ADVERTISEMENT

ಜ್ಞಾನವಾಪಿ ಮಸೀದಿ ಸಮೀಕ್ಷೆ: ಏನೂ ಗೊತ್ತಿಲ್ಲದೆ ಆದೇಶ ನೀಡಲಾಗದು ಎಂದ ಸುಪ್ರೀಂ

ಪಿಟಿಐ
Published 13 ಮೇ 2022, 8:44 IST
Last Updated 13 ಮೇ 2022, 8:44 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ವಾರಾಣಸಿಯ ಜ್ಞಾನವಾಪಿ ಮಸೀದಿ ಆವರಣದೊಳಗೆ ಸಮೀಕ್ಷೆ, ವಿಡಿಯೊ ಚಿತ್ರೀಕರಣ ಮಾಡುವ ವಿಷಯಕ್ಕೆ ಸಂಬಂಧಿಸಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.

‘ನಮಗೆ ಪ್ರಕರಣದ ಹೆಚ್ಚಿನ ವಿವರ ತಿಳಿದಿಲ್ಲ. ನಾವು ಆದೇಶ ನೀಡಲು ಹೇಗೆ ಸಾಧ್ಯ?’ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರನ್ನೊಳಗೊಂಡ ಪೀಠವು ವಕೀಲ ಹುಜೆಫಾ ಅಫ್ಮದಿ ಅವರಿಗೆ ಹೇಳಿತು.

ಜ್ಞಾನವಾಪಿ ಮಸೀದಿಯು ‘ಪೂಜಾ ಸ್ಥಳಗಳ ಕಾಯ್ದೆ’ಯ ವ್ಯಾಪ್ತಿಯಲ್ಲಿ ಬರುತ್ತದೆ ಎಂದೂ ಅವರು ಹೇಳಿದರು.

‘ನಮಗೆ ಪ್ರಕರಣದ ಬಗ್ಗೆ ಮಾಹಿತಿ ಇಲ್ಲ. ದಾಖಲೆಗಳನ್ನು ನೋಡಲು ಅವಕಾಶ ನೀಡಿ. ನಾವದನ್ನು ಪರಿಗಣಿಸುತ್ತೇವೆ’ ಎಂದು ನ್ಯಾಯಪೀಠ ಹೇಳಿತು.

ಇವತ್ತೇ ಸಮೀಕ್ಷೆ, ವಿಡಿಯೊ ಚಿತ್ರೀಕರಣ ನಡೆಯಲಿದೆ ಎಂದು ವಕೀಲರು ತಿಳಿಸಿದ್ದರು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಆದೇಶ ನೀಡಲಾಗದು. ಪರಿಶೀಲಿಸಲಾಗುವುದು ಎಂದು ನ್ಯಾಯಪೀಠ ಹೇಳಿತು.

ಜ್ಞಾನವಾಪಿ ಮಸೀದಿ ಆವರಣದೊಳಗೆ ಸಮೀಕ್ಷೆ, ವಿಡಿಯೊ ಚಿತ್ರೀಕರಣ ಮಾಡುವುದಕ್ಕೆ ತಡೆನೀಡಬೇಕು ಎಂದು ವಾರಾಣಸಿಯ ಅಂಜುಮಾನ್ ಇ ಇಂತೆಜಾಮಿಯಾ ಮಸೀದಿಯ ಆಡಳಿತ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಸಮೀಕ್ಷೆ, ವಿಡಿಯೊ ಚಿತ್ರೀಕರಣ ಮುಂದುವರಿಯಲಿದೆ ಎಂದು ವಾರಾಣಸಿಯ ಸ್ಥಳೀಯ ನ್ಯಾಯಾಲಯ ಹೇಳಿದ ಬಳಿಕ ಈ ಮನವಿ ಸಲ್ಲಿಸಲಾಗಿತ್ತು.

ಮಸೀದಿ ಸ್ಥಳದ ಸಮೀಕ್ಷೆ ಮತ್ತು ವಿಡಿಯೊ ಚಿತ್ರೀಕರಣ ನಿಲ್ಲಿಸಲು ಆದೇಶಿಸಬೇಕು ಎಂದು ಕೋರಿದ್ದ ಅರ್ಜಿಯನ್ನು ಸ್ಥಳೀಯ ನ್ಯಾಯಾಲಯ ಗುರುವಾರ ತಿರಸ್ಕರಿಸಿತ್ತು.

ಏನಿದು ಜ್ಞಾನವಾಪಿ ಮಸೀದಿ ಪ್ರಕರಣ?

ವಾರಾಣಸಿಯ ಜ್ಞಾನವಾಪಿ ಮಸೀದಿಯ ಹೊರ ಗೋಡೆಗೆ ತಾಗಿಕೊಂಡೇ ಇರುವ ಶೃಂಗಾರ ಗೌರಿ, ಗಣೇಶ, ಹನುಮಾನ್‌ ಮತ್ತು ನಂದಿ ವಿಗ್ರಹಗಳಿಗೆ ಪೂಜೆ ನೆರವೇರಿಸುವುದಕ್ಕೆ ಅವಕಾಶ ನೀಡಬೇಕು ಎಂದು ಕೋರಿ ದೆಹಲಿ ಮೂಲದ ರಾಖಿ ಸಿಂಗ್‌, ಲಕ್ಷ್ಮಿ ದೇವಿ, ಸೀತಾ ಸಾಹು ಮತ್ತು ಇತರರು 2021ರ ಏಪ್ರಿಲ್‌ 21ರಂದು ವಾರಾಣಸಿಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇಲ್ಲಿನ ದೇವತಾ ವಿಗ್ರಹಗಳಿಗೆ ಯಾವುದೇ ಹಾನಿ ಉಂಟುಮಾಡದಂತೆ ಸೂಚಿಸಬೇಕು ಎಂದು ಕೋರಿದ್ದರು. ಈ ವಿಚಾರವಾಗಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಈದ್‌ ಹಬ್ಬದ ನಂತರ ಮತ್ತು ಮೇ 10 ರೊಳಗೆ ಕಾಶಿ ವಿಶ್ವನಾಥ ಮಂದಿರ– ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ವಿಡಿಯೊ ಚಿತ್ರೀಕರಣ ನಡೆಸುವಂತೆ ಏಪ್ರಿಲ್‌ 26 ರಂದು ಆದೇಶಿಸಿತ್ತು. ವಿಡಿಯೊ ಚಿತ್ರೀಕರಣದ ವೇಳೆ ಅಡ್ವೊಕೇಟ್ ಕಮಿಷನರ್‌, ಎರಡೂ ಕಡೆಯ ಕಕ್ಷಿದಾರರು ಮತ್ತು ಒಬ್ಬ ಸಹಾಯಕ ಮಾತ್ರ ಇರಬಹುದು ಎಂದು ತಿಳಿಸಲಾಗಿತ್ತು. ಇದರಂತೆ ಮೇ 6 ಮತ್ತು 7 ರಂದು ವಿಡಿಯೊ ಚಿತ್ರೀಕರಣ ನಡೆಸಲು ಉದ್ದೇಶಸಲಾಗಿತ್ತು. ಆದರೆ ವಿಡಿಯೊ ಚಿತ್ರೀಕರಣ ಮತ್ತು ಸಮೀಕ್ಷೆ ನಡೆಸಲು ಜ್ಞಾನವಾಪಿ ಮಸೀದಿ ಆಡಳಿತ ಮಂಡಳಿ ಅವಕಾಶ ನೀಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.