
ನವದೆಹಲಿ: ಭಾರತದಲ್ಲಿ ವಾಸಿಸುತ್ತಿರುವ ರೋಹಿಂಗ್ಯಾಗಳ ಕಾನೂನು ಸ್ಥಿತಿ ಕುರಿತು ಮಂಗಳವಾರ ಪ್ರಶ್ನಿಸಿದ ಸುಪ್ರೀಂ ಕೋರ್ಟ್, ‘ದೇಶದ ಸ್ವಂತ ನಾಗರಿಕರು ಬಡತನದಿಂದ ಬಳಲುತ್ತಿರುವಾಗ ನುಸುಳುಕೋರರಿಗೆ ಕೆಂಪು ಹಾಸಿನ ಸ್ವಾಗತ ನೀಡಬೇಕೇ’ ಎಂದು ಕೇಳಿದೆ.
ಅಧಿಕಾರಿಗಳ ವಶದಲ್ಲಿದ್ದ ಕೆಲ ರೋಹಿಂಗ್ಯಾಗಳು ಕಣ್ಮರೆಯಾಗಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠ ಅಭಿಪ್ರಾಯ ವ್ಯಕ್ತಪಡಿಸಿತು.
‘ಅವರಿಗೆ ಭಾರತದಲ್ಲಿ ಉಳಿಯಲು ಕಾನೂನಿನ ಮಾನ್ಯತೆಯಿಲ್ಲ. ಉತ್ತರ ಭಾರತದಲ್ಲಿ ಬಹಳ ಸೂಕ್ಷ್ಮವಾದ ಗಡಿಗಳಿವೆ. ಅಲ್ಲಿಂದ ನುಸುಳಿ ಬರುವವರಿಗೆ ಕೆಂಪು ಹಾಸಿನ ಸ್ವಾಗತ ನೀಡಬೇಕೇ’ ಎಂದು ಸಿಜೆಐ ಕೇಳಿದರು. ‘ಅವರನ್ನು ವಾಪಸ್ ಕಳುಹಿಸಲು ಸಮಸ್ಯೆ ಏನು’ ಎಂದು ಕೇಳಿದರು.
‘ಭಾರತ ಬಹಳಷ್ಟು ಬಡವರನ್ನು ಹೊಂದಿರುವ ದೇಶ. ನಾವು ಇಲ್ಲಿ ಅವರ ಏಳಿಗೆಗೆ ಗಮನ ಹರಿಸಬೇಕೇ ಹೊರತು ನುಸುಳುಕೋರರ ಬಗ್ಗೆಯಲ್ಲ’ ಎಂದು ಹೇಳಿದ ಪೀಠ, ವಿಚಾರಣೆಯನ್ನು ಇದೇ 16ಕ್ಕೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.