ADVERTISEMENT

ಒಟಿಟಿ ನಿಯಂತ್ರಣಕ್ಕಾಗಿ ಪಿಐಎಲ್‌: ಕೇಂದ್ರಕ್ಕೆ ಸುಪ್ರೀಂ ನೋಟಿಸ್‌

ಪಿಟಿಐ
Published 15 ಅಕ್ಟೋಬರ್ 2020, 10:31 IST
Last Updated 15 ಅಕ್ಟೋಬರ್ 2020, 10:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅಮೆಜಾನ್‌ ಪ್ರೈಮ್‌, ನೆಟ್‌ಫ್ಲಿಕ್ಸ್‌ ಸೇರಿದಂತೆ ಒವರ್ ದಿ ಟಾಪ್‌ (ಒಟಿಟಿ) ವೇದಿಕೆಯನ್ನು ಸ್ವಾಯತ್ತ ಸಂಸ್ಥೆಯೊಂದರ ನಿಯಂತ್ರಣಕ್ಕೆ ಒಳಪಡಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯಿಸುವಂತೆ ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್‌.ಬೊಪಣ್ಣ ಮತ್ತು ವಿ.ರಾಮಸುಬ್ರಹ್ಮಣ್ಯನ್ ಅವರನ್ನೊಳಗೊಂಡ ಪೀಠ ಈ ಸಂಬಂಧ ಕೇಂದ್ರ ಸರ್ಕಾರ, ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮತ್ತು ಇಂಟರ್ನೆಟ್‌ ಅಂಡ್‌ ಮೊಬೈಲ್ ಅಸೋಷಿಯೇಷನ್‌ ಆಫ್ ಇಂಡಿಯಾ ಸಂಸ್ಥೆಗಳಿಗೆ ನೋಟಿಸ್‌ ಜಾರಿ ಮಾಡಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ವಕೀಲ ಶಶಾಂಕ್ ಶೇಖರ್ ಝಾ ಮತ್ತು ಅಪೂರ್ವ ಅರ್ಹತಿಯಾ ಅವರು, ವಿವಿಧ ಒಟಿಟಿಗಳು/ಡಿಜಿಟಲ್ ಮಾಧ್ಯಮ ವೇದಿಕೆಗಳಲ್ಲಿ ಪ್ರಸಾರವಾಗುವ ಮಾಹಿತಿಯ ನಿರ್ವಹಣೆ ಮತ್ತು ನಿಯಂತ್ರಿಸಲು ಸಮರ್ಪಕವಾದ ಮಂಡಳಿ/ಸಂಸ್ಥೆ/ಸಂಘಟನೆ ರಚಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ADVERTISEMENT

‘ಸದ್ಯದ ಪರಿಸ್ಥಿತಿಯಲ್ಲಿ ದೇಶದಲ್ಲಿ ಚಿತ್ರಮಂದಿರಗಳು ತೆರೆಯುವ ಸಾಧ್ಯತೆ ಕಡಿಮೆ. ಈ ಕಾರಣದಿಂದ ಚಲನಚಿತ್ರ ತಯಾರಕರಿಗೆ ಯಾವುದೇ ಪ್ರಮಾಣ ಪತ್ರಗಳಿಲ್ಲದೇ ತಮ್ಮ ಚಿತ್ರಗಳನ್ನು ಒಟಿಟಿ / ಸ್ಟ್ರೀಮಿಂಗ್ ಮತ್ತು ವಿಭಿನ್ನ ಡಿಜಿಟಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬಹುದು. ಈ ಹಿನ್ನೆಲೆಯಲ್ಲಿ ಡಿಜಿಟಲ್ ವೇದಿಕೆಗಳನ್ನು ನಿಯಂತ್ರಿಸುವ ಸಂಸ್ಥೆಯ ಅಗತ್ಯವಿದೆ‘ ಎಂದು ಪಿಐಎಲ್‌ನಲ್ಲಿ ಉಲ್ಲೇಖಿಸಲಾಗಿದೆ.

‘ಪ್ರಸ್ತುತ ಈ ಡಿಜಿಟಲ್‌ ವೇದಿಕೆಯಲ್ಲಿ ಪ್ರಸಾರವಾಗುವ ವಿಷಯಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಣೆ ಮಾಡಲು ಯಾವುದೇ ಕಾನೂನು ಅಥವಾ ಸ್ವಾಯತ್ತ ಸಂಸ್ಥೆ ಇಲ್ಲ. ಹೀಗಾಗಿ ಮಾಹಿತಿಗಳು ಯಾವುದೇ ನಿಯಂತ್ರಣವಿಲ್ಲದೇ, ಸ್ಕ್ರೀನಿಂಗ್ ಇಲ್ಲದೇ, ಡಿಜಿಟಲ್ ವೇದಿಕೆಗಳ ಮೂಲಕ ಸಾರ್ವಜನಿಕರಿಗೆ ದೊಡ್ಡ ಪ್ರಮಾಣದಲ್ಲಿ ಲಭ್ಯವಾಗುತ್ತಿದೆ‘ ಎಂದು ಪಿಐಎಲ್‌ನಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.