ADVERTISEMENT

ಪೊಲೀಸರಿಂದ ಮಾಧ್ಯಮಗೋಷ್ಠಿ: ನೀತಿ ರೂಪಿಸಲು ಸುಪ್ರೀಂ ಕೋರ್ಟ್‌ ಸೂಚನೆ

ಪಿಟಿಐ
Published 21 ಜನವರಿ 2026, 15:53 IST
Last Updated 21 ಜನವರಿ 2026, 15:53 IST
–
   

ನವದೆಹಲಿ: ತನಿಖೆ ಪ್ರಗತಿಯಲ್ಲಿರುವ ಪ್ರಕರಣಗಳ ಕುರಿತು ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡುವ ವೇಳೆ ಅನುಸರಿಸಬೇಕಾದ ನಿಯಮಗಳಿಗೆ ಸಂಬಂಧಿಸಿ ನೀತಿಯೊಂದನ್ನು ರೂಪಿಸುವಂತೆ ಎಲ್ಲ ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

ಈ ವಿಚಾರಕ್ಕೆ ಸಂಬಂಧಿಸಿ ಅಮಿಕಸ್‌ ಕ್ಯೂರಿ(ನ್ಯಾಯಾಲಯಕ್ಕೆ ಸಹಕಾರ ನೀಡುವುದಕ್ಕಾಗಿ ನೇಮಕವಾದ ವಕೀಲ) ಸಿದ್ಧಪಡಿಸಿರುವ ಕೈಪಿಡಿಯನ್ನು ಪರಿಗಣಿಸಿದ ಬಳಿಕ ಸುಪ್ರೀಂ ಕೋರ್ಟ್‌ ಈ ಸೂಚನೆ ನೀಡಿದೆ.

ಈ ವಿಷಯ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್ ಹಾಗೂ ಎನ್‌.ಕೋಟೀಶ್ವರ ಸಿಂಗ್‌ ಅವರು ಇದ್ದ ನ್ಯಾಯಪೀಠ ನಡೆಸಿತು.

ADVERTISEMENT

‘ಅಮಿಕಸ್‌ ಕ್ಯೂರಿ ಗೋಪಾಲ ಶಂಕರನಾರಾಯಣನ್ ಅವರು ಬಹಳ ಶ್ರಮಪಟ್ಟಿದ್ದಾರೆ. ಕೇಂದ್ರ ಸರ್ಕಾರದ ಸಲಹೆಗಳು ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ರೂಢಿಯಲ್ಲಿರುವ ವಿಧಾನಗಳನ್ನು ಅವಲೋಕಿಸಿದ ಬಳಿಕ ಅವರು ಈ ಕೈಪಿಡಿಯನ್ನು ಸಿದ್ಧಪಡಿಸಿದ್ದಾರೆ’ ಎಂದು ಜನವರಿ 15ರಂದು ಹೊರಡಿಸಿರುವ ಆದೇಶದಲ್ಲಿ ನ್ಯಾಯಪೀಠ ಹೇಳಿದೆ.

ಅಪರಾಧ ಪ್ರಕರಣಗಳ ಕುರಿತು ಪೊಲೀಸ್‌ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡುವುದಕ್ಕೆ ಸಂಬಂಧಿಸಿ ಸಮಗ್ರ ಕೈಪಡಿ ಸಿದ್ಧಪಡಿಸುವಂತೆ ಗೃಹ ಇಲಾಖೆಗೆ ಸುಪ್ರೀಂ ಕೋರ್ಟ್‌ 2023ರಲ್ಲಿ ನಿರ್ದೇಶನ ನೀಡಿತ್ತು.

‘ಮಾಧ್ಯಮಗಳು ಪಕ್ಷಪಾತದಿಂದ ಕೂಡಿದ ವರದಿ ಪ್ರಕಟಿಸುವುದರಿಂದ, ವ್ಯಕ್ತಿಯೊಬ್ಬ ಅಪರಾಧ ಎಸಗಿದ್ದಾನೆ ಎಂಬ ಶಂಕೆ ಸಾರ್ವಜನಿಕರಲ್ಲಿ ಮೂಡುತ್ತದೆ. ಮಾಧ್ಯಮಗಳು ಪ್ರಕಟಿಸುವ ವರದಿಗಳಿಂದ ಸಂತ್ರಸ್ತ ವ್ಯಕ್ತಿಯ ಖಾಸಗಿತನದ ಉಲ್ಲಂಘನೆಯೂ ಆಗುತ್ತದೆ’ ಎಂದು ಸುಪ್ರೀಂ ಕೋರ್ಟ್‌ ಆಗ ಅಭಿಪ್ರಾಯಪಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.