
ನವದೆಹಲಿ: ಎನ್‌ಸಿಇ ಆರ್‌ಟಿಯ 8ನೇ ತರಗತಿ ಹೊಸ ಸಮಾಜವಿಜ್ಞಾನ ಪಠ್ಯಪುಸ್ತಕ ದಲ್ಲಿರುವ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ಅಧ್ಯಾಯ ಕುರಿತಂತೆ ಸುಪ್ರೀಂ ಕೋರ್ಟ್ ಬುಧವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
‘ಯಾವುದೇ ವ್ಯಕ್ತಿಯು ನ್ಯಾಯಾಂಗದ ಅವಹೇಳನ ಮಾಡುವು ದಕ್ಕೆ ಹಾಗೂ ಅದರ ಸಮಗ್ರತೆಗೆ ಧಕ್ಕೆ
ತರುವುದಕ್ಕೆ ನಾವು ಅವಕಾಶ ನೀಡುವು ದಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಕಟುವಾಗಿ ಹೇಳಿದ್ದಾರೆ.
ಈ ಬೆಳವಣಿಗೆ ಕುರಿತಂತೆ ಕೇಂದ್ರ ಸರ್ಕಾರ ಆಕ್ರೋಶಗೊಂಡಿದೆ ಎಂದು ಮೂಲಗಳು ಹೇಳಿವೆ.
ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್‌ಸಿಇಆರ್‌ಟಿ) ತನ್ನ ವೆಬ್‌ಸೈಟ್‌ನಿಂದ ಈ ಪುಸ್ತಕವನ್ನು ತೆಗೆದು ಹಾಕಿದೆ. ಜೊತೆಗೆ, ಈಗಾಗಲೇ ಮುದ್ರಣಗೊಂಡಿರುವ ಪಠ್ಯಪುಸ್ತಕ ಗಳಿಂದಲೂ ಈ ವಿವಾದಾತ್ಮಕ ಭಾಗಗಳನ್ನು ತೆಗೆಯಲು ಪರಿಷತ್ತು ಪರಿಗಣಿಸು ತ್ತಿದೆ ಎಂದು ಮೂಲಗಳು ತಿಳಿಸಿವೆ.
ಅಧ್ಯಾಯ–ಆಕ್ಷೇಪ: ನ್ಯಾಯಾಂಗ ಕುರಿತು ಎನ್‌ಸಿಇಆರ್‌ಟಿ ಪಠ್ಯಪುಸ್ತಕದಲ್ಲಿನ ‘ಆಕ್ಷೇಪಾರ್ಹ’ ಮಾಹಿತಿ ಬಗ್ಗೆ ಹಿರಿಯವಕೀಲರಾದ ಕಪಿಲ್ ಸಿಬಲ್ ಹಾಗೂ ಅಭಿಷೇಕ್ ಮನು ಸಿಂಘ್ವಿ ಪ್ರಸ್ತಾಪಿಸಿದ್ದರು. ಈ ವಿಷಯದ ವಿಚಾರಣೆಯನ್ನು ತುರ್ತಾಗಿ ನಡೆಸುವಂತೆಯೂ ಕೋರಿದ್ದರು.
ಇದನ್ನು ಪರಿಗಣಿಸಿದ, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಹಾಗೂ ವಿಪುಲ್ ಪಂಚೋಲಿ ಅವರು ಇದ್ದ ನ್ಯಾಯಪೀಠ, ವಿಷಯವನ್ನು ವಿಚಾರಣೆಗೆ ಪರಿಗಣಿಸಿದೆ.
ವಿಚಾರಣೆ ವೇಳೆ,‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಕುರಿತಂತೆ 8ನೇ ತರಗತಿ ಮಕ್ಕಳಿಗೆ ಬೋಧಿಸಲಾಗುತ್ತದೆ ಎಂಬ ವಿಚಾರ ತಿಳಿದು ನಮ್ಮ ಮನಸ್ಸು ಕದಡಿದೆ. ನಾವು ಕೂಡ ನ್ಯಾಯಾಂಗದ ಭಾಗೀ ದಾರರು. ಆದರೆ, ಈ ಪುಸ್ತಕದಲ್ಲಿನ ಅಂಶ ಗಳು ಮಾನಹಾನಿಕರವಾಗಿವೆ’ ಎಂದು ಕಪಿಲ್ ಸಿಬಲ್, ಪೀಠಕ್ಕೆ ತಿಳಿಸಿದರು.
