ADVERTISEMENT

ಬಿಹಾರ: ಆ.9ರ ಒಳಗೆ ವಿವರ ಸಲ್ಲಿಸುವಂತೆ ಚು.ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

ಪಿಟಿಐ
Published 6 ಆಗಸ್ಟ್ 2025, 14:56 IST
Last Updated 6 ಆಗಸ್ಟ್ 2025, 14:56 IST
–
   

ನವದೆಹಲಿ: ಬಿಹಾರದಲ್ಲಿ ನಡೆದ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’(ಎಸ್‌ಐಆರ್‌) ನಂತರ, ಪಟ್ಟಿಯಿಂದ ಅಂದಾಜು 65 ಲಕ್ಷ ಮತದಾರರ ಹೆಸರು ತೆಗೆದು ಹಾಕಲಾಗಿದೆ. ಈ ಕುರಿತ ವಿವರಗಳನ್ನು ಆಗಸ್ಟ್‌ 9ರ ಒಳಗಾಗಿ ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಬುಧವಾರ ಸೂಚಿಸಿದೆ.

ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿರುವ ಮತದಾರರ ವಿವರಗಳನ್ನು ಈಗಾಗಲೇ ರಾಜಕೀಯ ಪಕ್ಷಗಳಿಗೆ ಒದಗಿಸಲಾಗಿದೆ. ಇದೇ ವಿವರಗಳಿರುವ ಪಟ್ಟಿಯ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಜೊತೆಗೆ, ಅಸೋಸಿಯೇಷನ್‌ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ಗೂ (ಎಡಿಆರ್‌) ನೀಡುವಂತೆ ಆಯೋಗದ ಪರ ವಕೀಲರಿಗೆ ಸೂಚಿಸಿದೆ.

ಬಿಹಾರದಲ್ಲಿ ‘ಎಸ್‌ಐಆರ್‌’ ಕೈಗೊಳ್ಳುವ ಕುರಿತು ಆಯೋಗವು ಜೂನ್‌ 24ರಂದು ಹೊರಡಿಸಿದ್ದ ಅದೇಶ ಪ್ರಶ್ನಿಸಿ ಎಡಿಆರ್‌ ಮೇಲ್ಮನವಿ ಸಲ್ಲಿಸಿತ್ತು.

ADVERTISEMENT

ಈಗ, ಆಯೋಗವು ತೆಗೆದುಹಾಕಿರುವ 65 ಲಕ್ಷ ಮತದಾರರ ಹೆಸರುಗಳನ್ನು ಬಹಿರಂಗಪಡಿಸಬೇಕು. ಜೊತೆಗೆ, ಈ ಮತದಾರರು ಮೃತಪಟ್ಟಿದ್ದಾರೆಯೇ?, ಶಾಶ್ವತವಾಗಿ ವಲಸೆ ಹೋಗಿದ್ದಾರೆಯೇ? ಅಥವಾ ಯಾವುದಾದರೂ ಕಾರಣಕ್ಕಾಗಿ ಅವರನ್ನು ಪರಿಗಣಿಸಿಲ್ಲವೇ ಎಂಬ ಮಾಹಿತಿಯನ್ನು ಕೂಡ ಉಲ್ಲೇಖಿಸುವಂತೆ ಆಯೋಗಕ್ಕೆ ಸೂಚನೆ ನೀಡಬೇಕು ಎಂದು ಕೋರಿ ಎಡಿಆರ್‌ ಹೊಸದಾಗಿ ಅರ್ಜಿ ಸಲ್ಲಿಸಿದೆ.

