
ನವದೆಹಲಿ: ಕೆಲವೊಮ್ಮೆ ತನಿಖೆಯನ್ನು ಪೂರ್ಣಗೊಳಿಸುವುದಕ್ಕೆ ನ್ಯಾಯಾಲಯಗಳು ತನಿಖಾ ಸಂಸ್ಥೆಗೆ ಕಾಲಮಿತಿ ನಿಗದಿ ಮಾಡುತ್ತವೆ. ಇದು ಅಸಾಧಾರಣ ಕ್ರಮವೇ ಹೊರತು ಸಾಮಾನ್ಯ ನಿಯಮವೇನಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ದಾಖಲೆಗಳನ್ನು ತಿರುಚಿ ಶಸ್ತ್ರಾಸ್ತ್ರ ಪರವಾನಗಿ ಪಡೆದ ಪ್ರಕರಣದಲ್ಲಿ ಆರೋಪಿಗೆ ಬಲವಂತದ ಕ್ರಮದಿಂದ ರಕ್ಷಣೆ ನೀಡಿ ಹಾಗೂ ಆತನ ವಿರುದ್ಧದ ತನಿಖೆಯನ್ನು 90 ದಿನಗಳ ಒಳಗಾಗಿ ಪೂರ್ಣಗೊಳಿಸುವಂತೆ ಉತ್ತರ ಪ್ರದೇಶ ಪೊಲೀಸರಿಗೆ ಸೂಚಿಸಿ ಅಲಹಾಬಾದ್ ಹೈಕೋರ್ಟ್ ನೀಡಿರುವ ಆದೇಶ ಪರಿಶೀಲನೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ಹೇಳಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಹಾಗೂ ಎನ್.ಕೆ.ಸಿಂಗ್ ಅವರು ಇದ್ದ ನ್ಯಾಯಪೀಠ ಈ ಕುರಿತ ಅರ್ಜಿ ವಿಚಾರಣೆ ನಡೆಸಿದ್ದು, ಡಿಸೆಂಬರ್ 19ರಂದು ತೀರ್ಪು ನೀಡಿದೆ.
‘ಕೆಲ ನಿರ್ದಿಷ್ಟ ಪ್ರಕರಣಗಳಲ್ಲಿ ನಡೆಯುತ್ತಿರುವ ತನಿಖೆ ವಿಳಂಬವಾಗುತ್ತಿದೆ ಎಂಬುದನ್ನು ಗಮನಿಸಿದ ಬಳಿಕವೇ ನ್ಯಾಯಾಲಯಗಳು ಮಧ್ಯಪ್ರವೇಶಿಸಿ, ತನಿಖೆ ಪೂರ್ಣಗೊಳಿಸಲು ಕಾಲಮಿತಿ ನಿಗದಿ ಮಾಡಿರುವ ನಿದರ್ಶನಗಳಿವೆ. ಆದರೆ, ಇದು ಸಾಮಾನ್ಯ ನಿಯಮ ಅಲ್ಲ’ ಎಂದಿರುವ ನ್ಯಾಯಪೀಠ, ಅಲಹಾಬಾದ್ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿ ತೀರ್ಪು ನೀಡಿದೆ.
‘ಒಂದು ವೇಳೆ, ಕಾಲಮಿತಿ ನಿಗದಿ ಮಾಡದಿದ್ದಲ್ಲಿ ಪ್ರತಿಕೂಲ ಪರಿಣಾಮಗಳು ಕಂಡುಬರಬಹುದು. ಇಂತಹ ಸಂದರ್ಭಗಳಲ್ಲಿ ತನಿಖೆ ಪೂರ್ಣಗೊಳಿಸುವುದಕ್ಕೆ ಕಾಲಮಿತಿ ನಿಗದಿ ಮಾಡಿ ನ್ಯಾಯಾಲಯಗಳು ಆದೇಶಿಸುತ್ತವೆ. ಸಂವಿಧಾನದ 21ನೇ ವಿಧಿಯು ಪ್ರತಿಯೊಬ್ಬರಿಗೂ ತ್ವರಿತ ವಿಚಾರಣೆಯ ಹಕ್ಕು ನೀಡಿದೆ’ ಎಂದು ಪೀಠ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.