ADVERTISEMENT

ಜನಾರ್ದನ ರೆಡ್ಡಿ ಬಳ್ಳಾರಿ ಪ್ರವೇಶಕ್ಕೆ ಅನುಮತಿ: 8 ವಾರ ತಂಗಲು 'ಸುಪ್ರೀಂ' ಅವಕಾಶ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 11:40 IST
Last Updated 19 ಆಗಸ್ಟ್ 2021, 11:40 IST
ಗಾಲಿ ಜನಾರ್ದನ ರೆಡ್ಡಿ ಅವರ ಸಾಂದರ್ಭಿಕ ಚಿತ್ರ
ಗಾಲಿ ಜನಾರ್ದನ ರೆಡ್ಡಿ ಅವರ ಸಾಂದರ್ಭಿಕ ಚಿತ್ರ   

ನವದೆಹಲಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಬಳ್ಳಾರಿ ಭೇಟಿಗೆ ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ.

ಬಳ್ಳಾರಿ ಹಾಗೂ ಆಂಧ್ರದ ಅನಂತಪುರ ಮತ್ತು ಕಡಪ ಜಿಲ್ಲೆಗಳಿಗೆ ಭೇಟಿ ನೀಡದಂತೆ‌ ಜಾಮೀನು ನೀಡುವಾಗ ವಿಧಿಸಲಾಗಿದ್ದ ಷರತ್ತನ್ನು ಮಾರ್ಪಡಿಸುವುದಾಗಿ ನ್ಯಾಯಮೂರ್ತಿ ವಿನೀತ್ ಶರಣ್ ನೇತೃತ್ವದ‌ ಪೀಠ ಹೇಳಿದ್ದು, ಎಂಟು ವಾರಗಳ ಕಾಲ ತಮ್ಮ ಊರಾದ ಬಳ್ಳಾರಿಗೆ ರೆಡ್ಡಿ ಭೇಟಿ ನೀಡಬಹುದಾಗಿದೆ.

ಷರತ್ತು ಸಡಿಲಗೊಳಿಸುವಂತೆ‌ ಕೋರಿ ರೆಡ್ಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸಿಬಿಐ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಾಧವಿ ದಿವಾನ್, ಆರೋಪಿಗೆ ಬಳ್ಳಾರಿ ಪ್ರವೇಶಕ್ಕೆ ಅನುಮತಿ ನೀಡಿದರೆ, 47 ಜನ ಸಾಕ್ಷಿದಾರರು ಭಯಭೀತರಾಗಲಿದ್ದಾರೆ ಎಂದು ವಾದ ಮಂಡಿಸಿದರು.

ADVERTISEMENT

ರೆಡ್ಡಿ ಅನ್ಯರ ಗಣಿಗಳಲ್ಲಿ ಅಕ್ರಮ‌ ಗಣಿಗಾರಿಕೆ ಮಾಡಿದ್ದಾರೆ. ಸಾಕ್ಷಿಗಳನ್ನು ಬೆದರಿಸಿದರೆ ಪ್ರಕರಣವೇ ಬದಲಾಗುತ್ತದೆ‌. ಪ್ರಕರಣಕ್ಕೆ ಸಂಬಂಧಿಸಿದಂತೆ ರೆಡ್ಡಿ ಬೆದರಿಕೆ ಹಾಕಿದ್ದಾರೆಂದು ಈಗಾಗಲೇ ವ್ಯಕ್ತಿಯೊಬ್ಬರು ಪತ್ರ ಬರೆದು ದೂರಿದ್ದಾರೆ ಎಂದು ಅವರು ಪೀಠಕ್ಕೆ ತಿಳಿಸಿದರು.

ಅಲ್ಲದೆ, ಜಾಮೀನಿಗಾಗಿ ನ್ಯಾಯಾಧೀಶರಿಗೆ ಲಂಚ ನೀಡಿರುವ ಪ್ರಕರಣದಲ್ಲೂ ರೆಡ್ಡಿ ಆರೋಪಿಯಾಗಿದ್ದಾರೆ ಎಂದು ಅವರು ಹೇಳಿದರು.

ಸಿಬಿಐನ ಈ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೆಡ್ಡಿ ಪರ ವಕೀಲ ಮುಕುಲ್ ರೋಹಟ್ಗಿ, ಆರೋಪಿಯು ಇದುವರೆಗೆ ಜಾಮೀನಿನ ಷರತ್ತನ್ನು ಉಲ್ಲಂಘಿಸಿಲ್ಲ ಎಂದರು.

ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಜೈಲು ಪಾಲಾಗಿದ್ದ ಜನಾರ್ದನ ರೆಡ್ಡಿ ಅವರ ಬಳ್ಳಾರಿ ಜಿಲ್ಲೆಯ ಪ್ರವೇಶ ನಿರ್ಬಂಧಿಸಿ ನ್ಯಾಯಪೀಠವು 2015ರಲ್ಲಿ ಜಾಮೀನು ಮಂಜೂರು ಮಾಡಿತ್ತು.

ಪುತ್ರಿಯ ಮದುವೆ ಹಾಗೂ ಇತರ‌‌ ಸಂದರ್ಭ ರೆಡ್ಡಿ ಬಳ್ಳಾರಿ ಪ್ರವೇಶಕ್ಕೆ‌ ಪೀಠ ಈ ಹಿಂದೆ‌ ಅನುಮತಿ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.