ADVERTISEMENT

ಪತ್ರಕರ್ತರ ಬಂಧಿಸದಂತೆ ಪೊಲೀಸರಿಗೆ ಸುಪ್ರೀಂ ಕೋರ್ಟ್‌ ಸೂಚನೆ

ಪಿಟಿಐ
Published 22 ಆಗಸ್ಟ್ 2025, 14:33 IST
Last Updated 22 ಆಗಸ್ಟ್ 2025, 14:33 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ‘ದಿ ವೈರ್‌’ನ ಸ್ಥಾಪಕ ಸಂಪಾದಕ ಸಿದ್ದಾರ್ಥ್‌ ವರದರಾಜನ್‌ ಮತ್ತು ಕನ್ಸಲ್ಟಿಂಗ್‌ ಸಂಪಾದಕ ಕರಣ್‌ ಥಾಪರ್‌ ಅವರನ್ನು ಬಂಧಿಸಬಾರದು ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಅಸ್ಸಾಂ ಪೊಲೀಸರಿಗೆ ಸೂಚಿಸಿದೆ.

‘ಅಪರೇಷನ್‌ ಸಿಂಧೂರ’ ಕುರಿತು ‘ದಿ ವೈರ್‌’ನಲ್ಲಿ ಪ್ರಕಟಗೊಂಡ ಲೇಖನಗಳು ಮತ್ತು ಸಂದರ್ಶನಕ್ಕೆ ಸಂಬಂಧಿಸಿದಂತೆ ಅಸ್ಸಾಂ ಪೊಲೀಸರು ಇವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ತಮ್ಮ ವಿರುದ್ದದ ಸಮನ್ಸ್‌ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠ ಈ ಆದೇಶ ಹೊರಡಿಸಿದೆ.

ಪತ್ರಕರ್ತರ ಪರ ಹಾಜರಾದ ಹಿರಿಯ ವಕೀಲೆ ನಿತ್ಯಾ ರಾಮಕೃಷ್ಣನ್ ಅವರು, ಅಸ್ಸಾಂ ಪೊಲೀಸರು ನ್ಯಾಯಾಲಯದ ಆದೇಶದಿಂದ ನುಣುಚಿಕೊಳ್ಳಲು ವಿವಿಧ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ ಎಂದು ಪೀಠಕ್ಕೆ ದೂರಿದರು.

ADVERTISEMENT

ಮೊರಿಗಾಂವ್ ಪೊಲೀಸರು ದಾಖಲಿಸಿದ ಎಫ್ಐಆರ್‌ಗೆ ಸಂಬಂಧಿಸಿದಂತೆ ನ್ಯಾಯಾಲಯವು ಪತ್ರಕರ್ತರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಆದೇಶಿಸಿದೆ. ಆದರೂ, ಗುವಾಹಟಿ ಪೊಲೀಸ್‌ ಅಪರಾಧ ವಿಭಾಗವು ದಾಖಲಿಸಿರುವ ಮತ್ತೊಂದು ಪ್ರಕರಣದಲ್ಲಿ ಪತ್ರಕರ್ತರಿಗೆ ಸಮನ್ಸ್ ಜಾರಿ ಮಾಡಲಾಗಿದೆ ಎಂದು ವಾದಿಸಿದರು.

ಮೇ ತಿಂಗಳಲ್ಲಿ ದಾಖಲಾಗಿದ್ದ ಹಳೆಯ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಹೇಳಿಕೆಗಳನ್ನು ದಾಖಲಿಸಲು ಪತ್ರಕರ್ತರನ್ನು ಶುಕ್ರವಾರ ಕರೆಸಲಾಗಿದೆ. ಈ ವೇಳೆ ಅವರನ್ನು ಬಂಧಿಸುವ ಸಾಧ್ಯತೆಯೂ ಇತ್ತು ಎಂದು ಹೇಳಿದರು.

ಈ ಇಬ್ಬರ ವಿರುದ್ಧ ಇನ್ನಷ್ಟು ಎಫ್‌ಐಆರ್‌ಗಳನ್ನು ದಾಖಲಿಸಿ ಬಂಧಿಸುವ ಪ್ರಯತ್ನ ನಡೆಯಬಹುದು ಎಂದು ವಕೀಲರು ಹೇಳಿದಾಗ, ಪೀಠವು ‘ನಾವು ಎಲ್ಲವನ್ನೂ ಗಮನಿಸುತ್ತಿದ್ದೇವೆ’ ಎಂದಿತು.

ಪತ್ರಕರ್ತರನ್ನು ಬಂಧಿಸಬಾರದು ಎಂದು ಆದೇಶಿಸಿದ ಪೀಠ, ಎಲ್ಲರೂ ಕಾನೂನನ್ನು ಪಾಲಿಸುವ ನಿರೀಕ್ಷೆಯಿದೆ ಎಂದು ಹೇಳಿತು. ತನಿಖೆಗೆ ಸಹಕರಿಸುವಂತೆ ಪತ್ರಕರ್ತರಿಗೆ ಸೂಚಿಸಿದ ಪೀಠ, ವಿಚಾರಣೆಯನ್ನು ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.