ADVERTISEMENT

ಗಣಿ ಗುತ್ತಿಗೆ ನವೀಕರಣಕ್ಕೆ ವಿಳಂಬ: ಸರ್ಕಾರಕ್ಕೆ ಗರ ಬಡಿದಿದೆಯೇ ಎಂದ ಸುಪ್ರೀಂ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2020, 19:45 IST
Last Updated 5 ಮಾರ್ಚ್ 2020, 19:45 IST
.
.   

ನವದೆಹಲಿ: ಕಬ್ಬಿಣದ ಅದಿರಿನ ಗಣಿಗಾರಿಕೆಯ ಗುತ್ತಿಗೆ ವಿಸ್ತರಣೆ ಮತ್ತು ನವೀಕರಣಕ್ಕೆ ಸಂಬಂಧಿಸಿದಂತೆ ವಿಳಂಬ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಸುಪ್ರೀಂ ಕೋರ್ಟ್‌ ಗುರುವಾರ ಆಕ್ರೋಶ ವ್ಯಕ್ತಪಡಿಸಿತು.

ಗಣಿ ಗುತ್ತಿಗೆ ನವೀಕರಣ ಕೋರಿದ್ದ ಅರ್ಜಿ ತಿರಸ್ಕರಿಸಿ ರಾಜ್ಯ ಹೈಕೋರ್ಟ್‌ ಅಕ್ಟೋಬರ್‌ನಲ್ಲಿ ನೀಡಿರುವ ಆದೇಶ ಪ್ರಶ್ನಿಸಿ ಮಿನರಲ್ ಎಂಟರ್‌ಪ್ರೈಸಸ್ ಲಿಮಿಟೆಡ್ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠವು ‘ಅಧಿಕಾರಿಶಾಹಿಯು ನ್ಯಾಯಾಲಯವೇ ಎಲ್ಲ ನಿರ್ಧಾರ ಕೈಗೊಳ್ಳಲಿ ಎಂದು ಭಾವಿಸಿದೆಯೇ’ ಎಂದು ಕಿಡಿಕಾರಿತು.

‘ನೀತಿ ರೂಪಿಸಬೇಕಿರುವ ಸರ್ಕಾರಕ್ಕೆ ಗರ ಬಡಿದಿದೆಯೇ’ ಎಂದ ಪೀಠ, ‘ಗುತ್ತಿಗೆದಾರರು ನ್ಯಾಯಾಲಯದಲ್ಲಿ ದಾವೆ ಹೂಡಲು ಕಾರಣರಾದ ಅಧಿಕಾರಿಗಳೇ ಸೂಕ್ತ ನಿರ್ಧಾರ ಕೈಗೊಳ್ಳಬಾರದೇಕೆ’ ಎಂದು ರಾಜ್ಯ ಸರ್ಕಾರದ ಪರ ವಕೀಲ ಗುರು ಕೃಷ್ಣಕುಮಾರ್‌ ಅವರನ್ನು ಪ್ರಶ್ನಿಸಿತು.

ADVERTISEMENT

‘ಐವತ್ತು ವರ್ಷಗಳಿಂದ ಗಣಿ ಚಟುವಟಿಕೆಗೆ ಸಾಕ್ಷಿಯಾದ ಪ್ರದೇಶವನ್ನು ಈಗ ಅರಣ್ಯ ಭೂಮಿ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಯಾವುದೇ ನಿರ್ಧಾರ ಕೈಗೊಳ್ಳದಿರುವ ಅಧಿಕಾರಿಗಳ ವೈಫಲ್ಯ ಎದ್ದುಕಾಣುತ್ತಿದೆ. ನಾವು ಕಟುವಾದ ಶಬ್ದ ಬಳಸುವಂತೆ ಪ್ರೇರೇಪಿಸಲಾಗುತ್ತಿದೆ. ನ್ಯಾಯಾಲಯವೇ ನಿರ್ಧಾರ ಕೈಗೊಳ್ಳಲಿ ಎಂಬ ಧೋರಣೆಗೆ ಯಾರು ಹೊಣೆ’ ಎಂದು ನ್ಯಾಯಮೂರ್ತಿ ಕೃಷ್ಣ ಮುರಾರಿ ಅವರಿದ್ದ ಪೀಠ ತರಾಟೆಗೆ ತೆಗೆದುಕೊಂಡಿತು.

‘ಕಂದಾಯ ಭೂಮಿಯಲ್ಲೇ ಗಣಿಗಾರಿಕೆ ನಡೆಯುತ್ತಿದ್ದರೂ ಕೆಲ ಗಣಿ ಪ್ರದೇಶಗಳು ಅರಣ್ಯದ ವ್ಯಾಪ್ತಿಗೆ ಒಳಪಡುತ್ತವೆ ಎಂದು ಇಲಾಖೆ ಘೋಷಿಸಿರುವುದು ಏಕೆ’ ಎಂಬ ನ್ಯಾಯಪೀಠದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲ ದುಷ್ಯಂತ್‌ ದವೆ, ‘ಅರಣ್ಯ ಅಧಿಕಾರಿಗಳನ್ನು ಒಳಗೊಂಡ ಮೇಲ್ವಿಚಾರಣಾ ಸಮಿತಿಯು ನ್ಯಾಯಾಲಯದ ಆದೇಶ ಧಿಕ್ಕರಿಸುವ ಮೂಲಕ ಸವಾರಿ ನಡೆಸುತ್ತಿರುವಂತಿದೆ’ ಎಂದು ಅಭಿಪ್ರಾಯಪಟ್ಟರು.

ಅರಣ್ಯ ಭೂಮಿಯಲ್ಲಿ ಗಣಿಗಾರಿಕೆ ನಡೆಸಿದ ಆರೋಪದಲ್ಲಿ ಅರ್ಜಿದಾರರಿಗೆ ಈ ಹಿಂದೆ ಭಾರಿ ಪ್ರಮಾಣದ ದಂಡ ವಿಧಿಸಲಾಗಿದೆ ಎಂದು ಸಮಾಜ ಪರಿವರ್ತನ ಸಮುದಾಯದ ಪರ ವಕೀಲ ಪ್ರಶಾಂತ್‌ ಭೂಷಣ್‌ ವಿವರಿಸಿದರು.

ಗಣಿ ಚಟುವಟಿಕೆಯ ಪುನರಾರಂಭಕ್ಕೆ ಕ್ರಮ ಕೈಗೊಳ್ಳುವಂತೆ ನೀಡಲಾದ ಆದೇಶವನ್ನು ಪಾಲಿಸಬೇಕು. ಮುಂದಿನ ಹಂತದ ವಿಚಾರಣೆಯ ವೇಳೆ ಸೂಕ್ತ ನಿರ್ಧಾರ ಮತ್ತು ಕ್ರಮದೊಂದಿಗೆ ಹಾಜರಾಗುವಂತೆ ರಾಜ್ಯ ಸರ್ಕಾರದ ಪರ ವಕೀಲರಿಗೆ ಸೂಚಿಸಿದ ಪೀಠ, ಮಾರ್ಚ್‌ 16ಕ್ಕೆ ವಿಚಾರಣೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.