‘ಈ ವಿಚಾರ ಕುರಿತು, ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸುವ ವಿಶ್ವಾಸ ಇದೆ’ ಎಂದು ಸಿಬಲ್ ಹೇಳಿದರು.
‘ಬೇರೆ ಯಾವ ಕ್ಷೇತ್ರದಲ್ಲಿಯೂ ಭ್ರಷ್ಟಾಚಾರ ಇಲ್ಲ ಎಂದು ಎನ್‌ಸಿಇಆರ್‌ಟಿ ಭಾವಿಸಿದಂತಿದೆ. ಅಧಿಕಾರಶಾಹಿ, ರಾಜಕೀಯ, ಸಾರ್ವಜನಿಕ ಜೀವನ ಹಾಗೂ ಇತರ ಸಂಸ್ಥೆಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ಒಂದೇ ಒಂದು ಶಬ್ದ ಕೂಡ ಈ ಅಧ್ಯಾಯದಲ್ಲಿ ಇಲ್ಲ’ ಎಂದು ಅಭಿಷೇಕ್ ಮನು ಸಿಂಘ್ವಿ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಸೂರ್ಯ ಕಾಂತ್,‘ಈ ವಿಚಾರದ ಸಂಪೂರ್ಣ ಅರಿವು ನಮಗಿದೆ. ಹಲವು ಹೈಕೋರ್ಟ್‌ಗಳ ನ್ಯಾಯಮೂರ್ತಿಗಳು ಕೂಡ ವಿಚಲಿತರಾಗಿದ್ದಾರೆ. ಹಲವರು ನಮಗೆ ಕರೆ ಮಾಡಿದ್ದಾರೆ, ಸಂದೇಶ ಗಳನ್ನೂ ಕಳುಹಿಸಿದ್ದಾರೆ’ ಎಂದರು.
‘ಈ ಕುರಿತು ಈಗಾಗಲೇ ನಾನು ಆದೇಶ ಹೊರಡಿಸಿರುವೆ. ಈ ವಿಚಾರ ವನ್ನು ಹೇಗೆ ನಿಭಾಯಿಸಬೇಕು ಎಂಬುದು ನನಗೆ ಗೊತ್ತು. ಯಾವುದೇ ಕಾರಣಕ್ಕೂ ನ್ಯಾಯಾಂಗದ ಅವಹೇಳನಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.
ಇದು ಬಹಳ ಲೆಕ್ಕಾಚಾರ ಹಾಗೂ ದೀರ್ಘ ಆಲೋಚನೆಯಿಂದ ಕೈಗೊಂಡ ಕ್ರಮದಂತೆ ಕಂಡುಬರುತ್ತಿದೆ. ಈ ಕುರಿತು ಹೆಚ್ಚಿಗೆ ಏನನ್ನೂ ಹೇಳಲು ಬಯಸುವುದಿಲ್ಲಸೂರ್ಯ ಕಾಂತ್, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ
‘ಭ್ರಷ್ಟಾಚಾರ, ಬಾಕಿ ಇರುವ ಪ್ರಕರಣಗಳು ಹಾಗೂ ಅಗತ್ಯ ಸಂಖ್ಯೆಯಷ್ಟು ನ್ಯಾಯಾಧೀಶರು/ನ್ಯಾಯಮೂರ್ತಿಗಳು ಇಲ್ಲ. ಇವು ದೇಶದ ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ಸವಾಲುಗಳು’ ಎಂದು ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಅಧ್ಯಾಯದಲ್ಲಿ ವಿವರಿಸಲಾಗಿದೆ.
