಸಲು ತೆರಳಿದ್ದ ಅಗ್ನಿ ಶಾಮಕ ದಳದ ಸಿಬ್ಬಂದಿ ಭಾರಿ ಪ್ರಮಾಣದ ನಗದು ಪತ್ತೆ ಮಾಡಿದ್ದಾರೆ ಎಂದು ವರದಿಯಾಗಿತ್ತು. ಹಣ ಪತ್ತೆಯಾಗಿದೆ ಎನ್ನಲಾದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಹಲವರು ನ್ಯಾಯಮೂರ್ತಿಯ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಅವರನ್ನು ವರ್ಗಾವಣೆ ಮಾಡಿದ ಸುಪ್ರೀಂ ಕೋರ್ಟ್ ಕೊಲಿಜಿಯಂ ನಿರ್ಧಾರದ ಬಗ್ಗೆಯೂ ಟೀಕೆಗಳು ಕೇಳಿಬಂದವು.
ಎಲ್ಲ ರೀತಿಯ ಊಹಾಪೋಹಗಳಿಗೆ ಅಂತ್ಯ ಹಾಡಲು ಶುಕ್ರವಾರ ಸಂಜೆ ಪ್ರಕಟಣೆ ಹೊರಡಿಸಿದ ಸುಪ್ರೀಂ ಕೋರ್ಟ್, ‘ನ್ಯಾಯಮೂರ್ತಿ ಯಶವಂತ್ ವರ್ಮಾ ನಿವಾಸದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ಮತ್ತು ವದಂತಿಗಳು ಹರಡುತ್ತಿವೆ’ ಎಂದು ಹೇಳಿಕೆ ನೀಡಿದೆ.
ಈ ವಿಷಯ ಚರ್ಚಿಸಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಸಭೆ ಸೇರಿದೆ ಎಂಬುದನ್ನು ಪ್ರಕಟಣೆ ಖಚಿತ ಪಡಿಸಿದ್ದು, ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ ಉಪಾಧ್ಯಾಯ ಅವರು ಈ ಸಂಬಂಧ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗೆ ವರದಿ ಸಲ್ಲಿಸಲಿದ್ದಾರೆ ಎಂದು ಹೇಳಿದೆ.
‘ಉಪಾಧ್ಯಾಯ ಅವರು ಸಾಕ್ಷ್ಯ ಮತ್ತು ಮಾಹಿತಿ ಯನ್ನು ಸಂಗ್ರಹಿಸುವ ಆಂತರಿಕ ತನಿಖಾ ಪ್ರಕ್ರಿಯೆ
ಪ್ರಾರಂಭಿಸಿದ್ದಾರೆ. ಅವರು ನೀಡುವ ವರದಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ. ಮಾರ್ಚ್ 20ರಂದು ಕೊಲಿಜಿಯಂ ಸಭೆ ಸೇರುವ ಮುನ್ನವೇ ಅವರು ತನಿಖೆ ಆರಂಭಿಸಿದ್ದರು ಎಂದು ಹೇಳಲಾಗಿದೆ.
‘ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡುವ ಪ್ರಸ್ತಾವನೆಗೂ ಅವರ ವಿರುದ್ಧದ ಆಂತರಿಕ ತನಿಖೆಗೂ ಸಂಬಂಧ ಇಲ್ಲ. ಮಾತ್ರವಲ್ಲ, ವರದಿ ಯಾದ ಘಟನೆಯು ದೆಹಲಿಯಲ್ಲಿ ನಡೆದಿದೆ’ ಎಂದಿದೆ.
ದೆಹಲಿ ಹೈಕೋರ್ಟ್‌ನ ಎರಡನೇ ಅತ್ಯಂತ ಹಿರಿಯ ನ್ಯಾಯಮೂರ್ತಿ ಆಗಿರುವ ವರ್ಮಾ ಅವರು ಮಾರಾಟ ತೆರಿಗೆ, ಜಿಎಸ್‌ಟಿ, ಕಂಪನಿ ಮೇಲ್ಮನವಿಗಳು ಮತ್ತು ಇತರ ಮೇಲ್ಮನವಿಗಳ ವಿಚಾರಣೆ ನಡೆಸುವ ವಿಭಾಗೀಯ ಪೀಠದ ನೇತೃತ್ವ ವಹಿಸಿದ್ದಾರೆ.
ರಜಾದಲ್ಲಿ ತೆರಳಿರುವ ಕಾರಣ ಅವರು ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ‘ವರ್ಮಾ ಅವರ ರಜೆಯಲ್ಲಿದ್ದಾರೆ’ ಎಂದು ಅವರ ಸಿಬ್ಬಂದಿ ಶುಕ್ರವಾರ ಬೆಳಿಗ್ಗೆ ವಕೀಲರಿಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.