ನ್ಯಾಯಮೂರ್ತಿಗಳಾದ ಸೂರ್ಯಕಾಂತ, ಉಜ್ಜಲ್‌ ಭೂಯಾನ್‌ ಹಾಗೂ ಎನ್‌.ಕೋಟೀಶ್ವರ ಸಿಂಗ್ ಅವರು ಇದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ, ‘ಆಯೋಗವು ಪರಿಷ್ಕರಣೆ ನಂತರ ಈಗ ಕರಡು ಮತದಾರರ ಪಟ್ಟಿ ಪ್ರಕಟಿಸಿದೆ. ಪಟ್ಟಿಯಿಂದ ಮತದಾರರ ಹೆಸರುಗಳನ್ನು ಕೈಬಿಟ್ಟಿರುವುದಕ್ಕೆ ಏನು ಕಾರಣ ಎಂಬುದು, ಮುಂದೆ ವಿಚಾರಣೆ ವೇಳೆ ಪ್ರಸ್ತಾಪವಾಗಲಿದೆ’ ಎಂದು ಎಡಿಆರ್‌ ಪರ ಹಾಜರಿದ್ದ ಹಿರಿಯ ವಕೀಲ ಪ್ರಶಾಂತ ಭೂಷಣ್ ಉದ್ದೇಶಿಸಿ ಪೀಠ ಹೇಳಿತು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಶಾಂತ್ ಭೂಷಣ್, ‘ಕೆಲವು ರಾಜಕೀಯ ಪಕ್ಷಗಳಿಗೆ, ಪಟ್ಟಿಯಿಂದ ಕೈಬಿಟ್ಟಿರುವ ಮತದಾರರ ವಿವರಗಳನ್ನು ಆಯೋಗ ಒದಗಿಸಿದೆ. ಆದರೆ, ಅಂತಹ ಮತದಾರರು ಸತ್ತಿದ್ದಾರೆಯೋ ಅಥವಾ ವಲಸೆ ಹೋಗಿದ್ದಾರೋ ಎಂಬ ಬಗ್ಗೆ ಸ್ಪಷ್ಟನೆ ನೀಡಿಲ್ಲ’ ಎಂದು ಪೀಠಕ್ಕೆ ತಿಳಿಸಿದರು.

ಆಗ ಪೀಠವು, ಆಯೋಗದ ಪರ ವಕೀಲರನ್ನು ಉದ್ದೇಶಿಸಿ,‘ಈ ಪ್ರಕ್ರಿಯೆಯು ಪ್ರತಿಯೊಬ್ಬ ಮತದಾರನ ಮೇಲೂ ಪರಿಣಾಮ ಬೀರಲಿದೆ ಎಂಬುದು ನಮ್ಮ ಭಾವನೆ. ಹೀಗಾಗಿ, ಸಮಗ್ರ ವಿವರಗಳ ಸಮೇತ ಶನಿವಾರದ ಒಳಗಾಗಿ ಪ್ರತಿಕ್ರಿಯೆ ಸಲ್ಲಿಸಿ. ಅದನ್ನು ಪ್ರಶಾಂತ್ ಭೂಷಣ್ ಪರಿಶೀಲಿಸಲಿ. ನಂತರ, ಯಾವ ವಿವರಗಳನ್ನು ಬಹಿರಂಗಪಡಿಸಲಾಗಿದೆ ಮತ್ತು ಯಾವುದನ್ನು ಬಹಿರಂಗಪಡಿಸಲಾಗಿಲ್ಲ ಎಂಬುದನ್ನು ನಾವು ನೋಡಲು ಸಾಧ್ಯವಾಗಲಿದೆ’ ಎಂದು ಹೇಳಿತು.

12, 13ರಂದು ವಿಚಾರಣೆ

‘ಎಸ್‌ಐಆರ್‌’ ಕುರಿತು ಆಯೋಗವು ಹೊರಡಿಸಿರುವ ಆದೇಶ ಪ್ರಶ್ನಿಸಿ ಎಡಿಆರ್‌ ಹಾಗೂ ಇತರರು ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆಯನ್ನು ಆಗಸ್ಟ್‌ 12 ಹಾಗೂ 13ರಂದು ಆರಂಭಿಸುವುದಾಗಿ ಪೀಠ ಹೇಳಿದೆ. ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿ ತನ್ನ ಹೇಳಿಕೆ/ಆಕ್ಷೇಪಗಳನ್ನು ವಿಚಾರಣೆ ವೇಳೆ ಎಡಿಆರ್‌ ಸಲ್ಲಿಸಬಹುದು ಎಂದು ಪೀಠ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.