‘ನ್ಯಾಯಾಧೀಶರು/ನ್ಯಾಯಮೂರ್ತಿಗಳು ನೀತಿ ಸಂಹಿತೆಯಂತೆಯೇ ನಡೆದುಕೊಳ್ಳಬೇಕು. ಅವರು, ನ್ಯಾಯಾಲಯದ ಒಳಗೆ ಮಾತ್ರವಲ್ಲ, ಹೊರಗಡೆಯೂ ಹೇಗೆ ವರ್ತಿಸಬೇಕು ಎಂಬುದನ್ನು ಈ ಸಂಹಿತೆ ವಿವರಿಸುತ್ತದೆ’ ಎಂದು ಹೇಳಲಾಗಿದೆ.
‘ಸುಪ್ರೀಂ ಕೋರ್ಟ್‌ನಲ್ಲಿ 81 ಸಾವಿರ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಹೈಕೋರ್ಟ್‌ಗಳಲ್ಲಿ ಇಂತಹ ಪ್ರಕರಣಗಳ ಸಂಖ್ಯೆ 62.40 ಲಕ್ಷ, ಜಿಲ್ಲಾ ಮತ್ತು ಅಧೀನ ಕೋರ್ಟ್‌ಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ 4.70 ಕೋಟಿ’ ಎಂದು ವಿವರಿಸಲಾಗಿದೆ.
ನ್ಯಾಯಾಂಗದಲ್ಲಿನ ಆಂತರಿಕ ಉತ್ತರದಾಯಿತ್ವದ ಬಗ್ಗೆ ಅಧ್ಯಾಯದಲ್ಲಿ ವಿವರಿಸಲಾಗಿದ್ದು, ಕೇಂದ್ರೀಕೃತ ಸಾರ್ವಜನಿಕ ವ್ಯಾಜ್ಯಗಳ ಪರಿಹಾರ ಮತ್ತು ಮೇಲ್ವಿಚಾರಣಾ ವ್ಯವಸ್ಥೆ(ಸಿಪಿಜಿಆರ್‌ಎಎಂಎಸ್) ಮೂಲಕ ದೂರುಗಳನ್ನು ಸ್ವೀಕರಿಸಲಾಗುತ್ತದೆ.
ಈ ವ್ಯವಸ್ಥೆ ಮೂಲಕ, 2017 ಮತ್ತು 2021ರ ಮಧ್ಯೆ 1,600 ದೂರುಗಳನ್ನು ಸಲ್ಲಿಸಲಾಗಿದೆ ಎಂದು ವಿವರಿಸಲಾಗಿದೆ.
‘ನ್ಯಾಯಾಂಗದಲ್ಲಿರುವ ಭ್ರಷ್ಟಾಚಾರ ಮತ್ತು ಅಶಿಸ್ತಿನ ನಡವಳಿಕೆಯ ಘಟನೆಗಳು ಈ ವ್ಯವಸ್ಥೆ ಕುರಿತು ಸಾರ್ವಜನಿಕರು ಹೊಂದಿರುವ ನಂಬಿಕೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ’ ಎಂದು ಮಾಜಿ ಸಿಜೆಐ ಬಿ.ಆರ್.ಗವಾಯಿ ಅವರು 2025ರ ಜುಲೈನಲ್ಲಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಅವರ ಈ ಹೇಳಿಕೆಯನ್ನು ಕೂಡ ಪಠ್ಯಪುಸ್ತಕದಲ್ಲಿ ಅಳವಡಿಸಲಾಗಿದೆ.
ಈ ಬೆಳವಣಿಗೆ ಬೆನ್ನಲ್ಲೇ, ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಎನ್‌ಸಿಇಆರ್‌ಟಿ ಹೇಳಿದೆ.
‘ಈ ಅಧ್ಯಾಯ ಸಿದ್ಧಪಡಿಸುವ ವೇಳೆ, ಶಿಫಾರಸುಗಳನ್ನು ಮಾಡಿರುವ ವಿಷಯತಜ್ಞರು ಹಾಗೂ ಅವುಗಳನ್ನು ಅನುಮೋದಿಸಿರುವ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮರುಪರಿಶೀಲನೆ ನಡೆಸಲಾಗುವುದು’ ಎಂದು ಪರಿಷತ್ತು ಹೇಳಿದೆ.
