ADVERTISEMENT

ಕೆಮ್ಮಿನ ‘ಕಲುಷಿತ’ ಸಿರಪ್‌: ಸಿಬಿಐ ತನಿಖೆಗೆ ಕೋರಿ ಸಲ್ಲಿಸಲಾಗಿದ್ದ ಪಿಐಎಲ್‌ ವಜಾ

ಪಿಟಿಐ
Published 10 ಅಕ್ಟೋಬರ್ 2025, 13:37 IST
Last Updated 10 ಅಕ್ಟೋಬರ್ 2025, 13:37 IST
   

ನವದೆಹಲಿ: ಕೆಮ್ಮಿನ ‘ಕಲುಷಿತ’ ಸಿರಪ್‌ ಸೇವಿಸಿ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಮಕ್ಕಳು ಮೃತಪಟ್ಟ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಬಿ.ಆರ್‌. ಗವಾಯಿ, ನ್ಯಾಯಮೂರ್ತಿ ಉಜ್ಜಲ್‌ ಭುಯಾನ್‌, ಕೆ. ವಿನೋದ್‌ ಚಂದ್ರನ್‌ ಅವರನ್ನೊಳಗೊಂಡ ಪೀಠವು, ವಕೀಲ ವಿಶಾಲ್ ತಿವಾರಿ ಸಲ್ಲಿಸಿದ್ದ ಪಿಐಎಲ್‌ ವಜಾಗೊಳಿಸುವ ಮುನ್ನ ಸಾಲಿಸಿಟರ್‌ ಜನರಲ್ ತುಷಾರ್ ಮೆಹ್ತಾ ಅವರ ವಾದವನ್ನು ಆಲಿಸಿತು. ಸಾಲಿಸಿಟರ್‌ ಜನರಲ್‌ ಪಿಐಎಲ್‌ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. 

‘ಸದ್ಯ ಈ ಪ್ರಕರಣದಲ್ಲಿ ಮಧ್ಯಪ್ರದೇಶ, ತಮಿಳುನಾಡು ಅಥವಾ ಇತರೆ ರಾಜ್ಯವನ್ನು ಪ್ರತಿನಿಧಿಸಿ ನಾನು ಕೋರ್ಟ್‌ಗೆ ಬಂದಿಲ್ಲ. ಆದರೆ, ‘ಕಲುಷಿತ’ ಸಿರಪ್‌ ವಿಷಯದಲ್ಲಿ ಈಗಾಗಲೇ ಈ ರಾಜ್ಯಗಳು ತೆಗೆದುಕೊಂಡಿರುವ ಕ್ರಮಗಳನ್ನು ದುರ್ಬಲಗೊಳಿಸುವುದು ಸರಿಯಲ್ಲ. ಅಲ್ಲಿ ಕಾನೂನು ಜಾರಿ ವಿಧಾನಗಳು ಸಮರ್ಪಕವಾಗಿದೆ’ ಎಂದು ಸಾಲಿಸಿಟರ್‌ ಜನರಲ್‌ ನ್ಯಾಯಪೀಠಕ್ಕೆ ಅರುಹಿದರು.

ADVERTISEMENT

ಆರಂಭದಲ್ಲಿ ನೋಟಿಸ್‌ ಜಾರಿಗೊಳಿಸುವ ಬಗ್ಗೆ ಪೀಠ ಅಭಿಪ್ರಾಯ ವ್ಯಕ್ತಪಡಿಸಿತಾದರೂ, ಸಾಲಿಸಿಟರ್‌ ಜನರಲ್‌ ಆಕ್ಷೇಪದ ನಂತರ, ಪಿಐಎಲ್‌ ತಿರಸ್ಕರಿಸಿರುವುದಾಗಿ ಪ್ರಕಟಿಸಿತು. ‘ಅರ್ಜಿದಾರರು ದಿನಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿ ಓದಿ, ಕೋರ್ಟ್‌ಗೆ ಧಾವಿಸಿದ್ದಾರೆ’ ಎಂದು ನ್ಯಾಯಪೀಠ ಹೇಳಿತು.

‘ಸಿಬಿಐ ತನಿಖೆಯ ಜತೆಗೆ ಔಷಧ ಸುರಕ್ಷತಾ ಕಾರ್ಯವಿಧಾನಗಳಲ್ಲಿ ವ್ಯವಸ್ಥಿತ ಬದಲಾವಣೆ’ ತರುವಂತೆಯೂ ಅರ್ಜಿದಾರರು ಕೋರಿದರು. ಅರ್ಜಿದಾರರನ್ನು ಉದ್ದೇಶಿಸಿ, ‘ನೀವು  ಇದುವರೆಗೆ ಸುಪ್ರೀಂಕೋರ್ಟ್‌ನಲ್ಲಿ ಇಂತಹ ಎಷ್ಟು ಪಿಐಎಲ್‌ ಸಲ್ಲಿಸಿದ್ದೀರಾ’ ಎಂದು ನ್ಯಾಯಪೀಠ ಪ್ರಶ್ನಿಸಿತು. ಇದಕ್ಕೆ ವಕೀಲ ತಿವಾರಿ, ‘8ರಿಂದ 10’ ಎಂದು ಉತ್ತರಿಸಿದರು. ತಕ್ಷಣವೇ ನ್ಯಾಯಪೀಠ, ‘ಪಿಐಎಲ್‌ ವಜಾಗೊಳಿಸಲಾಗಿದೆ’ ಎಂದು ಪ್ರಕಟಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.