ADVERTISEMENT

ಮುಷ್ಕರ ವಕೀಲರ ಮೂಲಭೂತ ಹಕ್ಕಲ್ಲ: ಸುಪ್ರೀಂ ಕೋರ್ಟ್‌

ನ್ಯಾಯಾಲಯ ಬಹಿಷ್ಕಾರ ಕಕ್ಷಿದಾರರ ಹಕ್ಕಿನ ಉಲ್ಲಂಘನೆ: ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 19:35 IST
Last Updated 28 ಫೆಬ್ರುವರಿ 2020, 19:35 IST

ನವದೆಹಲಿ: ಮುಷ್ಕರ ನಡೆಸುವುದು ಅಥವಾ ನ್ಯಾಯಾಲಯದ ಕಲಾಪ ಬಹಿಷ್ಕರಿಸುವುದು ಮೂಲಭೂತ ಹಕ್ಕು ಎಂದು ವಕೀಲರು ಹೇಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಘೋಷಿಸಿದೆ. ತ್ವರಿತವಾಗಿ ನ್ಯಾಯ ಪಡೆಯುವ ಹಕ್ಕನ್ನು ಸಂವಿಧಾನವು ಕಕ್ಷಿದಾರರಿಗೆ ನೀಡಿದೆ. ಹಾಗಾಗಿ, ಒಂದು ವೇಳೆ, ವಕೀಲರಿಗೆ ಮುಷ್ಕರದ ಹಕ್ಕು ಇದ್ದರೂ ಅದನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ವಕೀಲರು ಆಗಾಗ ಮುಷ್ಕರ ನಡೆಸುತ್ತಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ, ನ್ಯಾಯಮೂರ್ತಿಗಳಾದ ಅರುಣ್‌ಮಿಶ್ರಾ ಮತ್ತು ಎಂ.ಆರ್.ಶಾ ಅವರ ಪೀಠವು ಸ್ವಯಂಪ್ರೇರಿತವಾಗಿ ಈ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ವಕೀಲರ ಮುಷ್ಕರದ ಸಮಸ್ಯೆಯ ಪರಿಹಾರಕ್ಕೆ ಮಾರ್ಗೋಪಾಯಗಳನ್ನು ಸೂಚಿಸುವಂತೆ ಭಾರತೀಯ ವಕೀಲರ ಸಂಘ ಮತ್ತು ರಾಜ್ಯಗಳ ವಕೀಲರ ಸಂಘಗಳಿಗೆ ತಿಳಿಸಿದೆ.

ತಾಲ್ಲೂಕು, ಜಿಲ್ಲೆ, ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಮಟ್ಟದಲ್ಲಿ ದೂರು ಪರಿಹಾರ ಸಮಿತಿಗಳನ್ನು ರಚಿಸುವುದಾಗಿ ಭಾರತೀಯ ವಕೀಲರ ಸಂಘವು 2002ರ ಸೆಪ್ಟೆಂಬರ್‌ನಲ್ಲಿ ನಿರ್ಣಯ ಅಂಗೀಕರಿಸಿದೆ. ವಕೀಲರು ಮುಷ್ಕರ ನಡೆಸಬಾರದು ಎಂದು ಈಹಿಂದೆ ತೀರ್ಪುಗಳೂ ಬಂದಿವೆ. ಹಾಗಿದ್ದರೂ, ವಕೀಲರು ಮುಷ್ಕರ ನಡೆಸುತ್ತಿದ್ದಾರೆ ಎಂದು ಪೀಠ ಹೇಳಿದೆ.

ADVERTISEMENT

‘ಭಾರತೀಯ ವಕೀಲರ ಸಂಘ ಮತ್ತು ರಾಜ್ಯಗಳ ವಕೀಲರ ಸಂಘಗಳು ಮಧ್ಯಪ್ರವೇಶಿಸಿ, ಕ್ರಮಗಳನ್ನು ಕೈಗೊಳ್ಳುವುದಕ್ಕೆ ಕಾಲ ಸನ್ನಿಹಿತವಾಗಿದೆ. ವೃತ್ತಿಪರವಲ್ಲದ ಮತ್ತು ವಕೀಲರ ಘನತೆಗೆ ತಕ್ಕುದಲ್ಲದ ರೀತಿಯಲ್ಲಿ ವರ್ತಿಸದಿರುವುದು ವಕೀಲರ ಕರ್ತವ್ಯ’ ಎಂದೂ ಪೀಠ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.