‘ಈ ವಿಚಾರವಾಗಿ ಎನ್‌ಸಿಇಆರ್‌ಟಿ ಅಧ್ಯಕ್ಷ ದಿನೇಶ್ ಪ್ರಸಾದ್ ಸಕ್ಲಾನಿ ಅವರು ಕರೆ ಸ್ವೀಕರಿಸಲಿಲ್ಲ ಹಾಗೂ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಲಿಲ್ಲ’ ಎಂದು ಪಿಟಿಐ ವರದಿ ಮಾಡಿದೆ.
‘ಈ ವಿಚಾರ ಸದ್ಯ ನ್ಯಾಯಾಲಯದಲ್ಲಿ ಇದೆ. ನ್ಯಾಯಾಂಗ ನಿಂದನೆಯಾಗುವ
ಕಾರಣ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಎನ್‌ಸಿಇಆರ್‌ಟಿಯ ಉನ್ನತ ಅಧಿಕಾರಿಯೊಬ್ಬರು
ಹೇಳಿದ್ದಾರೆ.
‘ಎನ್‌ಸಿಇಆರ್‌ಟಿ ಒಂದು ಸ್ವಾಯತ್ತ ಸಂಸ್ಥೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಅದರ ಅಧಿಕಾರಿಗಳು ತಮ್ಮ ವಿವೇಚನೆ ಬಳಸಿಯೇ ಈ ಅಧ್ಯಾಯಗಳನ್ನು ಸೇರ್ಪಡೆ ಮಾಡಿರುತ್ತಾರೆ’ ಎಂದು ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ.
‘ಭ್ರಷ್ಟಾಚಾರ ಕುರಿತ ವಿಚಾರವನ್ನು ಪಠ್ಯಪುಸ್ತಕಗಳಲ್ಲಿ ಸೇರ್ಪಡೆ ಮಾಡಬೇಕು ಎಂದಾದಲ್ಲಿ, ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗಕ್ಕೆ ಸಂಬಂಧಿಸಿದ ಮಾಹಿತಿಯನ್ನೂ ಅದು ಒಳಗೊಂಡಿರಬೇಕಿತ್ತು’ ಎಂದೂ ಹೇಳಿವೆ.
‘ನ್ಯಾಯಾಂಗದಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಮಾಹಿತಿಯು ಸಂಸತ್‌ನ ದಾಖಲೆಗಳು ಹಾಗೂ ರಾಷ್ಟ್ರೀಯ ನ್ಯಾಯಾಂಗ ಡೇಟಾ ಗ್ರಿಡ್‌ನಲ್ಲಿ ಲಭ್ಯ ಇದೆ. ಪಠ್ಯಪುಸ್ತಕದಲ್ಲಿ ಈ ಅಧ್ಯಾಯ ಸೇರ್ಪಡೆ ಮಾಡುವ ವೇಳೆ, ಕೇಂದ್ರ ಕಾನೂನು ಸಚಿವಾಲಯದೊಂದಿಗೆ ಸಮಾಲೋಚನೆ ನಡೆಸಿ, ಮಾಹಿತಿಯನ್ನು ದೃಢೀಕರಿಸಿಕೊಂಡಿಲ್ಲ’ ಎಂದು ಇವೇ ಮೂಲಗಳು ಹೇಳಿವೆ. ‘ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಕುರಿತಂತೆ ಮಾಜಿ ಸಿಜೆಐ ಬಿ.ಅರ್.ಗವಾಯಿ ಅವರು ಬೇರೆ ಸಂದರ್ಭದಲ್ಲಿ ಹೇಳಿದ್ದ ಮಾತನ್ನು ಈಗ ಪಠ್ಯದಲ್ಲಿ ಬಳಸಿಕೊಳ್ಳಲಾಗಿದೆ. ಈ ಬಗ್ಗೆ ಗವಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.