ADVERTISEMENT

ವಿಚಾರಣಾಧೀನ ವ್ಯಕ್ತಿಯನ್ನು ದೀರ್ಘಕಾಲ ಜೈಲಲ್ಲಿಡಬಾರದು: ಸುಪ್ರೀಂ ಕೋರ್ಟ್

ಪಿಟಿಐ
Published 6 ಜನವರಿ 2026, 16:21 IST
Last Updated 6 ಜನವರಿ 2026, 16:21 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಇನ್ನೂ ವಿಚಾರಣೆ ಆರಂಭವಾಗದ ಅಥವಾ ವಿಚಾರಣೆಯಲ್ಲಿ ಸರಿಯಾದ ಪ್ರಗತಿಯಿಲ್ಲದ ಸಂದರ್ಭಗಳಲ್ಲಿ ವಿಚಾರಣಾಧೀನ ವ್ಯಕ್ತಿಯನ್ನು ದೀರ್ಘಕಾಲದವರೆಗೆ ಜೈಲಲ್ಲಿಡುವುದನ್ನು ಒಪ್ಪಲಾಗದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

₹27 ಸಾವಿರ ಕೋಟಿ ಮೊತ್ತದ ಬ್ಯಾಂಕ್‌ ವಂಚನೆಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಅಮ್ಟೆಕ್‌ ಸಮೂಹದ ಮಾಜಿ ಅಧ್ಯಕ್ಷ ಅರವಿಂದ ಧಾಮ್‌ ಅವರಿಗೆ ಜಾಮೀನು ನೀಡುವಾಗ ನ್ಯಾಯಮೂರ್ತಿಗಳಾದ ಸಂಜಯ್‌ ಕುಮಾರ್‌ ಮತ್ತು ಅಲೋಕ್‌ ಆರಾಧೆ ಅವರ ಪೀಠ ಈ ಹೇಳಿಕೆ ನೀಡಿದೆ.

ಧಾಮ್‌ ಅವರಿಗೆ ಜಾಮೀನು ನಿರಾಕರಿಸಿ ದೆಹಲಿ ಹೈಕೋರ್ಟ್‌ 2025ರ ಆಗಸ್ಟ್‌ 19ರಂದು ನೀಡಿದ್ದ ಆದೇಶವನ್ನು ವಜಾಗೊಳಿಸಿದ ಪೀಠ, ‘ವಿಚಾರಣೆಪೂರ್ವ ಸುದೀರ್ಘ ಜೈಲುವಾಸವು ಶಿಕ್ಷೆಯ ಪರಿಣಾಮ ಉಂಟುಮಾಡುತ್ತದೆ’ ಎಂದು ಹೇಳಿತು.

ADVERTISEMENT

ಧಾಮ್ ಅವರನ್ನು 2024ರಲ್ಲಿ ಬಂಧಿಸಲಾಗಿತ್ತು ಎಂಬುದನ್ನು ಉಲ್ಲೇಖಿಸಿದ ಪೀಠ, ‘ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಸಾಕ್ಷ್ಯಗಳು ಈಗಾಗಲೇ ಪ್ರಾಸಿಕ್ಯೂಷನ್ ವಶದಲ್ಲಿವೆ. ಅಂತಹ ಸಂದರ್ಭದಲ್ಲಿ ಸುದೀರ್ಘ ಜೈಲುವಾಸವು ಸಂವಿಧಾನದ 21ನೇ ವಿಧಿಯು ಪ್ರತಿಯೊಬ್ಬರಿಗೂ ನೀಡಿರುವ ತ್ವರಿತ ವಿಚಾರಣೆಯ ಹಕ್ಕನ್ನು ಉಲ್ಲಂಘಿಸುತ್ತದೆ’ ಎಂದಿತು.

‘ಧಾಮ್‌ ಅವರು ಬಂಧನಕ್ಕೆ ಒಳಗಾಗುವ ಮುನ್ನವೇ ತನಿಖೆ ಎದುರಿಸಿದ್ದು, ತನಿಖಾಧಿಕಾರಿಗಳ ಜತೆ ಸಹಕರಿಸಿದ್ದರು. ಈ ಪ್ರಕರಣದಲ್ಲಿ 210 ಸಾಕ್ಷಿಗಳ ವಿಚಾರಣೆ ನಡೆಸಬೇಕಾಗಿದೆ. ಆದ್ದರಿಂದ, ವಿಚಾರಣೆ ಸದ್ಯಕ್ಕಂತೂ ಪೂರ್ಣಗೊಳ್ಳುವ ಸಾಧ್ಯತೆಯಿಲ್ಲ. ಈ ಪ್ರಕರಣದಲ್ಲಿ ಅಪರಾಧಿಗಳಿಗೆ ಗರಿಷ್ಠ ಏಳು ವರ್ಷ ಜೈಲು ವಿಧಿಸಬಹುದು. ಮೇಲ್ಮನವಿದಾರರು ಕಳೆದ 16 ತಿಂಗಳು 20 ದಿನಗಳಿಂದ ಜೈಲಿನಲ್ಲಿದ್ದಾರೆ’ ಎಂದು ಪೀಠ ಹೇಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.